ADVERTISEMENT

ಪ್ರಜಾವಾಣಿ@75: ಪ್ರಜಾವಾಣಿ ಅಮೃತ ಮಹೋತ್ಸವ- ಓದುಗರ ಅನಿಸಿಕೆಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 2:02 IST
Last Updated 18 ಅಕ್ಟೋಬರ್ 2022, 2:02 IST
   

ಮಹಿಳೆಯರ ಆಪ್ತ ಸಂಗಾತಿ
ದೇಶ ಸ್ವತಂತ್ರವಾದ ವರುಷದಲ್ಲಿ ಹುಟ್ಟಿ, ಪ್ರತಿ ಮನೆ ಮನಗಳಗಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ, ಪತ್ರಿಕೆಯೊಂದು ಬೃಹದಾಕಾರವಾಗಿ ಬೆಳೆದು ನಿಲ್ಲುವುದೆಂದರೆ ಅದು ಸಾಮಾನ್ಯವಾದ ಮಾತಲ್ಲ. ಓದುಗರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ‘ಪ್ರಜಾವಾಣಿ’ ಇಂದು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳತ್ತಿರುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯ.

ಯಾವುದಾದರೊಂದು ಪಕ್ಷ ಅಥವಾ ಸಿದ್ಧಾಂತಕ್ಕೆ ಜೋತು ಬಿಳದೇ ಎಲ್ಲ ರೀತಿಯ ವರದಿಗಳನ್ನು, ಚಿಂತನೆಗಳನ್ನು ಪ್ರಕಟಿಸುವುದರ ಜತೆಗೆ ಮಹಿಳೆಯರಿಗಾಗಿಯೂ ಒಂದು ಭೂಮಿಕೆಯನ್ನು ಸೃಷ್ಟಿಸಿ, ನಮ್ಮೆಲ್ಲರ ಆಪ್ತ ಸಂಗಾತಿಯಾದ ಪತ್ರಿಕೆಯೆಂದರೆ ಅದು ಪ್ರಜಾವಾಣಿ.

74 ವರುಷಗಳಿಂದಲೂ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಹೊರಟಿರುವ ಪತ್ರಿಕೆ ಇಂದು ಸಮಸ್ತ ಕನ್ನಡಿಗರ ಜೀವನಾಡಿಯಾಗಿದೆ. ಶುಭಾಷಿತ, ಅಭಿಮತ, ಭೂಮಿಕಾ, ಚುರುಮುರಿ, ಪದಬಂಧ, ಮುಂತಾದವುಗಳೊಂದಿಗೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಜಾವಾಣಿಗೆ ಹಾರ್ದಿಕ ಶುಭಾಶಯಗಳು.
-ಪಾರ್ವತಿ ಸೋನಾರೆ,ಸಾಹಿತಿ, ಬೀದರ್

ADVERTISEMENT

***

ನೇರ ನುಡಿಯ ಹೆಮ್ಮೆಯ ಪತ್ರಿಕೆ
ಪ್ರಜಾವಾಣಿ ಪತ್ರಿಕೆಯು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಲಕ್ಷಾಂತರ ಓದುಗ ಬಳಗವನ್ನು ಹೊಂದಿದ ಏಕೈಕ ಪತ್ರಿಕೆ ‘ಪ್ರಜಾವಾಣಿ’ ಎಂದರೆ ತಪ್ಪಾಗಲಿಕ್ಕಿಲ್ಲ. ಯಾವ ಮುಲಾಜಿಗೂ ಒಳಗಾಗದೆ ನೇರ ಮತ್ತು ನಿಷ್ಠುರತೆಗೆ ಹೆಸರಾದ ಪತ್ರಿಕೆಯಾಗಿದೆ.

ನಿತ್ಯ ಓದದೇ ಇದ್ದರೆ ಅದೇನೋ ಕಳೆದುಕೊಂಡಂತಹ ಅನುಭವವಾಗುತ್ತದೆ. ಓದುಗರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದೆ. ಕಾಲಕಾಲಕ್ಕೆ ಓದುಗರಿಗೆ ಹೊಸತನ್ನು ಕೊಡುತ್ತ ನಮ್ಮೆಲ್ಲರ ಮನ ಗೆದ್ದಿದೆ. ರಾಜಕೀಯ ಸಾಮಾಜಿಕ, ಮತ್ತು ಧಾರ್ಮಿಕ ವಿಷಯಗಳನ್ನು ಬರೆಯುವಾಗ ಯಾವ ಮಸಾಲೆಯನ್ನು ಬೆರೆಸದೆ ಇದ್ದುದ್ದನ್ನು ಇದ್ದ ಹಾಗೆ ಬರೆಯುತ್ತಲೇ ಹಿಮಾಲಯದೆತ್ತರಕ್ಕೆ ಬೆಳೆದು, ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಜಾವಾಣಿಗೆ ಹಾರ್ದಿಕ ಶುಭಾಶಯಗಳು.
-ವಿಜಯಕುಮಾರ ಸೋನಾರೆ,ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ, ಬೀದರ್

