ADVERTISEMENT

ಹಿರಿಯರ ಮುತ್ತಿನಂಥ ಮಾತು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 20:00 IST
Last Updated 1 ಜುಲೈ 2022, 20:00 IST

ನಾನು ಮತ್ತು ನನ್ನ ಸ್ನೇಹಿತ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿಯ ಒಂದು ಹೋಟೆಲ್‌ನಿಂದ ಬೆಳಿಗ್ಗೆ ತಿಂಡಿ ತರಲು ಹೋಗಿದ್ದೆವು. 75 ವರ್ಷ ದಾಟಿರಬಹುದಾದ ವೃದ್ಧರೊಬ್ಬರು ಹೋಟೆಲ್ ಎದುರು ದಿನಪತ್ರಿಕೆ ಓದುತ್ತಿದ್ದರು. ಇಷ್ಟು ವಯಸ್ಸಾದರೂ ಕನ್ನಡಕ ಹಾಕದೆ ಪತ್ರಿಕೆಯ ಪ್ರತೀ ಸಾಲನ್ನು ಬೆರಳಿಟ್ಟು ಸರಾಗವಾಗಿ ಓದುತ್ತಿದ್ದರು. ಇದು, ನಿಜಕ್ಕೂ ಅದ್ಭುತ ಎಂದು ನಾವು ಮಾತನಾಡಿಕೊಂಡೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ವಯೋವೃದ್ಧರು,ಪತ್ರಿಕೆಯಲ್ಲಿದ್ದ ಸಾಲುಗಳನ್ನು ತೋರಿಸಿ, ‘ನಿಜಕ್ಕೂ ಅವರಿಗೆ ಕೊಡಬೇಕು’ ಎಂದು ಹೇಳಿದರು.

ಕೂಡಲೇ ನಾನು ಎದ್ದು ಆ ಸಾಲುಗಳನ್ನು ಗಮನಿಸಿದೆ. ಆ ಸಾಲಿನಲ್ಲಿ ‘ಪೌರಕಾರ್ಮಿಕರನ್ನು ಗುರುತಿಸಿ ನಿವೇಶನ ಹಂಚಿಕೆ’ ಎಂದಿತ್ತು.ಅವರಿಬ್ಬರೂ ಮಾತು ಮುಂದುವರಿಸಿದರು. ‘ನೀವು, ನಾವು ಈ ಕೆಲಸ ಮಾಡುತ್ತೇವೆಯೇ? ಗಲೀಜು,‌‌ ಕೊಳಚೆಯನ್ನು ತೆಗೆಯುತ್ತೇವೆಯೇ? ಅವರಿಂದಲೇ ಅಲ್ಲವೆ ಸ್ವಚ್ಛತೆ’ ಎಂದು ಒಬ್ಬರು ಹೇಳಿದರು. ಅದಕ್ಕೆ ದನಿಗೂಡಿಸಿದ ಮತ್ತೊಬ್ಬರು, ‘ಹೌದು ನೀವು ಹೇಳಿದ್ದು ಸತ್ಯ. ಅಂಥವರಿಗೆ ನಿವೇಶನ ಕೊಡಬೇಕು. ಅವರ ಕೆಲಸಕ್ಕೆ ಬೆಲೆ ಕಟ್ಟಲಾಗದು. ಅವರಿಲ್ಲದಿದ್ದರೆ ದಾರಿಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ’ ಎಂದರು.

ಸ್ವಾರ್ಥದ ಬದುಕು, ಇನ್ನೊಬ್ಬರಿಗೆ ಏನಾದರೂ ನೀಡಿದರೆ ‘ಅವರಿಗೇಕೆ’ ಎಂದು ಪ್ರಶ್ನಿಸುವ ಈ ಕಾಲದಲ್ಲಿ ಎಂತಹ ಮುತ್ತಿನಂಥ ನುಡಿಗಳಲ್ಲವೇ ಎಂದೆನಿಸಿತು.

ADVERTISEMENT

-ಚೆಲುವರಾಜು ಕೆ.,ಧನಗೆರೆ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.