ವಾಚಕರ ವಾಣಿ
ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ನದಿಯ ಒಡಲಿನಂತೆ ಇರುವ ಲಿಂಗನಮಕ್ಕಿ ಜಲಾಶಯವು, ಪ್ರಸಕ್ತ ಮಳೆ ಋತುವಿನಲ್ಲಿ ಊಹೆಗೂ ಮೀರಿ ಗರಿಷ್ಠ ಮಟ್ಟ ತಲುಪುವತ್ತ ಸಾಗಿದೆ. ಈ ನದಿ, ಅಣೆಕಟ್ಟೆಯಿಂದ ಹಲವಾರು ಜನರು ಮನೆ, ಜಮೀನು, ಭಾವನಾತ್ಮಕ ನಂಟು ಕಳೆದುಕೊಂಡು ತೊಂದರೆ ಅನುಭವಿಸಿ ದ್ದನ್ನು ಸಾಹಿತಿ ನಾ. ಡಿಸೋಜ ಅವರು ಸಮೀಪದಿಂದ ಬಲ್ಲವರಾಗಿದ್ದರು. ತಮ್ಮ ಅನುಭವವನ್ನು ಅವರು ಕಥೆ, ಲೇಖನ, ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಸ್ತಂಗತರಾದ ‘ನಾಡಿ’ ಅವರಿಗೆ ಈ ನದಿ, ಅಣೆಕಟ್ಟು, ಪ್ರದೇಶದ ಜನರ ಬಗ್ಗೆ ವಿಶೇಷ ಕಾಳಜಿ ಇತ್ತು. ಪ್ರಕೃತಿ ಮಾತೆ ಅಗೋಚರ ಶಕ್ತಿಯಾಗಿ ತನ್ನ ಪುತ್ರನಿಗೆ ಶ್ರದ್ಧಾಂಜಲಿ ರೂಪದಲ್ಲಿ ಕಂಬನಿ ಮಿಡಿಯುತ್ತಿರುವಂತೆ ಶರಾವತಿ ಕೊಳ್ಳದಲ್ಲಿನ ವರ್ಷಧಾರೆ ಕಾಣಿಸುತ್ತಿದೆ.
–ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಕೇಂದ್ರಿತ ಆಗುತ್ತಿದೆಯೇ ಎನ್ನುವ ಡಿ.ಎಸ್. ಚೌಗಲೆ (ಪ್ರ.ವಾ., ಜುಲೈ 28) ಅವರ ಆತಂಕ ನನ್ನದೂ ಹೌದು. ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳು ಈ ಬಾರಿ ಅಕಾಡೆಮಿಯ ಪ್ರಶಸ್ತಿಗಳಿಂದ ವಂಚಿತವಾಗಿವೆ. ನಾಟಕ ಅಕಾಡೆಮಿ ಮಾತ್ರವಲ್ಲ; ಬಹುತೇಕ ಅಕಾಡೆಮಿಗಳ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವುದು, ಕರ್ನಾಟಕ ಚಲನಚಿತ್ರ ಅಕಾಡೆಮಿ. ವರ್ಷಕ್ಕೊಮ್ಮೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವುದಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಂಡಿದೆ. ಚಿತ್ರೋದ್ಯಮದ ರಚನಾತ್ಮಕ ಬೆಳವಣಿಗೆಗೆ ಅಗತ್ಯವಾದ ಚಟುವಟಿಕೆಗಳನ್ನು ಮಾಡುವುದು ತನ್ನ ಕಾರ್ಯ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಅಕಾಡೆಮಿ ಸಂಪೂರ್ಣ ಮರೆತಿದೆ.
–ಸಿರಿಗೇರಿ ಯರಿಸ್ವಾಮಿ, ಬಳ್ಳಾರಿ
‘ಹೆಣ್ಣುಮಕ್ಕಳು ಪಡೆಯುತ್ತಿರುವ ಉನ್ನತ ಶಿಕ್ಷಣ ಶಾಪವಾಗುತ್ತಿದೆ’ (ಪ್ರ.ವಾ., ಜುಲೈ 27) ಎನ್ನುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಅಹಲ್ಯಾ ಶರ್ಮಾ ಹಾಗೂ ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಅವರ ಅಭಿಪ್ರಾಯ ಸರಿಯಲ್ಲ. ಬದಲಾದ ಕಾಲಕ್ಕೆ ತಕ್ಕಂತೆ ಪುರುಷ ವರ್ಗವೂ ಬದಲಾಗಬೇಕು ಎಂಬ ಸತ್ಯವನ್ನು ಅರಿಯದೆ ಹೋದವರು ಇಂತಹ ಅಭಿಪ್ರಾಯ ಹೊಂದಿರುತ್ತಾರೆ. ಪುರುಷ ಎಂಬ ಅಹಂ ಭಾವವನ್ನು ಬದಿಗೊತ್ತಿ, ಕೌಟುಂಬಿಕ ಕೆಲಸಗಳಲ್ಲಿ ಸಮಭಾಗಿಯಾಗುವುದನ್ನು ಕಲಿತಾಗ ಯಾವ ಹೆಣ್ಣೂ ಕೌಟುಂಬಿಕ ವ್ಯವಸ್ಥೆಯನ್ನು ಧಿಕ್ಕರಿಸಲಾರಳು. ಗಂಡು ಮಕ್ಕಳ ತಾಯ್ತಂದೆಯರು ಇದನ್ನು ಅರಿತು ಮಕ್ಕಳನ್ನು ಬೆಳೆಸಬೇಕು. ಮಕ್ಕಳನ್ನು ಹೊತ್ತು, ಹೆತ್ತು ಸಾಕುವ ಹೊಣೆ ಹೆಣ್ಣೊಬ್ಬಳದೇ ಅಲ್ಲ, ಇಬ್ಬರದೂ ಎಂಬ ಅರಿವಿರಬೇಕು. ಗಂಡು– ಹೆಣ್ಣು ಮಕ್ಕಳಿಬ್ಬರಿಗೂ ವಿವಾಹಪೂರ್ವ ಮಾರ್ಗದರ್ಶನ ಅತ್ಯಗತ್ಯ.
