ADVERTISEMENT

ವಾಚಕರ ವಾಣಿ | ಶುಕ್ರವಾರ, ಮಾರ್ಚ್ 10, 2023

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:31 IST
Last Updated 9 ಮಾರ್ಚ್ 2023, 19:31 IST
   

ಸಂತೋಷ ತಂದ ಬಿಎಂಟಿಸಿ ನಡೆ
ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8ರಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳಲ್ಲಿ ಮಹಿಳೆಯರಿಗೆಲ್ಲಾ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು ಸ್ವಾಗತಾರ್ಹ. ಇದರಿಂದ ದಿನದ ವಹಿವಾಟಿನಲ್ಲಿ ಬಿಎಂಟಿಸಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದರೂ ಮಹಿಳೆಯರ ಮೇಲೆ ನಿಗಮ ಇಟ್ಟಿರುವ ಗೌರವ ಮೆಚ್ಚುವಂತಹುದು. ಬಸ್ಸಿನಲ್ಲಿ ನಿತ್ಯ ಓಡಾಡುವ ನಮಗೆಲ್ಲಾ ನಿಜಕ್ಕೂ ಸಂತೋಷವಾಯಿತು. ಇದನ್ನು ಹೀಗೇ ಪ್ರತಿವರ್ಷವೂ ಮುಂದುವರಿಸಲಿ.

ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಯರ ರಕ್ಷಣೆಗೂ ಕ್ರಮ ಕೈಗೊಳ್ಳಲಿ. ಬಸ್ಸಿನಲ್ಲಿ ಕಳ್ಳತನ, ಕೆಲವು ಪುರುಷರ ನಡವಳಿಕೆ ಬೇಸರ ತರಿಸುತ್ತದೆ. ಕಚೇರಿ ಹಾಗೂ ಶಾಲಾ ಕಾಲೇಜಿಗೆ ತೆರಳುವ ಮತ್ತು ವಾಪಸ್‌ ಬರುವ ವೇಳೆಯಲ್ಲಿ ಮಹಿಳೆಯರು, ಮಕ್ಕಳಿಗಾಗಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲಿ. ಜೊತೆಗೆ ಸಾರ್ವಜನಿಕರು ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಜೊತೆ ಉತ್ತಮ ಬಾಂಧವ್ಯ ಹೊಂದಿ ಅವರೊಂದಿಗೆ ಸಹಕರಿಸಬೇಕಾದುದು ಅತ್ಯಗತ್ಯ.
–ಅರ್ಪಣಾ ಸ್ವರೂಪ್‌, ಬೆಂಗಳೂರು

**

ADVERTISEMENT

ಬೇಕಿತ್ತೇ ಇಷ್ಟೆಲ್ಲ ನಾಟಕ?
ಕರ್ನಾಟಕ ಲೋಕಾಯುಕ್ತದವರು ‘ಭಾರಿ ಕುಳ’ವನ್ನು ಹಿಡಿದ ಸುದ್ದಿ ಇತ್ತೀಚಿನ ದಿನಗಳಲ್ಲಿ ಜನಜನಿತವಾಗಿದೆ. ಆಶ್ಚರ್ಯವೆಂದರೆ, ಪೊಲೀಸರು ಬಂಧಿಸಬೇಕೆಂದಿದ್ದ ಆರೋಪಿಯು ಇಡೀ ದೇಶದಲ್ಲೇ ಪತ್ತೆಯಾಗುವುದಿಲ್ಲ. ಅದಕ್ಕಾಗಿ ಲುಕ್‍ಔಟ್ ನೋಟಿಸ್ ಹೊರಡಿಸಬೇಕೆಂಬ ಗಂಭೀರ ಚಿಂತನೆಯೂ ನಡೆಯುತ್ತದೆ! ಆರೋಪಿ ಹೇಳುತ್ತಾರೆ, ‘ಮನಸ್ಸಿಗೆ ತೀವ್ರ ಬೇಸರವಾಗಿ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡು ಸ್ವಂತ ಊರಿನಲ್ಲಿಯೇ ಇದ್ದೆ’ ಎಂದು! ಇನ್ನೂ ಅಸಹ್ಯವೆಂದರೆ, ನಿರೀಕ್ಷಣಾ ಜಾಮೀನು ಸಿಕ್ಕ ಕಾರಣ, ಆರೋಪಿಯು ಬೇಡಬೇಡವೆಂದು ಗೋಗರೆದರೂ ಬೆಂಬಲಿಗರು ಮೆರವಣಿಗೆ ಮಾಡುತ್ತಾರೆ!

