ವಾಚಕರ ವಾಣಿ
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಸಾಹಿತ್ಯೋತ್ಸವಕ್ಕೆ ವಿದ್ಯಾರ್ಥಿಗಳ ಸ್ಪಂದನ ನೀರಸವಾಗಿತ್ತು ಎಂದು ಆಯೋಜಕರು ಹೇಳಿರುವುದಾಗಿ ವರದಿಯಾಗಿದೆ. ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ದಂತಹ ಕಾರ್ಯಕ್ರಮಗಳು ಎಲ್ಲಿಯೇ ನಡೆಯಲಿ ವಿದ್ಯಾರ್ಥಿಗಳು, ಯುವಪೀಳಿಗೆಯ ಭಾಗವಹಿಸುವಿಕೆ ತೀರಾ ಕಡಿಮೆ ಆಗಿದೆ. ಅಷ್ಟೇ ಏಕೆ, ಶಿಕ್ಷಕರು, ಉಪನ್ಯಾಸಕರು ಕೂಡ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಹೊಸ ವಿಚಾರ, ಚಿಂತನೆಗಳಿಗೆ ತೆರೆದುಕೊಳ್ಳುವುದಿಲ್ಲ.
ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಹೊಸ ವಿಚಾರ, ಚಿಂತನೆಗಳನ್ನು ಪ್ರೇರೇಪಿಸುವಂತಹ ಶೈಕ್ಷಣಿಕ ವಾತಾವರಣ ಇಲ್ಲವಾಗಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. ವಿದ್ಯಾರ್ಥಿಗಳ ಮೊಬೈಲ್ ಫೋನ್ ಗೀಳು ಗಂಭೀರ ಅಧ್ಯಯನ ಹಾಗೂ ಆಳವಾದ ಚಿಂತನೆಗೆ ಮಿತಿಯಾಗಿ ಪರಿಣಮಿಸಿದೆ. ಬೋಧಕವರ್ಗ ಕೂಡ ಇಂಥ ಕಾರ್ಯಕ್ರಮಗಳಿಂದ ದೂರ ಉಳಿಯುವುದು ಇನ್ನೂ ಶೋಚನೀಯ. ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಕಲಿಕೆಯೇ ಹಿಂದೆ ಸರಿಯು ತ್ತಿರುವಾಗ, ಮುಂಬರುವ ದಿನಗಳು ಆಶಾದಾಯಕವಾಗಿ ಇರಬಲ್ಲವೇ ಎಂಬ ಬಗ್ಗೆಯೇ ಅನುಮಾನ ಮೂಡುತ್ತದೆ.
- ವೆಂಕಟೇಶ ಮಾಚಕನೂರ, ಧಾರವಾಡ
‘ಹಳ್ಳಿಯಲ್ಲಿ ಯಶಸ್ವಿ ಉದ್ಯೋಗ ಮೇಳ’ ಶೀರ್ಷಿಕೆಯ ವರದಿ (ಪ್ರ.ವಾ., ಫೆ. 19) ಓದಿ ಖುಷಿಯಾಯಿತು. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲ ಕೈಜೋಡಿಸಿ ಆ ಭಾಗದ ಯುವಜನರಿಗೆ ಉದ್ಯೋಗ ಮೇಳ ಏರ್ಪಡಿಸಿದ್ದು ಅನುಕರಣೀಯ ಕಾರ್ಯ.
ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತಿಗೆ ಬಂದ ಎಷ್ಟೋ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಹಂಬಲದಿಂದ ಒಂದೆಡೆ ಸೇರಿ ಕಾರ್ಯಕ್ರಮ ಆಯೋಜಿಸುವ, ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಗೌರವಿಸುವಂತಹ ಕಾರ್ಯಕ್ರಮಗಳ ಬಗ್ಗೆ ಓದಿ ತಿಳಿದಿದ್ದೇವೆ. ಆದರೆ, ಭಾನುವಳ್ಳಿಯ ಹಳೆಯ ವಿದ್ಯಾರ್ಥಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು ಮೆಚ್ಚುವಂತಹ ಕಾರ್ಯ. ನಿರುದ್ಯೋಗಿಗಳಿಗೆ ನೆರವಾಗುವಂತಹ ಸಾರ್ಥಕ ಕೆಲಸ ಇದು.
