ADVERTISEMENT

ವಾಚಕರ ವಾಣಿ | ಪಡಿತರ ಚೀಟಿ ಇಲ್ಲದವರೂ ಫಲಾನುಭವಿಗಳಾಗಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್‌ ಯೋಜನೆಯಡಿ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವುದನ್ನು ಇನ್ನೂ ಐದು ತಿಂಗಳ ಕಾಲ ವಿಸ್ತಿರಿಸಿರುವುದಾಗಿ ಪ್ರಧಾನಿಯವರು ಘೋಷಿಸಿರುವುದು ಸಕಾಲಿಕ ಮತ್ತು ಸ್ವಾಗತಾರ್ಹ. ಈ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನೊಳಗೆ ಬರುವಂಥ ಆದ್ಯತಾ ಪಟ್ಟಿ ಮತ್ತು ಅಂತ್ಯೋದಯ ಕಾರ್ಡಿನವರಾಗಿದ್ದಾರೆ. ಇದೀಗ ರಾಜ್ಯ ಸರ್ಕಾರಗಳು ಹೆಚ್ಚೆಚ್ಚು ಜನರಿಗೆ ಪಡಿತರ ತಲುಪಲಿ ಎಂಬ ಆಶಯದಿಂದ ಪಡಿತರ ಚೀಟಿಗೆ ಅರ್ಜಿ ಹಾಕಿದ್ದವರಿಗೆ ಮತ್ತು ಅತ್ಯಂತ ಬಡವರಿಗೆ ತಾತ್ಕಾಲಿಕ ಕಾರ್ಡುಗಳನ್ನು ನೀಡಿವೆ. ಪಡಿತರ ಚೀಟಿ ಮಾಡಿಸಲು ಬೇಕಾದ ಸರಿಯಾದ ದಾಖಲೆಗಳು ಇಲ್ಲವೆಂಬ ಕಾರಣಕ್ಕಾಗಿ ಅವರಿಗೆ ಇನ್ನೂ ಪಡಿತರ ಚೀಟಿ ಸಿಕ್ಕಿಲ್ಲವಷ್ಟೇ. ಅವರಿಗೆ ಕೇಂದ್ರ ಸರ್ಕಾರದಿಂದ ಏನೂ ಇಲ್ಲವೇ? ಆತ್ಮನಿರ್ಭರ ಯೋಜನೆಯಡಿ ಹೆಚ್ಚುವರಿ 8 ಕೋಟಿ ಜನರಿಗೆ ನೀಡಲಾದ ಆಹಾರಧಾನ್ಯ ಪೂರೈಕೆಯನ್ನೂ ಮುಂದುವರಿಸುವ ಪ್ರಸ್ತಾಪ ಪ್ರಧಾನಿಯವರ ಭಾಷಣದಲ್ಲಿ ಬರಲಿಲ್ಲ.

ಬಡ ಕಾರ್ಮಿಕ ವರ್ಗವು ಸಂಕಷ್ಟದಲ್ಲಿರುವಾಗ ಮತ್ತು ದೇಶವು ಆಹಾರ ಸಮೃದ್ಧವಾಗಿರುವಾಗ ‘ಎಲ್ಲರಿಗೂ ಆಹಾರ’ದ ಘೋಷಣೆ ಆಗಬಹುದೆಂಬ ಬಹುದೊಡ್ಡ ನಿರೀಕ್ಷೆಯಲ್ಲಿ ದೇಶದ ಜನ ಕಾದಿದ್ದರು. ಕನಿಷ್ಠ ತಾತ್ಕಾಲಿಕ ರೇಷನ್ ಕಾರ್ಡ್‌ಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರಗಳಿಗೆ ಸಬ್ಸಿಡಿ ಬೆಲೆಯಲ್ಲಿ ಹೆಚ್ಚಿನ ಆಹಾರಧಾನ್ಯ ಕೊಡಮಾಡುವಂಥ ಘೋಷಣೆಯಾದರೂ ಆಗಬೇಕಿತ್ತು. ಪ್ರಧಾನಿ ಭಾಷಣದಲ್ಲಿ ಮತ್ತೆ ‘ಒಂದು ದೇಶ ಒಂದು ಪಡಿತರ ಚೀಟಿ’ ಘೋಷಣೆಯಾಯಿತು. ಆದರೆ ಅದು ಆರಂಭವಾಗುವುದು 2021ರ ಮಾರ್ಚ್‌ನಿಂದ! ಪಡಿತರ ಚೀಟಿ ಇರುವವರು ದೇಶದ ಯಾವುದೇ ಭಾಗದಲ್ಲಿ ರೇಷನ್ ಪಡೆಯಬಹುದೆಂಬ ಈ ಯೋಜನೆಯಿಂದ ಪಡಿತರ ಚೀಟಿ ಇಲ್ಲದವರಿಗೆ ಏನೇನೂ ಸಹಾಯವಾಗದು ಮತ್ತು ಗೋದಾಮಿನಲ್ಲಿ ಕೊಳೆತುಹೋಗುತ್ತಿರುವ ಹೆಚ್ಚುವರಿ ಆಹಾರಧಾನ್ಯದ ಸಮಸ್ಯೆಗೂ ಪರಿಹಾರವಿಲ್ಲ. ಪಡಿತರವನ್ನು ಸಾರ್ವತ್ರೀಕರಣಗೊಳಿಸಬೇಕು. ಚೀಲ ಹಿಡಿದು ರೇಷನ್ ಅಂಗಡಿಗೆ ಬರುವ
ಪ್ರತಿಯೊಬ್ಬರಿಗೂ ಆಹಾರಧಾನ್ಯ ಸಿಗುವಂತಾಗಬೇಕು.

-ನೀಲಯ್ಯ, ಮೈಸೂರು, ಶಾರದಾ ಗೋಪಾಲ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.