ADVERTISEMENT

ಬ್ರಿಟನ್‌ ನಡೆಯಲ್ಲಿ ನಮಗೂ ಸಂದೇಶ?

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 20:00 IST
Last Updated 28 ಜುಲೈ 2019, 20:00 IST

ಬ್ರಿಟನ್‌ನ ನೂತನ ಪ್ರಧಾನಿ ಬೋರಿಸ್ ಜಾನ್ಸನ್, ಭಾರತೀಯ ಮೂಲದ ಮೂವರು ಪಾರ್ಲಿಮೆಂಟ್ ಸದಸ್ಯರಾದ ಪ್ರೀತಿ ಪಟೇಲ್, ರಿಷಿ ಸುನಕ್ ಮತ್ತು ಅಲೋಕ್ ಶರ್ಮಾ ಅವರನ್ನು ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿರುವ ಸುದ್ದಿ, ಭಾರತದ ಇತ್ತೀಚಿನ ವರ್ಷಗಳ ರಾಜಕೀಯ ಮೌಲ್ಯಗಳು ಹಾಗೂ ನಡವಳಿಕೆಗಳನ್ನು ಕುರಿತು ಯೋಚಿಸುವಂತೆ ಮಾಡಿದೆ. ಅಲೋಕ್ ಅವರು ಭಾರತದಲ್ಲಿ ಜನಿಸಿ, ನಂತರದ ದಿನಗಳಲ್ಲಿ ಬ್ರಿಟನ್ನಿನ ಪೌರತ್ವ ಪಡೆದವರು. ಹೀಗೆ ಕಾನೂನು ರೀತ್ಯಾ ಮತ್ತೊಂದು ದೇಶದ ಪೌರತ್ವ ಪಡೆದ ವ್ಯಕ್ತಿಗೆ ಆ ದೇಶದ ಮೂಲ ಪ್ರಜೆಗಳಿಗಿರುವ ಎಲ್ಲಾ ಸಂವಿಧಾನಾತ್ಮಕ, ಶಾಸನಬದ್ಧ ಹಕ್ಕುಗಳೂ ತಾವಾಗಿಯೇ ದೊರೆಯುತ್ತವೆ.

ಬ್ರಿಟನ್ನಿನ ಜನರಾಗಲೀ, ರಾಜಕೀಯ ಪಕ್ಷಗಳಾಗಲೀ ಬ್ರಿಟಿಷ್ ಮೂಲದವರಲ್ಲದ ಇಂತಹ ಪ್ರಜೆಗಳ ನಿಷ್ಠೆಯನ್ನು ಎಂದೂ ಪ್ರಶ್ನಿಸುವುದಿಲ್ಲ. ಅಮೆರಿಕದಲ್ಲೂ ಭಾರತೀಯ ಮೂಲದ ಕಮಲಾ ಹ್ಯಾರಿಸ್, ತುಳಸಿ ಗಬ್ಬಾರ್ಡ್ ಅವರಲ್ಲಿ ಒಬ್ಬರು ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ! ಅಂದರೆ ಈ ಸಮಾಜಗಳಲ್ಲಿ ಪೌರತ್ವ ಪಡೆದ ಅನ್ಯದೇಶೀಯರಿಗೆ ಸಂವಿಧಾನಾತ್ಮಕ ಹಕ್ಕುಗಳು ಮಾತ್ರವಲ್ಲದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಾನ್ಯತೆಯೂ ಇದೆಯಲ್ಲವೇ?

ಇದಕ್ಕೂ ನಮ್ಮ ದೇಶದಲ್ಲಿ ಬಿಜೆಪಿಯು ಸೋನಿಯಾ ಗಾಂಧಿಯವರನ್ನು ಕುರಿತಂತೆ ತಳೆದಿದ್ದ ನಿಲುವಿಗೂ ಇರುವ ವ್ಯತ್ಯಾಸವನ್ನು ನೋಡಿ! ಯುಪಿಎ ಅಸ್ತಿತ್ವಕ್ಕೆ ತರುವಲ್ಲಿ ಅಪಾರ ಪ್ರಯತ್ನದ ಜೊತೆಗೆ 2004ರ ಚುನಾವಣೆಯಲ್ಲಿ ಯುಪಿಎ ಗೆಲುವಿಗಾಗಿ ಅವರು ದುಡಿದಿದ್ದರು. ಅವರೇ ಈ ದೇಶದ ಪ್ರಧಾನಿ ಆಗಬಹುದೆಂಬ ಚರ್ಚೆ ಸಾರ್ವಜನಿಕವಾಗಿತ್ತು. ಅದಕ್ಕೆ ಮುಂಚೆ 1999ರಲ್ಲಿ ಅಡ್ವಾಣಿಯವರು ‘ಈ ದೇಶವನ್ನು ಅನ್ಯದೇಶೀಯರೊಬ್ಬರಿಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ’ ಎಂದಿದ್ದರು. ಸುಷ್ಮಾ ಸ್ವರಾಜ್ ಅವರು ‘ಸೋನಿಯಾ ಪ್ರಧಾನಿಯಾದರೆ ನಾನು ಕೇಶಮುಂಡನ ಮಾಡಿಸಿಕೊಳ್ಳುತ್ತೇನೆ’ ಎಂದಿದ್ದರು! (ಪ್ರೊ. ಜೋಯಾ ಹಸನ್ ಅವರ ಗ್ರಂಥ ‘ಕಾಂಗ್ರೆಸ್ ಆಫ್ಟರ್ ಇಂದಿರಾ’, 2012, ಪುಟ: 98-99). ಈ ಹಿನ್ನೆಲೆಯಲ್ಲಿ ಸೋನಿಯಾ ಅವರು ‘...ದೇಶವನ್ನು ವಿಭಜಿಸುವ ಪ್ರಧಾನಿ ಖಂಡಿತ ಆಗಲಾರೆ’ ಎಂದು ಆ ಹುದ್ದೆಯನ್ನು ತಿರಸ್ಕರಿಸಿದ್ದರು. ಬ್ರಿಟನ್ನಿನ ಈಗಿನ ಸಂಗತಿ ನಮಗೂ ಸಂದೇಶವೊಂದನ್ನು ಕೊಡುತ್ತಿಲ್ಲವೇ?

ADVERTISEMENT

ಪ್ರೊ.ಬಿ.ಕೆ. ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.