-ಕಡೂರು ಫಣಿಶಂಕರ್, ಬೆಂಗಳೂರು
ರಾಜ್ಯದ ಆಡಳಿತ ಪಕ್ಷ ಮತ್ತು ಅಧಿಕೃತ ವಿರೋಧ ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಕರ್ನಾಟಕದ ಜನರಿಗೆ ಭರಪೂರ ಮನರಂಜನೆ ಒದಗಿಸುತ್ತಿವೆ. ಅದರಲ್ಲೂ ಆಡಳಿತ ಪಕ್ಷದೊಳಗಿನ ಬೆಳವಣಿಗೆಯು ಪಕ್ಷದ ಹಿತದೃಷ್ಟಿಯಿಂದಲೂ ಆಡಳಿತದ ದೃಷ್ಟಿಯಿಂದಲೂ ಕಾರ್ಯಕರ್ತರ ದೃಷ್ಟಿಯಿಂದಲೂ ಅಷ್ಟೇನೂ ಒಳ್ಳೆಯದಲ್ಲ.
ಎರಡೂ ಪಕ್ಷಗಳ ಮಾತಿನ ಶೂರರು ಪಕ್ಷಕ್ಕಾಗಲೀ ಹೈಕಮಾಂಡ್‌ಗಾಗಲೀ ಬೆಲೆ ಕೊಟ್ಟಂತೆ ತೋರುತ್ತಿಲ್ಲ. ಅವರ ವರ್ತನೆಯ ಹಿಂದೆ ಯಾರೋ ಪ್ರಭಾವಿಗಳ ಕುಮ್ಮಕ್ಕಿದೆ ಎಂಬ ಅನುಮಾನ ಬಾರದೇ ಇರದು. ಡಿ.ಕೆ. ಶಿವಕುಮಾರ್ ಮತ್ತು ಕೆ.ಎನ್. ರಾಜಣ್ಣ ಅವರ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಿವಾದದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದಿದ್ದಾರೆ (ಪ್ರ.ವಾ., ಫೆ. 19). ಖಡಕ್ ಮಾತಿಗೆ ಹೆಸರಾಗಿರುವ ಸಿದ್ದರಾಮಯ್ಯನವರ ಈ ಮಾತಿನ ಅರ್ಥವೇನು? ಅವರಿಗೆ ಇದೆಲ್ಲವನ್ನೂ ಹಿಡಿತದಲ್ಲಿಡುವ ಶಕ್ತಿಯಿಲ್ಲವೆಂದೋ ಹಾಗೆ ಮಾಡಲು ಇಚ್ಛೆ ಇಲ್ಲವೆಂದೋ ಅಥವಾ ನಡೆಯುತ್ತಿರುವುದೆಲ್ಲ ತಮ್ಮ ಮೂಗಿನ ನೇರಕ್ಕೇ ನಡೆಯುತ್ತಿದೆ ಎಂದೋ?
- ಹೊಸಮನೆ ವೆಂಕಟೇಶ, ಟಿ. ನರಸೀಪುರ
ಹಣಕಾಸಿನ ವಿಚಾರದಲ್ಲಿ ಆದ ಸಮಸ್ಯೆಯಿಂದ, ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ (ಪ್ರ.ವಾ., ಫೆ. 19) ಓದಿ ಆಶ್ಚರ್ಯ, ಆಘಾತ, ನೋವು ಒಟ್ಟಿಗೆ ಉಂಟಾಯಿತು. ಬದುಕು ಅಷ್ಟೊಂದು ಭಾರವೇ ಎಂಬ ಪ್ರಶ್ನೆ ಮೂಡಿತು. ಕ್ಯಾನ್ಸರ್‌ಪೀಡಿತ ನನ್ನ ಅಣ್ಣನಿಗೆ ಬದುಕುವ ಅದಮ್ಯ ಆಸೆ ಇತ್ತು. ಬಹಳ ದಿನಗಳ ಹೋರಾಟದ ನಂತರ ಇಹಲೋಕ ತ್ಯಜಿಸಿದ. ಅಪಾರ ಜೀವನಪ್ರೀತಿ, ಸ್ನೇಹಿತರ ಬಳಗ ಹೊಂದಿದ್ದ. ಪ್ರಾಧ್ಯಾಪಕ ನಾಗಿದ್ದ ಆತನೊಂದಿಗೆ ಆಸ್ಪತ್ರೆಯಲ್ಲಿಯೇ ಸಾಹಿತ್ಯದ ಓದು, ಹೊಸ ಪುಸ್ತಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.
