ADVERTISEMENT

ಹೊಲಿ ನಿನ್ನ ತುಟಿಗಳನು....

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:54 IST
Last Updated 5 ಆಗಸ್ಟ್ 2019, 19:54 IST

ಚರ್ಚೆಯೇ ಪ್ರಜಾಪ್ರಭುತ್ವದ ತಿರುಳು. ವಿಷಯದ ಸರಿಯಾದ ಗ್ರಹಿಕೆ, ಭಾಷೆಯ ಮೇಲೆಹಿಡಿತ, ಪ್ರತಿಸ್ಪರ್ಧಿ ಮಂಡಿಸಿದ ವಾದಕ್ಕೆ ಸ್ಫುಟವಾದಪ್ರತಿವಾದ ಉತ್ತಮ ಚರ್ಚೆಯ ಲಕ್ಷಣಗಳು.ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳ ಕಡೆಗೊಮ್ಮೆ ನೋಡಿದರೆ, ಅರ್ಥವಿಲ್ಲದ ಟೊಳ್ಳು ಸಮರ್ಥನೆಗಳೇ ಕಂಡುಬರುತ್ತವೆ. ಇದನ್ನೇ ಸಾಮಾನ್ಯರೂ ಅನುಕರಿಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯಿಂದ ರಾಜ್ಯಕ್ಕಾದ ಉಪಯೋಗವೇನು? ನಮ್ಮ ರಾಜಕಾರಣಿಗಳು ಎಂದಾದರೂ ಒಂದು ವಾರ ಕಾಲ ಬರ- ನೆರೆಯ ಬಗ್ಗೆ ಚರ್ಚಿಸಿದ್ದನ್ನು ನಾವು ಕಂಡಿದ್ದೇವೆಯೇ? ಈಚೆಗೆ ಸುದ್ದಿವಾಹಿನಿಯೊಂದು, ‘ಸರ್ಕಾರವು ಕಾರ್ಪೊರೇಟ್ ವಲಯದ ಸಾಲ ಮನ್ನಾ ಮಾಡಿದರೆ ಕೆಲವು ದುಷ್ಟರು ಬಾಯಿ ಬಡಿದುಕೊಳ್ತಾರೆ. ಸಿಸಿಡಿಯ ಸಾಲ ಮನ್ನಾ ಮಾಡಿದ್ದರೆ ಇಂದು ಸಿದ್ಧಾರ್ಥ ಅವರ ಸಾವನ್ನು ತಪ್ಪಿಸಬಹುದಿತ್ತು’ ಎಂದಿತು. ಇನ್ನು ಸಾಮಾಜಿಕ ಜಾಲತಾಣದಲ್ಲಿ, ಜೊಮ್ಯಾಟೊ ತನ್ನ ಡೆಲಿವರಿ ಹುಡುಗನನ್ನು ಸಮರ್ಥಿಸಿಕೊಂಡಿದ್ದಕ್ಕೆ, ‘ಹಲಾಲ್ ಯಾಕೆ? ಇವರ್‍ಯಾಕೆ ಆ ಮಾಂಸ ಸೇವಿಸೋದಿಲ್ಲ? ಅವರ್‍ಯಾಕೆ ಈ ಮಾಂಸ ಸೇವಿಸ್ತಾರೆ?’ ಎಂಬಲ್ಲಿಗೆ ಚರ್ಚೆ ಹೋಗಿ ನಿಂತಿದೆ. ಈ ಯಾವುದೇ ಚರ್ಚೆಯಲ್ಲಿ ಹುರುಳಿದೆಯೇ? ಒಂದು ಪುಟ್ಟ ಚಹಾ ಅಂಗಡಿ ನಿರ್ವಹಿಸುವುದೇ ಗೊತ್ತಿರದ ನಮಗೆಲ್ಲಾ, ಸಾವಿರಾರು ಕೋಟಿ ವ್ಯವಹಾರದ ಬಗ್ಗೆ ಮಾತನಾಡುವ ಬಾಯಿ ಚಪಲ ಏಕೆ?

ಹೀಗೆ ಮಾತು ಢಾಳಾಗಿ, ಮೌನ ಮರೆಯಾಗಿ, ಚರ್ಚೆ ಬೊಬ್ಬೆಯಾಗಿ ಮಾರ್ಪಡುತ್ತಿರುವ ಈ ಕಾಲಕ್ಕೆ, ಡಿ.ವಿ.ಜಿ. ಅವರ ಕಗ್ಗದ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂಬ ಉಕ್ತಿಗಳು ದಾರಿ ತೋರಬೇಕಿದೆ. ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ, ಪತ್ರಿಕೆ- ಸುದ್ದಿ ವಾಹಿನಿ, ಕಡೆಗೆ ಸಂಸತ್ತಿನಲ್ಲಿ ಮುಕ್ತ ಮತ್ತು ವಿವೇಕಯುತಚರ್ಚೆಗಳು ನಡೆದು ಮಾತಿಗೊಂದು ಅರ್ಥ ದೊರಕಬೇಕಿದೆ.

ADVERTISEMENT

-ಪ್ರೀತಮ್ ಪಾಯ್ಸ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.