-ಕುಸುಮ ಕೆ.ಎಲ್., ಆಲ್ಕೊಳ
ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಆಸಕ್ತಿವಹಿಸಿಲ್ಲ. ಕೇಂದ್ರ ಸರ್ಕಾರವೂ ಹಣ ಮೀಸಲಿಟ್ಟಿಲ್ಲ (ಪ್ರ.ವಾ., ಜುಲೈ 27). ಜಲಾಶಯದಲ್ಲಿ ಪ್ರತಿ ವರ್ಷ ಅರ್ಧ ಟಿಎಂಸಿ ಅಡಿಯಷ್ಟು ಹೂಳು ಸೇರುತ್ತಿದೆ. ಇದರಿಂದ ಪ್ರತಿ ವರ್ಷ ಸುಮಾರು 33 ಟಿಎಂಸಿ ಅಡಿ ನೀರಿನ ಬಳಕೆಯಿಂದ ನಾವು ವಂಚಿತರಾಗಿದ್ದೇವೆ. ಈ ಬಾರಿ ರಾಜ್ಯ ಸರ್ಕಾರ ಗೇಟ್‌ಗಳ ದುರಸ್ತಿಗೆ ನಿರ್ಲಕ್ಷ್ಯ ತೋರಿದ್ದರಿಂದ ಹೆಚ್ಚುವರಿ 20 ಟಿಎಂಸಿ ಅಡಿ ನೀರು ವ್ಯರ್ಥವಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಠೆಗೆ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ರೈತರು ತೊಂದರೆ ಅನುಭವಿಸುವಂತಾಗಿದೆ.
- ಚಂದ್ರು ಪಾಟೀಲ, ಕೊಪ್ಪಳ
ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ದೇಗುಲ ಇದೆ ಎನ್ನುವ ಕಾರಣಕ್ಕೆ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಕೊಡುವುದರ ಬಗ್ಗೆ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಕೆಲವು ಪೋಷಕರು ತಕರಾರು ಎತ್ತಿದ್ದಾರೆ. ಇದೆಂಥ ವಿಚಿತ್ರ! ಹಿಂದೂ ಧರ್ಮದಲ್ಲಿ ಕೋಟ್ಯಂತರ ದೇವರಿದ್ದಾರೆ. ಕೆಲವು ದೇವರುಗಳಿಗೆ ಮದ್ಯ, ಮಾಂಸದ ನೈವೇದ್ಯ ಅರ್ಪಿಸುವುದು ರೂಢಿಯಲ್ಲಿದೆ. ಹೀಗಿರುವಾಗ ದೇವರ ನೆಪ ಹೇಳಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮೊಟ್ಟೆ ನೀಡುವುದನ್ನು ನಿರಾಕರಿಸುವುದು ಅಕ್ಷಮ್ಯ. ಇದರಿಂದ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಜಾತೀಯತೆಯ ವಿಷ ಬೀಜ ಬಿತ್ತಿದಂತಾಗುವುದಿಲ್ಲವೇ? ಚಂದ್ರಪ್ರಭ ಕಠಾರಿ, ಬೆಂಗಳೂರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮದ ನಾನು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದೇನೆ. ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಚಿಕಿತ್ಸೆ ಮತ್ತು ಔಷಧಗಳಿಗೆ ಹಣ ಹೊಂದಿಸುವುದು ಕಷ್ಟವಾಗಿದೆ. ದಾನಿಗಳು ಆರ್ಥಿಕ ನೆರವು ನೀಡಬೇಕೆಂದು ಕೋರುವೆ. ಬ್ಯಾಂಕ್ ಖಾತೆ ವಿವರ: ರಾಧಾ ಟಿ.ಎಚ್., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ: 520101007490549. ಐಎಫ್‌ಎಸ್‌ಸಿ ಕೋಡ್: ಯುಬಿಐಎನ್0900508.
- ರಾಧಾ ಟಿ.ಎಚ್., ಅರಳುಮಲ್ಲಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.