ಗಂಭೀರ ರೋಗಬಾಧೆಗೆ ಒಳಗಾದವರೇ ಜೀವನಪ್ರೀತಿ ಬಿಟ್ಟುಕೊಡದೆ ರೋಗದ ವಿರುದ್ಧ ಹೋರಾಡುತ್ತಾರೆ. ಅಂತಹುದರಲ್ಲಿ ಆರೋಗ್ಯವಂತರು ಬದುಕಿನಲ್ಲಿ ಎದುರಾಗುವ ಎಡರು–ತೊಡರುಗಳನ್ನು ಎದುರಿಸಲಾಗದೆ ಸಾವಿಗೆ ಶರಣಾಗುತ್ತಿರುವುದು ವಿಷಾದಕರ. ಕೋವಿಡ್ ನಂತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾತಿದೆ. ಇದು, ನಿಜವೇ ಆಗಿದ್ದರೆ ಏಕೆ ಹೀಗೆ ಆಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ತಜ್ಞರು ಉತ್ತರಿಸಬೇಕಾಗಿದೆ. ಮನಸ್ಸಿಗೆ ಉಲ್ಲಾಸ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒತ್ತಡಗಳಿಂದ ಹೊರಬರಬೇಕು. ಬದುಕಲು ಹಣ ಬೇಕು. ಆದರೆ ಹಣವೊಂದೇ ಜೀವನವಲ್ಲ. ಈ ಸತ್ಯವನ್ನು ಅರಿಯಬೇಕು.
- ಗುರು ಜಗಳೂರು, ಹರಿಹರ
ಅನಗತ್ಯ ತಪಾಸಣೆ ಮತ್ತು ಹೆಚ್ಚು ಬಿಲ್ ಕಾರಣದಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯವಾಗುತ್ತದೆ, ವೈದ್ಯಕೀಯ ಸೇವೆ ವ್ಯಾಪಾರವಾಗಿದೆ ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ (ಕಿಡಿನುಡಿ, ಫೆ. 19) ಸರಿಯಾಗಿದೆ. ಖಾಸಗಿ ಆಸ್ಪತ್ರೆಗಳ ಶೋಷಣೆ ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯ. ಆದರೆ, ಬರೀ ಇಂತಹ ಹೇಳಿಕೆಗಳನ್ನು ನೀಡುವುದರಿಂದ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಮಧ್ಯಮ ವರ್ಗ ಮತ್ತು ಬಡತನ ರೇಖೆಯಿಂದ ಕೆಳಗಿರುವ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಕೈಗೆಟಕುವ ರೀತಿಯಲ್ಲಿ ಒದಗಿಸಬೇಕಾದದ್ದು ಯಾವುದೇ ಪಕ್ಷದ ನೇತೃತ್ವದ ಸರ್ಕಾರದ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ ಆರಂಭಿಸಬೇಕು. ದಕ್ಷ ವೈದ್ಯರು ಮತ್ತು ಶುಶ್ರೂಷಕರನ್ನು ನೇಮಿಸಿ ಅವರಿಗೆ ಕೈತುಂಬಾ ಸಂಬಳ ಸವಲತ್ತನ್ನು ನೀಡಬೇಕು. ಅದು ಬಿಟ್ಟು ಬರೀ ಭಾಷಣ ಮಾಡಿದರೆ ‘ಹುತ್ತವ ಬಡಿದರೆ ಹಾವು ಸಾಯದು’ ಎಂಬಂತೆ ಆಗುತ್ತದೆ.
- ಎಚ್.ಎಸ್.ಚಂದ್ರಶೇಖರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.