ADVERTISEMENT

ವಾಚಕರ ವಾಣಿ: ‘ಮಿಶ್ರ–ಪತಿ’ಗಳು ಎನ್ನಬೇಕೇ?

ವಾಚಕರ ವಾಣಿ
Published 4 ಆಗಸ್ಟ್ 2025, 18:46 IST
Last Updated 4 ಆಗಸ್ಟ್ 2025, 18:46 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

‘ಮಿಶ್ರ–ಪತಿ’ಗಳು ಎನ್ನಬೇಕೇ?

ಖುಷಿಯಿಂದ ಚಪಾತಿ ತಿನ್ನಬಹುದು. ಅಂತೆಯೇ, ಉಪ್ಪಿಟ್ಟನ್ನೂ ಸವಿಯಬಹುದು. ಇವೆರಡನ್ನೂ ಮಿಶ್ರಣ ಮಾಡಿ ಬಡಿಸಿದರೆ ಏನಾಗಲಿದೆ? ಇದು ತುಸು ‘ತಲೆಹರಟೆ’, ಕಲ್ಪನೆ ಅನಿಸಬಹುದು. ಕೇಂದ್ರ ಸ್ವಾಸ್ಥ್ಯ ಸಚಿವಾಲಯದ ಹೊಸ ಯೋಜನೆಯು ಇಂತಹದ್ದೇ ಆಗಿದೆ. ಎಂಬಿಬಿಎಸ್ ಜತೆಯಲ್ಲಿ ಬಿಎಎಂಎಸ್ ಕೋರ್ಸ್‌ ಅನ್ನುಮಿಶ್ರಣ ಮಾಡಿ ಒಂದು ವೈದ್ಯಕೀಯ ಪದವಿ ಶಿಕ್ಷಣ ಆರಂಭಿಸುವ ತುರಾತುರಿ ಯಲ್ಲಿದೆ! ಈ ಶಿಕ್ಷಣ ಪಡೆಯುವ ಪದವೀಧರರು ಮತ್ತು ವೈದ್ಯರನ್ನು
‘ಮಿಶ್ರ-ಪತಿ’ಗಳು ಎಂದು ಕರೆಯಬೇಕೇ?

ಸಿದ್ಧ, ಆಯುರ್ವೇದ, ಯುನಾನಿ, ಅಲೋಪತಿ, ಹೋಮಿಯೊಪತಿ – ಈ ಒಂದೊಂದು ವೈದ್ಯಕೀಯ ಪದ್ಧತಿಯೂ ದೀರ್ಘಕಾಲದ ಅವಧಿಯಲ್ಲಿ ವಿಕಸನ ಹೊಂದಿ, ಪ್ರತ್ಯೇಕ ಅಸ್ಮಿತೆ ಹೊಂದಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಈಗಲಾದರೂ ವಸ್ತುಸ್ಥಿತಿ ಮನಗಂಡು, ಪರಿಣತರಲ್ಲದ ವೈದ್ಯರನ್ನು ಸೃಷ್ಟಿಸುವ ಯತ್ನವನ್ನು ಕೈಬಿಡುವುದು ಒಳಿತು.

ADVERTISEMENT

–ಡಿ.ವಿ. ಮೋಹನ ಪ್ರಕಾಶ್, ಮೈಸೂರು 

ಹತ್ತಿದ ಏಣಿ ಒದೆಯಬೇಡಿ

‘ದೇಶದ ಚುನಾವಣಾ ವ್ಯವಸ್ಥೆಯು ಈಗಾಗಲೇ ಸತ್ತು ಹೋಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಸತ್ತಿರುವ ಚುನಾವಣಾ ವ್ಯವಸ್ಥೆ ಯಲ್ಲೂ ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದಿದೆ. ರಾಹುಲ್‌ ಸಹೋದರಿ ಪ್ರಿಯಾಂಕಾ ಗಾಂಧಿ, ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಚುನಾಯಿತ ರಾಗಿದ್ದಾರೆ. ‘ಎಷ್ಟೇ ಎತ್ತರಕ್ಕೇರಿದರೂ ಹತ್ತಿದ ಏಣಿ ಒದೆಯಬೇಡಿ’ ಎಂಬ ನಾಣ್ಣುಡಿಯನ್ನು ರಾಹುಲ್‌ ನೆನಪಿಸಿಕೊಳ್ಳಬೇಕು.

–ವೇದಾಂತ್, ಬೆಂಗಳೂರು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಬೆಂಗಳೂರಿನಲ್ಲಿ ಆರೋಪಿಗಳಿಬ್ಬರು ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ನಂತರ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಅವನನ್ನು ಕೊಂದು ಸುಟ್ಟು ಹಾಕಿರುವ ಸುದ್ದಿ ಓದಿ ದಿಗ್ಭ್ರಮೆಯಾಯಿತು. ಒಮ್ಮೊಮ್ಮೆ ಕ್ರೂರಮೃಗಗಳೇ ಕ್ರೂರಿಗಳಾಗದ ನಿದರ್ಶನವಿದೆ. ಆದರೆ, ಬಾಲಕನನ್ನು ಕೊಂದ ಆರೋಪಿಗಳ ಮನಃಸ್ಥಿತಿ ಎಂತಹದ್ದಿರಬೇಕು? ಆರೋಪಿಗಳ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿ. 

–ಮಂಜುನಾಥ್ ಪಾಯಣ್ಣ, ಮಂಡ್ಯ 

ತುರುಗಾಹಿ ರಾಮಣ್ಣನ ನೆನಪು

‘ದನಕಾಯೋನು ಅನ್ನಬೇಡಿ. ಆತನ ಗಳಿಕೆಯನ್ನೊಮ್ಮೆ ನೋಡಿ!’
(ಪ್ರ.ವಾ., ಆಗಸ್ಟ್‌ 3) ವರದಿ ಓದಿದಾಗ ಶರಣರಲ್ಲಿ ಒಬ್ಬರಾದ ‘ತುರುಗಾಹಿ ರಾಮಣ್ಣ’ನವರ; ‘ಹಸುವ ಕಾವಲ್ಲಿ ದೆಸೆಯನರಿತು, ಎತ್ತ ಕಾವಲ್ಲಿ ಪೃಥ್ವಿಯನರಿದು, ಕರುವ ಕಟ್ಟುವಲ್ಲಿ ಗೊತ್ತ ಕಂಡು, ಧನವ ಕಾವಲ್ಲಿ ಸಜ್ಜನನಾಗಿ, ಜೀವಧನವ ಕಂಡಲ್ಲಿ ಮನ ಮುಟ್ಟದೆ!’ ವಚನ ನೆನಪಾಯಿತು.  ಶರಣರು ದನ ಕಾಯುವ ಕಾಯಕದ ಅನುಭವವನ್ನು ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಬೆರೆಸಿ ಹೇಳಿರುವ ವಚನ ಇದಾಗಿದೆ.

‘ಹಸುವನ್ನು ಕಾಯುವಾಗ ಅದು ಯಾವ ದಿಕ್ಕಿಗೆ ಹೋಗುತ್ತಿದೆ ಎಂದು ಅರಿಯಬೇಕು. ಎತ್ತು ಯಾವ ಜಾಗದಲ್ಲಿ ಮೇಯುತ್ತದೆ, ಯಾವ ಜಾಗದಲ್ಲಿ ವಿಶ್ರಮಿಸುತ್ತದೆ ಎಂದು ಗಮನಿಸಬೇಕು. ಕರುವನ್ನು ಕಟ್ಟುವಾಗ ಅದು ಕಟ್ಟಿದ ಜಾಗದಲ್ಲಿಯೇ ಇರಲು ಕಲಿತುಕೊಳ್ಳಬೇಕು. ಅದು ಜ್ಞಾನದ ಸಂಕೇತ. ಧನವನ್ನು ಅಂದರೆ ಪ್ರಾಣಿಗಳನ್ನು ಕಾಯುವಾಗ ಸಜ್ಜನನಾಗಿರಬೇಕು. ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜೀವ ಮತ್ತು ಧನವನ್ನು ಕಂಡಾಗ ಮನಸ್ಸು ಚಂಚಲವಾಗ
ಬಾರದು’ ಎಂಬುದನ್ನು ಗೋಪಾಲಕರು ಅರಿತುಕೊಳ್ಳಬೇಕು ಎನ್ನುತ್ತಾರೆ ಶರಣರು.

–ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

‘ಅಹಿಂಸೆ’ ಗಾಂಧಿಯ ಅತಿದೊಡ್ಡ ಕೊಡುಗೆ

‘ಅಹಿಂಸೆ ದೌರ್ಬಲ್ಯವಲ್ಲ, ಅನಿವಾರ್ಯ’ ಲೇಖನದಲ್ಲಿ (ಲೇ: ಅರವಿಂದ ಚೊಕ್ಕಾಡಿ, ಪ್ರ.ವಾ., ಆಗಸ್ಟ್‌ 2) ಬ್ರಿಟಿಷರ ವಿರುದ್ಧ ಗಾಂಧಿಯ ಅಹಿಂಸಾತ್ಮಕ ಹೋರಾಟವನ್ನು ಅನಿವಾರ್ಯವಾಗಿತ್ತು ಎಂದು ಹೇಳಲಾಗಿದೆ. ಗಾಂಧೀಜಿ, ಅಹಿಂಸೆ ಮತ್ತು ಸತ್ಯಾಗ್ರಹವನ್ನು ಮಾನವ ಸಮಾಜದ ಬಲವಾದ ಆಯುಧಗಳೆಂಬುದನ್ನು ಕಂಡುಕೊಂಡಿದ್ದರು. ಅವು ಬ್ರಿಟಿಷರ ಬಾಹುಬಲಕ್ಕೆ ಹೇಸಿ ಸೃಷ್ಟಿಯಾದ ಯುದ್ಧ ತಂತ್ರಗಳಲ್ಲ. ಮಾನವ ಸಮಾಜ ಸತ್ಯ ಮತ್ತು ಅಹಿಂಸೆಯಿಂದ ಮಾತ್ರ ನಾಗರಿಕರಾಗ ಬಹುದು ಎಂಬುದನ್ನು ಮನಗಂಡಿದ್ದರು. ಅವರು ವೆಸ್ಟ್ ಮಿನಿಸ್ಟರ್ ಮೇಲಿನ ದಾಳಿ ಖಂಡಿಸಿದ್ದು ಅವರೊಳಗಿದ್ದ ಸಕಲ ಮಾನವರೂ ಕ್ಷೇಮದಿಂದ ಇರಬೇಕೆಂಬ ಹಂಬಲದಿಂದ. ಗಾಂಧಿಯವರ ಅಹಿಂಸೆ ಎಂಬ ದಿವ್ಯ ಮೌಲ್ಯ
ಅನಿವಾರ್ಯವಾದದ್ದಲ್ಲ; ಅವಶ್ಯಕವಾದದ್ದು.⇒

–ಧನಂಜಯ್‌ ಡಿ. ಮೂರ್ತಿ, ಬೆಂಗಳೂರು

‘ಮಾಧುರಿ’ ಮತ್ತೆ ಮಠ ಸೇರುವಳೇ?

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ನಾಂದಣಿ ಜೈನ ಮಠದಲ್ಲಿ 34 ವರ್ಷದಿಂದ ‘ಮಹಾದೇವಿ’ ಹೆಸರಿನ ಹೆಣ್ಣಾನೆಯನ್ನು ಸಾಕಲಾಗಿತ್ತು. ಆ ಆನೆಯನ್ನು ಭಕ್ತರು ‘ಮಾಧುರಿ’ ಎಂದೂ ಕರೆಯುತ್ತಿದ್ದರು. ಪೇಟಾ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಗುಜರಾತ್‌ನ ಜಾಮ್‌ನಗರದ ‘ವಂತಾರ’ ಕೇಂದ್ರಕ್ಕೆ ಆನೆಯನ್ನು ಸ್ಥಳಾಂತರಿಸಲು ಆದೇಶಿಸಿದೆ. ಆನೆಯನ್ನು ಮರಳಿ ಮಠಕ್ಕೆ ನೀಡುವಂತೆ ಒತ್ತಾಯಿಸಿ ನಾಂದಣಿಯಿಂದ ಕೊಲ್ಹಾಪುರದವರೆಗೆ ಭಕ್ತರು ಪಾದಯಾತ್ರೆ ನಡೆಸಿದ್ದಾರೆ. ಭಕ್ತರ ನಿವೇದನೆಯನ್ನು ನ್ಯಾಯಾಲಯ ಮತ್ತು ಸರ್ಕಾರ ಮನ್ನಿಸಬಹುದೆಂಬ ನಿರೀಕ್ಷೆ ಹುಸಿಯಾಗದಿರಲಿ.

 –ಎಸ್.ಎನ್. ಜೈನ್, ಪುತ್ತೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.