ADVERTISEMENT

ಗಣ್ಯರ ಸಮಾಧಿ: ಆತುರದ ನಿರ್ಧಾರ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST

ಬೆಂಗಳೂರಿನ ಕಲಾಗ್ರಾಮದಲ್ಲಿ ಇಬ್ಬರು ಸಾಹಿತಿಗಳ ಸಮಾಧಿ ಸ್ಥಳವನ್ನು ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸ್ವಚ್ಛ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನ ಸೆಳೆದಿದ್ದಾರೆ (ಪ್ರ.ವಾ., ಜ. 20). ಇದರ ಜೊತೆಗೆ, ಕಲಾಗ್ರಾಮವು ಸ್ಮಶಾನ ಅಲ್ಲ ಎಂಬುದಕ್ಕೆ ಎನ್.ಎಸ್.ಡಿ. ಬೆಂಗಳೂರು ಕೇಂದ್ರದ ನಿರ್ದೇಶಕ ಬಸವಲಿಂಗಯ್ಯ ಸಮಜಾಯಿಷಿ ನೀಡಿದ್ದಾರೆ. ಸಮಾಧಿ ಸ್ಥಳ ಸ್ವಚ್ಛ ಮಾಡಿರುವವರನ್ನು ಗೌರವಿಸೋಣ. ಆದರೆ ಸರ್ಕಾರ ಇಂತಹ ವಿಷಯಗಳಲ್ಲಿ ಸರಿಯಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಕಾಣುವುದಿಲ್ಲ. ಯಾವುದೇ ದೊಡ್ಡ ಸಾಹಿತಿ, ಕಲಾವಿದರು ನಿಧನರಾದಾಗ ಬೆಂಗಳೂರನ್ನೇ ಗುರಿಯಾಗಿಟ್ಟುಕೊಂಡು ಅಂತ್ಯಸಂಸ್ಕಾರ ಮಾಡಲು ಇಂತಹ ಸಾಂಸ್ಕೃತಿಕ ಆವರಣವನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ.

ದಿವಂಗತ ಮಹನೀಯರ ಸಮಾಧಿ ಒಂದು ಕಡೆ, ಸ್ಮಾರಕ ಮತ್ತೊಂದು ಕಡೆ ಆದರೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ನಿಧನರಾದ ಗಣ್ಯ ವ್ಯಕ್ತಿಗಳನ್ನು ಅವರವರ ಸ್ವಂತ ಊರುಗಳಲ್ಲಿ ಮಣ್ಣು ಮಾಡಿ ಅಲ್ಲೊಂದು ಸ್ಮಾರಕ ನಿರ್ಮಿಸಿ, ಅದನ್ನು ಅಭಿವೃದ್ಧಿಪಡಿಸುವಂತೆ ಆಗಬೇಕು. ಕಲಾಗ್ರಾಮವನ್ನು ಕಲೆ, ಸಾಹಿತ್ಯ, ಸಂಸ್ಕೃತಿಗೆ ಮೀಸಲಿಡಲಿ. ಅಧಿಕಾರಿಗಳು, ರಾಜಕಾರಣಿಗಳು ಕೆಲವರನ್ನು ಮೆಚ್ಚಿಸಲಿಕ್ಕಾಗಿ ಆತುರದ ನಿರ್ಧಾರ ಕೈಗೊಂಡು ಇಂತಹ ಅವಾಂತರಗಳಿಗೆ ಕಾರಣರಾಗುತ್ತಿರುವುದು ಸಾಮಾನ್ಯವಾಗಿದೆ. ಇನ್ನು ಮುಂದಾದರೂ ಯೋಚಿಸಿ, ಯೋಜಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

ಡಾ. ಶಿವರಾಜ್ ಬ್ಯಾಡರಹಳ್ಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.