ರಾಜ್ಯದ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಿರುವ ಮ್ಯಾನೇಜ್‍ಮೆಂಟ್ ಸೀಟುಗಳಿಗೆ ಅರ್ಹರಾಗಿರುವ ಹಲವು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾಫ್ಟ್‌ವೇರ್ ಅವಾಂತರದಿಂದಾಗಿ ಅವಕಾಶ ವಂಚಿತರಾಗಿದ್ದಾರೆ. ಇದರಿಂದ ಕಂಗಾಲಾಗಿರುವ ವಿದ್ಯಾರ್ಥಿಗಳು ಮತ್ತು ಪಾಲಕರು ಹೆಲ್ಪ್‌ಲೈನ್ ಸೆಂಟರ್‌ಗಳಲ್ಲಿ ಗೋಳಿಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
ಪ್ರಾಧಿಕಾರವೇ ಮಾಹಿತಿ ಕೈಪಿಡಿಯಲ್ಲಿ ಹೇಳಿಕೊಂಡಂತೆ, ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಅಭ್ಯರ್ಥಿಗಳು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಹಶೀಲ್ದಾರ್ ಅವರಿಂದ ‘ಧಾರ್ಮಿಕ ಅಲ್ಪಸಂಖ್ಯಾತ’ ದೃಢೀಕರಣ ಪತ್ರ ಹೊಂದಿದ್ದರೆ ಸಾಕು. ಆದರೆ, ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 10 ವರ್ಷ ಕರ್ನಾಟಕದಲ್ಲೇ ಅಭ್ಯಾಸ ಮಾಡಿರಬೇಕು ಹಾಗೂ ಶಾಲಾ ದಾಖಲೆಗಳಲ್ಲಿ ಅವರ ಮಾತೃಭಾಷೆ (ತುಳು, ಕೊಡವ, ತೆಲುಗು, ತಮಿಳು ಮುಂತಾಗಿ) ನಮೂದಾಗಿರಬೇಕು. ವ್ಯಾಸಂಗ ಪ್ರಮಾಣಪತ್ರದ ಜೊತೆಗೆ ತಹಶೀಲ್ದಾರರಿಂದ ದೃಢೀಕರಣ ಪತ್ರ ಮತ್ತು ನಿಗದಿತ ನಮೂನೆಯಲ್ಲಿ ಅಫಿಡವಿಟ್ ಅನ್ನು ಹಾಜರುಪಡಿಸಬೇಕು. ಈ ನಿಯಮ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನ್ವಯವಾಗದಿದ್ದರೂ, ಕರ್ನಾಟಕದಲ್ಲಿ 10 ವರ್ಷ ಅಭ್ಯಾಸ ಮಾಡಿಲ್ಲ ಎಂಬ ಕಾರಣ ನೀಡಿ, ಅನೇಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಅವಕಾಶವನ್ನು ನಿರಾಕರಿಸಲಾಗಿದೆ.
ಸಂಜೆ ಬನ್ನಿ, ನಾಳೆ ಬನ್ನಿ, ಸರಿಯಾಗಬಹುದು ಎಂಬುದಾಗಿ ಕೆಲವು ನೋಡಲ್ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದರೆ, ಹೆಲ್ಪ್‌ಲೈನ್ ಕೇಂದ್ರಗಳ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕಾ
ರಿಗಳಿಗೆ ದೂರು ನೀಡಿದ್ದರೂ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ. ಪ್ರಾಧಿಕಾರವು ತುರ್ತು ಕ್ರಮ ಕೈಗೊಂಡು, ಅವಕಾಶ ವಂಚಿತ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.