ADVERTISEMENT

13 ಜನ ಬುದ್ಧಿವಂತರ ಕಥೆ...

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:30 IST
Last Updated 21 ಡಿಸೆಂಬರ್ 2021, 19:30 IST

ಗಣಿತ ವಿಷಯವನ್ನು ಕಲಿಸುವುದರ ಬಗ್ಗೆ ಯೋಗಾನಂದ ಅವರು (ಸಂಗತ, ಡಿ. 21) ಕೆಲವು ಮುಖ್ಯ ವಿಷಯ ಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ಕಲಿಕೆಯ ಕ್ರಮದಲ್ಲಿ ಇರುವ ದೋಷವನ್ನು ಗುರುತಿಸಿದ್ದಾರೆ. ಆರಂಭಿಕ ಶಿಕ್ಷಣದಲ್ಲಿ ಮಕ್ಕಳಿಗೆ ಏನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎಂಬುದರ ಬಗ್ಗೆ ನಮ್ಮಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ, ಸೂಕ್ತ ತರಬೇತಿಯೂ ಇಲ್ಲ. ಮಕ್ಕಳಿಗೆ ಐದನೇ ತರಗತಿಯವರೆಗೆ ಭಾಷೆ ಮತ್ತು ಗಣಿತವನ್ನು ಕಲಿಸುವುದರ ಬಗ್ಗೆಯೇ ಹೆಚ್ಚು ಆಸಕ್ತಿಯನ್ನು ವಹಿಸಬೇಕು. ಉಳಿದ ವಿಷಯಗಳು ಕೇವಲ ನಲಿ-ಕಲಿ ಭಾಗವಾಗಿಯೋ ಇಲ್ಲವೇ ಪ್ರಾಯೋಗಿಕವಾಗಿಯೋ ಮಾತ್ರ ಇರಬೇಕು. ಬದಲಿಗೆ ಇಲ್ಲಿ ಅನಗತ್ಯ ವಿಚಾರಗಳನ್ನೇ ತುಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಹಂತದಲ್ಲಿ ಮಕ್ಕಳಿಗೆ ಗಣಿತ ಮತ್ತು ಭಾಷೆಯನ್ನು ಸಮರ್ಪಕವಾಗಿ ಕಲಿಸಿದರೆ ಮುಂದೆ ಅದರಲ್ಲಿ ಅರಿಯಲು, ತಿಳಿಯಲು ಸಾದ್ಯವಾಗುತ್ತದೆ.

ಗಣಿತ ಮತ್ತು ಭಾಷೆಗೆ ಒಂದು ಸಮಾನವಾದ ಹೋಲಿಕೆಯಿದೆ. ಭಾಷೆಯಲ್ಲಿ ಕೆಲವೇ ಅಕ್ಷರಗಳ ಮೂಲಕ, ಉದಾಹರಣೆಗೆ ಕನ್ನಡದಲ್ಲಿ ಇರುವ 47 ಅಕ್ಷರಗಳ ಮೂಲಕ ಅಮಿತ ಪದಗಳನ್ನು ಮತ್ತು ವಾಕ್ಯಗಳನ್ನು ರಚಿಸಬಹುದು. ಅಂತೆಯೇ ಗಣಿತದಲ್ಲಿ ಮಿತ ಸಂಖ್ಯೆಗಳಿಂದ ಅಮಿತ ಅಭಿವ್ಯಕ್ತಿಗಳನ್ನು, ಪ್ರಯೋಗಗಳನ್ನು ಮಾಡಬಹುದು. ಇದನ್ನು ಭಾಷೆಯಲ್ಲಿ ಅಕ್ಷರ, ಪದ, ವಾಕ್ಯ ಮುಂತಾದವುಗಳನ್ನು ಉಲಿ ಮತ್ತು ಲಿಪಿಯಲ್ಲಿ ಬಳಕೆ ಮಾಡುವುದನ್ನು ತಿಳಿದುಕೊಳ್ಳುತ್ತ ಹೋಗಬಹುದು. ಅಂತೆಯೇ ಗಣಿತದಲ್ಲಿ ಸಂಖ್ಯೆಗಳನ್ನು ಕೂಡುವುದು, ಕಳೆಯುವುದು, ಗುಣಿಸುವುದು ಮುಂತಾದವುಗಳನ್ನು ಕಲಿಯುತ್ತಾ ಪೂರ್ಣತೆಯತ್ತ ಸಾಗಬಹುದು. ಕನ್ನಡ ಭಾಷೆಗೆ ಇದು ಹೆಚ್ಚು ಒಗ್ಗುತ್ತದೆ. ಒಮ್ಮೆ ಕನ್ನಡ ಕಾಗುಣಿತ ಕಲಿತ ಮೇಲೆ ಮುಂದೆ ಯಾವುದೇ ಪದಗಳನ್ನು ಕಲಿಯಲು, ಬರೆಯಲು ಸಾಧ್ಯವಾಗುತ್ತದೆ. ಏಕೆಂದರೆ ಕನ್ನಡದಲ್ಲಿ ಉಲಿ ಮತ್ತು ಲಿಪಿಗೆ ಹೆಚ್ಚು ವ್ಯತಾಸ ಇಲ್ಲ. ಇಂಗ್ಲಿಷ್ ಭಾಷೆಯಲ್ಲಿ ಹೀಗಿಲ್ಲ. ಒಂದು ಅಕ್ಷರಕ್ಕೆ ಸುಮಾರು ಏಳೆಂಟು ಉಚ್ಚಾರಣೆಗಳು ಇದೆ. ನಮ್ಮ ಜನಪದದಲ್ಲಿ ಗಣಿತವನ್ನು ಕಲಿಯಲು ಕೆಲವು ವಿಶೇಷ ಕ್ರಮಗಳಿವೆ. ಉದಾಹರಣೆಗೆ, 13 ಜನ ಬುದ್ಧಿವಂತರ ಕಥೆ. ಇಂಥವುಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ.

-ಡಾ. ಎಚ್.ಟಿ.ಕೃಷ್ಣಮೂರ್ತಿ, ತನಿಕೊಡು, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.