ಅಸಂಖ್ಯಾತ ವಿಚಾರಣಾಧೀನ ಕೈದಿಗಳು ನಿರೀಕ್ಷಣಾ ಜಾಮೀನಿಗಾಗಿ ಹಲವಾರು ವರ್ಷಗಳಿಂದ ಕಾಯುತ್ತಿದ್ದರೂ, ಅವು ಇನ್ನೂ ವಿಚಾರಣೆಗೆ ಬಂದಿಲ್ಲ. ಯಾರ ಕಿವಿಯ ಮೇಲೆ ಯಾವ ಹೂವು ಇಡುವ ಪ್ರಯತ್ನ ಇದೆಲ್ಲ? ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಮುಖ್ಯಮಂತ್ರಿಯವರಿಗೂ ಜಾಮೀನು ಮಂಜೂರಾದ ಮಾಹಿತಿ ದೊರೆಯುವುದಿಲ್ಲ, ಮಾಧ್ಯಮಗಳಿಂದಲೇ ತಿಳಿದುಕೊಳ್ಳುವ ಪರಿಸ್ಥಿತಿ! ಜಾಮೀನು ಪ್ರಕ್ರಿಯೆಯ ಬಗ್ಗೆಯೇ ವಕೀಲರ ಸಂಘಕ್ಕೆ ಅಸಮಾಧಾನ. ನಿಜಕ್ಕೂ ಇಷ್ಟೆಲ್ಲ ನಾಟಕದ ಅಗತ್ಯವಿತ್ತೇ?
–ಚನ್ನು ಹಿರೇಮಠ, ರಾಣೆಬೆನ್ನೂರು

**

ಸಕಾರಾತ್ಮಕ ಚಿಂತನೆ ರವಾನಿಸಿದ ಆದೇಶ
‘ಅಕಾಡೆಮಿ ಕಪಾಟಿಗೆ ವಕೀಲರೊಬ್ಬರ ವಗೈರೆಗಳು’ ವರದಿಯನ್ನು (ಪ್ರ.ವಾ., ಮಾರ್ಚ್‌ 8) ಓದಿ ಬಹಳ ಆನಂದವಾಯಿತು. ನ್ಯಾಯಾಲಯದ ಕಲಾಪಗಳಲ್ಲಿ ದಂಡದ ಬದಲಾಗಿ ವಕೀಲರೊಬ್ಬರ ಪುಸ್ತಕವನ್ನು ಅಕಾಡೆಮಿಯ ಗ್ರಂಥ ಭಂಡಾರಕ್ಕೆ ನೀಡಬೇಕೆಂಬ ಆದೇಶ ವಿಶೇಷವೇ ಸರಿ. ಈ ರೀತಿಯ ವಿಭಿನ್ನ ಹಾಗೂ ಅರ್ಥಪೂರ್ಣ ಸನ್ನಿವೇಶಗಳು ನ್ಯಾಯಾಂಗದ ಮೇಲಿರುವ ಸಾರ್ವಜನಿಕರ ಗೌರವವನ್ನು ಹೆಚ್ಚಿಸುವಂತೆ ಮಾಡುತ್ತವೆ. ಸಿ.ಎಚ್.ಹನುಮಂತರಾಯ ಅವರದ್ದು ಐವತ್ತು ವರ್ಷಗಳ‌ ಸುದೀರ್ಘ ವಕೀಲಿಕೆ. ಒಬ್ಬ ಕ್ರಿಮಿನಲ್ ವಕೀಲರಾಗಿ ಅವರು ಹೊಂದಿರುವ ಸಾಮಾಜಿಕ ಜವಾಬ್ದಾರಿ ಕಿರಿಯರಿಗೆ ಅನುಕರಣೀಯ. ಅವರು ಬರೆದಿರುವ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕದಲ್ಲಿ ಅನೇಕ ಸಾಮಾಜಿಕ ಅಂಶಗಳು, ಕಾನೂನಿನ ಕೌತುಕದ ಅನೂಹ್ಯ ಬಣ್ಣನೆಗಳಿವೆ. ಸಮಾಜದ ಸೂಕ್ಷ್ಮ ನ್ಯೂನತೆಗಳು, ಪಿಡುಗುಗಳು ಹಾಗೂ ಕೆಲವು ಆಚಾರ-ವಿಚಾರಗಳನ್ನು ಅವರು ಈ ಪುಸ್ತಕದಲ್ಲಿ ಓದುಗರಿಗೆ ಮನಸ್ಸು ಪರಿವರ್ತನೆಯಾಗುವ ರೀತಿಯಲ್ಲಿ ಪ್ರಸ್ತುತಪಡಿಸಿರುವುದು ಎದ್ದು ಕಾಣುತ್ತದೆ. ಈ ಪುಸ್ತಕವು ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ದಂಡಕ್ಕೆ ಬದಲಾಗಿ ಈ ಪುಸ್ತಕವನ್ನು ಅಕಾಡೆಮಿಯ ಗ್ರಂಥ ಭಂಡಾರಕ್ಕೆ ನೀಡಲು ಆದೇಶಿಸಿರುವುದು ