ADVERTISEMENT

ವಿಶ್ವವಿದ್ಯಾಲಯಗಳ ಪಿಎಚ್‍.ಡಿ ಪ್ರಬಂಧ: ಇದು ಮೂಲ ಸರಕಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:45 IST
Last Updated 17 ಜೂನ್ 2019, 19:45 IST

ನಮ್ಮ ವಿಶ್ವವಿದ್ಯಾಲಯಗಳ ಪಿಎಚ್‍.ಡಿ ಪ್ರಬಂಧಗಳ ಬಗೆಗೆ ಎನ್. ವಸಂತ ರಾಜು ಚರ್ಚಿಸಿದ್ದಾರೆ (ಚರ್ಚೆ, ಜೂನ್‌ 17). ಅವರಾಗಲೀ ಅಥವಾ ಇದಕ್ಕೆ ಮುನ್ನ ಮೂಲ ಬರಹ ಬರೆದ ಎನ್‌.ಎಸ್‌.ಗುಂಡೂರ ಅವರಾಗಲೀ (ಸಂಗತ, ಜೂನ್‌ 12) ಗಮನಿಸದೇ ಹೋಗಿರುವ ಅಥವಾ ಗಮನಿಸಿಯೂ ಹೇಳಲು ಹಿಂಜರಿದಿರುವ ಮೂಲ ಸಂಗತಿ ಎಂದರೆ, ನಮ್ಮ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ, ನಿರ್ದಿಷ್ಟವಾಗಿ ಕಲೆ ಮತ್ತು ಮಾನವಿಕ ವಿಷಯಗಳ ‘ಅಧ್ಯಯನ’ಕ್ಕಾಗಿ ಬರುತ್ತಿರುವ ಮೂಲ ಸರಕೇ ಕಳಪೆಯಾಗಿದೆ ಎಂಬುದು. ಈ ವಿದ್ಯಮಾನ ಆರಂಭವಾಗಿ ಹಲವು ವರ್ಷಗಳೇ ಸಂದಿರುವುದರಿಂದ ಪಿಎಚ್‍.ಡಿ ಮಾರ್ಗದರ್ಶಕರೂ, ಮೌಲ್ಯಮಾಪಕರೂ ಆಗಿರುವ ಬಹುತೇಕ ಅಧ್ಯಾಪಕರ ಗುಣಮಟ್ಟವೇ ಕಳಪೆಯಾಗಿದೆ. ಯಾವುದೇ ನೆಪ ಹೇಳದೆ ಇದನ್ನು ಒಪ್ಪಿಕೊಂಡು, ಇದು ಏಕೆ ಮತ್ತು ಹೇಗೆ ಆಯಿತು ಎಂಬುದನ್ನು ಸಮಗ್ರವಾಗಿ ಪರಿಶೀಲಿಸುವ ಮನಸ್ಸು ಮಾಡುವವರೆಗೆ ಯುಜಿಸಿ ನಿಯಮ, ನೇಮಕಾತಿ ಷರತ್ತಿನಂತಹ ಇತರ ಕಾರಣಗಳನ್ನು ಹುಡುಕುವ ವ್ಯರ್ಥ ಚರ್ಚೆ ಮುಂದುವರಿದೇ ಇರುತ್ತದೆ. ಇಂದು ನಮ್ಮ ವಿಶ್ವವಿದ್ಯಾಲಯಗಳಿಗೆ ನೇಮಕವಾಗುತ್ತಿರುವ ಕುಲಪತಿಗಳನ್ನು ಮತ್ತು ಅವರ ಆಯ್ಕೆಗೆ ಸರ್ಕಾರ ಅನುಸರಿಸುತ್ತಿರುವ ಮಾನದಂಡಗಳನ್ನು ನೋಡಿದರೆ, ಈ ಪರಿಶೀಲನೆಯ ಸಾಧ್ಯತೆ ದೂರದ ಕನಸಾಗಿಯೇ ಕಾಣುತ್ತದೆ. ಪಿಎಚ್‍.ಡಿ ಪ್ರಬಂಧವನ್ನು ಬರೆದುಕೊಡುವ ದಂಧೆ ನಡೆಸುವವರೇ ಯಾವುದೇ ಸಂಕೋಚವಿಲ್ಲದೆ ಕುಲಪತಿ ಹುದ್ದೆಗೆ ಆಕಾಂಕ್ಷಿಗಳಾಗಿರುವುದು ಬಹಳ ಜನಕ್ಕೆ ಗೊತ್ತಿರದ ಸಂಗತಿಯೇನಲ್ಲ.

ನಮ್ಮ ರಾಜಕಾರಣದಲ್ಲಿನ ಮೂಲ ಸರಕಿನ ಗುಣಮಟ್ಟವನ್ನು ಸುಧಾರಿಸದೆ ಯಾವುದರ ಗುಣಮಟ್ಟವೂ ಸುಧಾರಿಸದು. ಏಕೆಂದರೆ ಮಾನವ ಸಂಪನ್ಮೂಲ ಎಂಬುದೇ ಇಂದು ತನ್ನ ಉಪ್ಪಿನ ರುಚಿಯನ್ನು ಕಳೆದುಕೊಂಡು, ಹೊರಗಿನ ಲೋಕದ ರುಚಿಗೆ ಶರಣಾಗಿದೆ. ಹಾಗಾಗಿಯೇ ಇಂದು ಗುಣಮಟ್ಟದ ಬಗ್ಗೆ ಮಾತನಾಡುವುದೇ ಸ್ಥಾಪಿತ ಹಿತಾಸಕ್ತಿ ಎನಿಸಿಬಿಟ್ಟಿದೆ. ಇಂತಹ ಸಂಪೂರ್ಣ ಪ್ರತಿಕೂಲ ಪರಿಸ್ಥಿತಿಯ ವಿರುದ್ಧ ನಿರಂತರವಾಗಿ ದನಿ ಎತ್ತುತ್ತಾ, ಇದರಿಂದ ಸಮಾಜ ಹೊರಬರುವಂತಹ ಒತ್ತಡವನ್ನು ನಿರ್ಮಿಸುವ ಪ್ರಯತ್ನ
ಗಳನ್ನು ನಿರ್ಬಿಢೆಯಿಂದ ಮಾಡುವುದೊಂದೇ ಇಂತಹ ಚರ್ಚೆಗಳನ್ನು ನಡೆಸಬಯಸುವವರಿಗೆ ಇರುವ ದಾರಿ.

–ಡಿ.ಎಸ್.ನಾಗಭೂಷಣ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.