ADVERTISEMENT

ವಾಚಕರ ವಾಣಿ | ಸಂಕಷ್ಟದ ಸ್ಥಿತಿ ಸದುಪಯೋಗವಾಗಲಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 16:20 IST
Last Updated 6 ಆಗಸ್ಟ್ 2020, 16:20 IST

‘ಹಮ್ಮು ಬಿಟ್ಟು ಕೂಲಿಗಿಳಿದರು’ ವಿಶೇಷ ವರದಿಯು (ಪ್ರ.ವಾ., ಆ. 2) ಒಂದು ವಿಧದಲ್ಲಿ ಖುಷಿ ಕೊಟ್ಟರೂ ಒಡನೆಯೇ ವೇದನೆಗೂ ಎಡೆ ಮಾಡಿಕೊಡುತ್ತದೆ. ಏನೇನೋ ಕನಸು ಹೊತ್ತು ವಿದ್ಯಾಭ್ಯಾಸ ಮುಗಿಸಿ, ನಗರಕ್ಕೆ ಬಂದು, ಕೈತುಂಬಾ ಸಂಬಳ ಪಡೆದು ಖುಷಿಪಟ್ಟ ಯುವಜನರ ಪಾಲಿಗೆ ಕೊರೊನಾ ಸೋಂಕು ಮುಳುವಾಗಿದೆ. ಕೆಲಸವಿಲ್ಲದೆ ಅಥವಾ ಇದ್ದ ಕೆಲಸ ಕಳೆದುಕೊಂಡ ಬಹುಮಂದಿ ಯುವಕ, ಯುವತಿಯರು ಈ ಮುಂಚೆ ತಾವು ತೊರೆದ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈಚಿನ ವರ್ಷಗಳಲ್ಲಿ ಯುವಪೀಳಿಗೆ ಹೆಚ್ಚಾಗಿ ಕಾಣುತ್ತಿರಲಿಲ್ಲ. ಪ್ರತೀ ಮನೆಯಲ್ಲೂ ಬಹುಪಾಲು ವೃದ್ಧರೇ ಇರುವಂತಾಗಿತ್ತು. ಬೇಸಾಯದ ಭೂಮಿ ಬೀಳುಬಿದ್ದಿತ್ತು. ಇದೀಗ ವಿದ್ಯಾವಂತ ಯುವಪೀಳಿಗೆಯು ಬೀಳುಬಿದ್ದ ಜಮೀನಿನಲ್ಲಿ ಕೃಷಿ ಕಾರ್ಯದ ಸಂಕಲ್ಪ ಮಾಡಿದೆ.

ಇವರಲ್ಲಿ ಅನೇಕರು ಇನ್ನು ಮುಂದೆ ಇದನ್ನೇ ಮುಂದುವರಿಸಲು ನಿರ್ಧರಿಸಿರುವಂತಿದೆ. ಇನ್ನು ಕೆಲವರು ಶ್ರಮದ ಕೆಲಸವೇ ಗೌರವ ಎಂದು ನರೇಗಾ ಅಡಿ ದುಡಿಮೆ ಮಾಡತೊಡಗಿದ್ದಾರೆ. ನಗರ ಜೀವನದ ಪೊಳ್ಳುತನದಿಂದ ಈ ಮಂದಿ ಅಷ್ಟರಮಟ್ಟಿಗೆ ಬಿಡುಗಡೆ ಪಡೆದಿದ್ದಾರೆ. ಯುವಪೀಳಿಗೆ ಬಂದಿರುವ ಕಾರಣ ಗ್ರಾಮಗಳು ಮತ್ತೆ ತಮ್ಮ ಹಿಂದಿನ ಜೀವಂತಿಕೆ ಪಡೆಯುವಂತಾಗಿದೆ. ಅಷ್ಟೆಲ್ಲ ಓದಿಯೂ ಈ ಕೆಲಸವೇ ಎನ್ನುವ ಕೊರಗು ಯುವಕರಿಗೆ ಬಂದರೆ ಅದು ತೀರಾ ಸಹಜ. ಆದರೇನು, ಗದ್ದೆ ಹೊಲಗಳಲ್ಲಿ ದುಡಿಯುವುದರ ಜೊತೆಗೇ ತಾವು ಕಲಿತುದನ್ನು ಅಲ್ಲೇ ಇದ್ದು ಹೇಗೆ ಸದುಪಯೋಗಪಡಿಸಿಕೊಂಡು ತಮ್ಮ ಗ್ರಾಮದ ಮುನ್ನಡೆಗೆ ಶ್ರಮಿಸಬಹುದು ಎಂದು ಯುವಪೀಳಿಗೆ ಯೋಚಿಸಿ, ಯೋಜನೆಗಳನ್ನು ರೂಪಿಸಲು ಸಾಧ್ಯವಿದೆ ಅಲ್ಲವೇ? ಸರ್ಕಾರದ ನೆರವು ಸಹ ಇವರ ಆಸೆ ಆಕಾಂಕ್ಷೆಗಳಿಗೆ ಇಂಬು ಕೊಡಬಹುದು. ಬಂದೆರಗುವ ಸಂಕಷ್ಟದ ಪರಿಸ್ಥಿತಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕೆ, ಬಹುಶಃ ಇದೀಗ ಒಳ್ಳೆಯ ಅವಕಾಶ. ಇದೊಂದು ಸವಾಲು ಕೂಡ.

-ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.