ADVERTISEMENT

ಜೀವಕ್ಕೆ ಅಪಾಯ ಯಾರಿಂದ?

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:43 IST
Last Updated 26 ಜೂನ್ 2019, 18:43 IST

ಇತ್ತೀಚಿನ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಸ್ಥಳೀಯ ಚುನಾವಣಾ ಅಧಿಕಾರಿಗಳು ಮಾಡಿದ್ದ ದೂರುಗಳ ಪರಿಶೀಲನೆ ನಡೆಸಿದ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು, ಈ ಮುಖಂಡರಿಗೆ ಕ್ಲೀನ್ ಚಿಟ್ ಕೊಟ್ಟಿದ್ದರು. ಆದರೆ, ಮತ್ತೊಬ್ಬ ಆಯುಕ್ತ ಅಶೋಕ ಲವಾಸಾ ಅವರು ಕ್ಲೀನ್ ಚಿಟ್ ಕೊಡುವ ಬಗ್ಗೆ ತಮ್ಮ ಅಸಮ್ಮತಿ ದಾಖಲಿಸಿದ್ದರು. ಲವಾಸಾ ಅವರು ದಾಖಲಿಸಿದ್ದ ಅಸಮ್ಮತಿ ಟಿಪ್ಪಣಿಯ ವಿವರ ಕೇಳಿ ಒಬ್ಬರು ಆರ್‌ಟಿ‌ಐ ಅರ್ಜಿ ಹಾಕಿದ್ದರು. ಅದಕ್ಕೆ ಉತ್ತರಿಸುತ್ತಾ ಆಯೋಗವು ಈ ಟಿಪ್ಪಣಿಯನ್ನು ಬಹಿರಂಗಪಡಿಸಿದರೆ ‘ವ್ಯಕ್ತಿಯ ಜೀವಕ್ಕೆ ಅಪಾಯವಿದೆ’, ಹಾಗಾಗಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ. ಆದರೆ, ಲವಾಸಾ ಅವರ ಜೀವಕ್ಕೆ ಅಪಾಯ ಒಡ್ಡುವವರು ಯಾರು?

ಮೋದಿ-ಶಾ ಅವರಿಗೆ ಕ್ಲೀನ್‌ಚಿಟ್ ಕೊಡುವುದನ್ನು ತಾನೇ ಲವಾಸಾ ವಿರೋಧಿಸಿದ್ದು? ಹಾಗಾಗಿ ಅವರ ಜೀವಕ್ಕೆ ಅಪಾಯ ಇದ್ದರೆ ಅದು ಮೋದಿ-ಶಾ ಕಡೆಯವರಿಂದ ತಾನೇ? ಆಯೋಗ ಇದನ್ನು ನೇರವಾಗಿ ಹೇಳದಿದ್ದರೂ ಲವಾಸಾ ಅವರ ಜೀವಕ್ಕೆ ಯಾರಿಂದ ಅಪಾಯವಿದೆ ಎಂಬುದನ್ನು ನಾವು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ದೇಶದ ಪ್ರಧಾನಿಯು ತನ್ನ ಅಧಿಕಾರದ ದುರುಪಯೋಗ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದರೆ, ಆ ಬಗ್ಗೆ ಕ್ಲೀನ್‌ಚಿಟ್ ಕೊಡುವುದರ ಕುರಿತು ಒಬ್ಬ ಚುನಾವಣಾ ಆಯುಕ್ತ ಭಿನ್ನಾಭಿಪ್ರಾಯ ಸೂಚಿಸಿದರೆ, ಆ ಸರ್ಕಾರಿ ಅಧಿಕಾರಿಯ ಜೀವಕ್ಕೆ ದೇಶದ ಪ್ರಧಾನಿಯ ಕಡೆಯವರಿಂದ ಅಪಾಯವಿದೆ ಎಂಬುದನ್ನು ಚುನಾವಣಾ ಆಯೋಗ ಬಹಿರಂಗವಾಗಿ ಒಪ್ಪಿಕೊಂಡಂತಾಯಿತು. ಭಿನ್ನಾಭಿಪ್ರಾಯ ದಾಖಲಿಸುವ ಚುನಾವಣಾ ಆಯುಕ್ತರ ಜೀವಕ್ಕೇ ಅಪಾಯ ಎದುರಾಗುವುದಾದರೆ, ನಮ್ಮದು ಪ್ರಜಾತಂತ್ರವೇ ಅಥವಾ ಸರ್ವಾಧಿಕಾರಿ ದೇಶವೇ? ಈ ದೃಷ್ಟಿಯಿಂದ ನೋಡಿದರೆ, ಉಳಿದ ಇಬ್ಬರು ಆಯುಕ್ತರೂ ಜೀವಭಯದಿಂದಲೇ ತಮ್ಮ ಎಲ್ಲಾ ಪೂರ್ವಗ್ರಹಿತ ತೀರ್ಪುಗಳನ್ನು ಆಳುವ ಪಕ್ಷದವರ ಪರವಾಗಿ ಕೊಟ್ಟಿರುವ ಸಾಧ್ಯತೆಯೇ ಹೆಚ್ಚು ಅಲ್ಲವೇ?

- ಕೆ.ಲಕ್ಷ್ಮೀಕಾಂತ್ ರಾವ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.