***

ತನ್ನತನ ಉಳಿಸಿಕೊಂಡ ಪತ್ರಿಕೆ
ಪ್ರಜಾವಾಣಿ ಸುದೀರ್ಘ 75 ವರ್ಷಗಳ ಅವಧಿಯಲ್ಲೂ ನಿಷ್ಪಕ್ಷಪಾತವಾಗಿ ತನ್ನತನವನ್ನು ಉಳಿಸಿಕೊಂಡು ಬಂದಿದೆ. ನಾಡಿನ ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸಿದೆ. ನೆಲಮೂಲದ ಸಂಸ್ಕೃತಿಯ ಸೊಗಡನ್ನು ಬಿತ್ತರಿಸುವ, ನಾಡಿನ ಕಟ್ಟಕಡೆಯ, ಅಸಹಾಯಕರ ಧ್ವನಿಯಾಗಿಯಷ್ಟೇ ಅಲ್ಲ; ಸಂಪೂರ್ಣ ದೇಹದ ಚಲನೆಯನ್ನೇ ನಿರ್ವಹಿಸುತ್ತಿದೆ. ಅಂತಹ ಪತ್ರಿಕೆಯ ಓದಿನಿಂದಲೇ ನಮ್ಮ ದೈನಂದಿನ ಚಟುವಟಿಕೆ ಆರಂಭವಾಗುತ್ತದೆ. ಓದುವ ಹವ್ಯಾಸವನ್ನೂ ಬೆಳೆಸಿದೆ. ಒಂದು ದಿನ ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಭಾವ. ಜ್ಞಾನ ಬಿತ್ತರಿಸುವ ಕಾರ್ಯದಲ್ಲಿ ತೊಡಗಿರುವ ‘ಪ್ರಜಾವಾಣಿ’ಗೆ ಋಣಿಯಾಗಿದ್ದೇನೆ.
-ಟಿ.ಎಂ.ಮಚ್ಚೆ,ರೆವರೆಂಡ್ ಜೆ.ಟಿ.ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದಪ್ರಧಾನ ಕಾರ್ಯದರ್ಶಿ, ಬೀದರ್

***

ಪ್ರಜಾವಾಣಿ ಎಂದೆಂದಿಗೂ ಹಚ್ಚಹಸಿರು...
ನನ್ನಿಷ್ಟದ ಪತ್ರಿಕೆ ಪ್ರಜಾವಾಣಿ. ₹ 4 ಬೆಲೆಯ ‘ಪ್ರಜಾವಾಣಿ’ ಖರೀದಿ‌ಸಲು 3 ಕಿ.ಮೀ. ದೂರ ಹೋಗುತ್ತಿದ್ದೆ.

ಇದನ್ನು ಖರೀದಿಸಿ ಓದಿದರೆ ಸಾಕು, ಏನೋ ಸಮಾಧಾನ, ಖುಷಿ. ಇತರೆ ಯಾವುದೇ ಪತ್ರಿಕೆಯ ಯಾವುದೇ ಸುದ್ದಿಗಳು ಓದುವ ಮುನ್ನ ಮೊದಲಿಗೆ ಸಂಪಾದಕೀಯ ಪುಟ ತಿರುವಿ ನೋಡಿ ಅಲ್ಲಿ ಯಾವ ಅಂಕಣ ಇದೆ ಎಂದು ಕುತೂಹಲದಿಂದ ಗಮನಿಸಿ ಓದುವುದು ನನ್ನ ಆಲ್ ಟೈಂ ಹವ್ಯಾಸ.

ಇಂದು ನಂಗೆ ನಾಕ್ ಅಕ್ಷರ ಬರೀಲಾಕ್ ಕಲಿತಿರುವುದಕ್ಕೆ ‘ಪ್ರಜಾವಾಣಿ’ ಪಾಲೂ ಇದೆ ಎಂದು ಖುಷಿಯಿಂದ ಹೇಳಬಲ್ಲೆ. ದೊಡ್ಡದಾಗಿ ವರ್ಣಿಸಿ ಗೀಚುವ ಬದಲು ಚಿಕ್ಕದಾಗಿ ಅಷ್ಟೇ ಅರ್ಥಗರ್ಭಿತವಾಗಿ ಬರೆಯುವುದು, ಸಣ್ಣ ಕಾಗುಣಿತವೂ ತಪ್ಪಾಗದಂತೆ ಬರೆಯುವುದನ್ನು ಪ್ರಜಾವಾಣಿಯಿಂದ ಕಲಿತಿರುವೆ. ಪ್ರಜಾವಾಣಿ ಎಂದೆಂದಿಗೂ ಎವರ್ ಗ್ರೀನ್..!
–ಬಾಲಾಜಿ ಕುಂಬಾರ,ಯುವ ಬರಹಗಾರ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.