ADVERTISEMENT

ಮೈ ಶುಗರ್‌: ರೈತರ ಹಿತ ಮುಖ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 19:16 IST
Last Updated 23 ಜುಲೈ 2021, 19:16 IST

ಸರ್ಕಾರಿ ಒಡೆತನದ ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಕೂಗು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಲೇ ಇದೆ. ಹಳೆಯ ಮೈಸೂರು ಭಾಗದ ಕಬ್ಬು ಬೆಳೆಗಾರರ ಜೀವನಾಡಿಯಂತಿದ್ದ ಮೈ ಶುಗರ್ ರೋಗಗ್ರಸ್ತವಾಗಿ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ನಾಲ್ಕೈದು ವರ್ಷಗಳು ಕಳೆದರೂ ಪುನಶ್ಚೇತನ ವೆಂಬುದು ಕೇವಲ ನಾಮಕಾವಸ್ತೆಯ ನಾಟಕವಾಗಿದೆ. ರೈತರ ಹಿತಾಸಕ್ತಿಯ ಉದ್ದೇಶ ಅಲ್ಲಿ ಕಾಣದಿರುವುದು ದುರದೃಷ್ಟಕರ. ಸಂಪೂರ್ಣವಾಗಿ ಸರ್ಕಾರಿ ಒಡೆತನದಲ್ಲಿ ಕಾರ್ಖಾನೆಯನ್ನು ಮುಂದುವರಿಸಿಕೊಂಡು ಹೋಗುವುದಾದರೆ, ಆಡಳಿತ ಮಂಡಳಿಯು ಅತ್ಯಂತ ರಚನಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಾಧ್ಯ. ಇನ್ನೂ ಸರಳವಾಗಿ ಹೇಳುವುದಾದರೆ, ಕಾರ್ಖಾನೆಯ ಒಳಾಡಳಿತ ವಿಭಾಗಗಳಾದ ಕಬ್ಬು ವಿಭಾಗ, ಯಂತ್ರೋಪಕರಣ ಮೇಲ್ವಿಚಾರಣೆ, ಕಾರ್ಮಿಕ ಪೂರೈಕೆ ಈ ಮೂರು ಮೂಲ ವಿಭಾಗಗಳನ್ನು ಸಮರ್ಥವಾಗಿ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿಗಳು ಕಾರ್ಖಾನೆಗೆ ಅತ್ಯಗತ್ಯವಾಗಿ ಬೇಕೇ ಬೇಕು.

ಇಂದು ಖಾಸಗಿ ವಲಯದ ಕಾರ್ಖಾನೆಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಈ ವಿಭಾಗಗಳ ಭದ್ರ ಬುನಾದಿಯೇ ಕಾರಣ. ಹಾಗಾಗಿ ಸರ್ಕಾರ ಅದೆಷ್ಟೇ ಬಂಡವಾಳ ಹೂಡಿಕೆ ಮಾಡಿದರೂ ರಚನಾತ್ಮಕವಾಗಿ ಕಾರ್ಯ ನಿರ್ವಹಿಸದೇ ಹೋದರೆ ಮೈ ಶುಗರ್ ಪುನಶ್ಚೇತನ ಖಂಡಿತ ಸಾಧ್ಯವಿಲ್ಲ. ರೈತರ ಹಿತದೃಷ್ಟಿಯಿಂದ ಇನ್ನೊಂದು ಮಜಲಿನಲ್ಲಿ ಯೋಚಿಸುವುದಾದರೆ, ಸರ್ಕಾರದ ಒಡೆತನದಲ್ಲಿ ಕಾರ್ಖಾನೆ ಮುಂದುವರಿಸಿದರೆ ರೈತರಿಗೆ ನಷ್ಟವೇ ಹೊರತು ಲಾಭವಿಲ್ಲ. ಅದಕ್ಕೆ ಕಾರಣ, ಕಬ್ಬು ಬೆಲೆಯು ಇಳುವರಿ ಆಧಾರದ ಮೇಲೆ ಕೇಂದ್ರ ಸರ್ಕಾರದ ಎಫ್‌.ಆರ್.ಪಿ ದರದ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ) ಅನ್ವಯ ನಿರ್ಧಾರವಾಗುತ್ತದೆ. ಆದ್ದರಿಂದ ಸರ್ಕಾರಿ ವಲಯದ ಕಾರ್ಖಾನೆಯಲ್ಲಿ ಬಿಳಿ ಆನೆಯಂತಹ ಅಧಿಕಾರ ವರ್ಗದಿಂದ ಖಾಸಗಿ ಕಾರ್ಖಾನೆಯಂತೆ ಸ್ಪರ್ಧಾತ್ಮಕ ಇಳುವರಿ ನಿರೀಕ್ಷಿಸುವುದು ಸಾಧ್ಯವಾಗದ ಮಾತು. ಹಾಗಾಗಿ ಸಹಜವಾಗಿಯೇ ರೈತರಿಗೆ ನಷ್ಟವಾಗುತ್ತದೆ.

ಕಬ್ಬು ನಾಟಿಯಿಂದ ಕಟಾವು ಅವಧಿಯತನಕ ತಗಲುವ ಖರ್ಚು ವೆಚ್ಚ ತುಲನೆ ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅಧಿಕ ಇಳುವರಿ ಗಳಿಸುವ ಕಾರ್ಖಾನೆ ಮುಖ್ಯವೇ ಹೊರತು ಸರ್ಕಾರಿ ವಲಯದಲ್ಲಿ ಅಥವಾ ಖಾಸಗಿ ವಲಯದಲ್ಲಿ ಕಾರ್ಖಾನೆ ನಡೆಸಬೇಕೇ ಎಂಬ ಪ್ರಶ್ನೆಯೇ ಅಪ್ರಸ್ತುತ ಎನಿಸುತ್ತದೆ. ಸರ್ಕಾರಿ ವಲಯದಲ್ಲೇ ಕಾರ್ಖಾನೆ ಮುಂದುವರಿಸಿದರೆ ಅಧಿಕ ಇಳುವರಿ ತೆಗೆಯುವ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಯೋಚಿಸಿ, ಇಲ್ಲವಾದರೆ ರಾಜಕೀಯ ಹಿತಾಸಕ್ತಿಗಾಗಿ ರೈತರನ್ನು ಬಲಿಪಶು ಮಾಡದಿರಿ.

ADVERTISEMENT

– ವಿಜಯಕುಮಾರ್ ಎಸ್.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.