ADVERTISEMENT

ವಿದ್ಯಾರ್ಥಿಗಳ ಪರೀಕ್ಷೆಗೆ ಮಾಧ್ಯಮಗಳ ಜವಾಬ್ದಾರಿ: ಕೆರಳುವ ಮುನ್ನವೇ ಅರಳಿಸಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:31 IST
Last Updated 7 ಫೆಬ್ರುವರಿ 2019, 19:31 IST

ಮಕ್ಕಳಿಗೆ ಶಾಲಾ ಕಾಲೇಜು ಪರೀಕ್ಷೆಗಳು ಸಮೀಪಿಸುತ್ತಿವೆ. ಪರೀಕ್ಷಾ ಫಲಿತಾಂಶ ಬಂದ ಮೇಲೆ, ಫೇಲಾದ ಕಾರಣಕ್ಕೆ ಅಥವಾ ನಿರೀಕ್ಷಿತ ಮಟ್ಟದಲ್ಲಿ ಅಂಕಗಳು ಬಂದಿಲ್ಲವೆಂದು ಕೆಲವರು ತಮ್ಮ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಅತಿರೇಕಕ್ಕೆ ಹೋಗುತ್ತಾರೆ. ಇಂತಹ ವರದಿಗಳನ್ನು ದೃಶ್ಯ ಮಾಧ್ಯಮಗಳು ಹೆಚ್ಚಿನ ಒತ್ತು ಕೊಟ್ಟು ಪ್ರಸಾರ ಮಾಡುತ್ತವೆ. ಪ್ರಸಾರ ಮಾಡುವುದು ತಪ್ಪಲ್ಲ. ಆದರೆ ಪರೀಕ್ಷೆಯ ತಯಾರಿ, ಕ್ಲಿಷ್ಟಕರ ವಿಷಯಗಳನ್ನು ವಿಷಯ ತಜ್ಞರಿಂದ ಅರ್ಥೈಸುವ ಕಾರ್ಯಕ್ರಮಗಳು, ಪರೀಕ್ಷಾ ಒತ್ತಡವನ್ನು ಎದುರಿಸುವ ಬಗೆ, ಪರೀಕ್ಷೆ ಬರೆಯುವ ತಂತ್ರಗಳು, ಮಕ್ಕಳು ಮತ್ತು ಪೋಷಕರು ಪರೀಕ್ಷಾ ಸಮಯದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯಂತಹ ವಿಷಯಗಳ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡಲು ಬಹುತೇಕ ಚಾನೆಲ್‌ಗಳು ಮುಂದಾಗುವುದಿಲ್ಲ. ರಾಜಕೀಯ ಸುದ್ದಿಗಳು, ಜ್ಯೋತಿಷ್ಯ, ಹೊಡೆದಾಟ, ಕೊಲೆ, ಅತ್ಯಾಚಾರ‌, ಚಲನಚಿತ್ರದಂತಹ ವಿಷಯಗಳಿಗೇ ಹೆಚ್ಚು ಆದ್ಯತೆ ದೊರೆಯುತ್ತದೆ. ಮನಸ್ಸನ್ನು ಅರಳಿಸುವಂತಹ ಕೆಲವು ಕಾರ್ಯಕ್ರಮಗಳು ಪ್ರಸಾರವಾಗುತ್ತವೆಯಾದರೂ, ಮನಸ್ಸನ್ನು ಕೆರಳಿಸುವಂತಹ ಕಾರ್ಯಕ್ರಮಗಳಿಗೆ ಹೋಲಿಸಿದರೆ ಅವುಗಳ ಸಂಖ್ಯೆ ನಗಣ್ಯ. ‘ಅಟ್ಟ ಮೇಲೆ ಒಲೆ ಉರೀತು, ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ, ವಿದ್ಯಾರ್ಥಿಗಳ ಸಾವಿನ ನಂತರ ಅದಕ್ಕೆ ಕಾರಣಗಳನ್ನು ವಿಶ್ಲೇಷಿಸುವ ಬದಲು, ಅವರ ಫಲಿತಾಂಶ ವೃದ್ಧಿಸಲು ನೆರವಾಗುವ ಕಾರ್ಯಕ್ರಮಗಳನ್ನು ಮೊದಲೇ ಪ್ರಸಾರ ಮಾಡಲಿ.

–ಬಸವನಗೌಡ ಹೆಬ್ಬಳಗೆರೆ,ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT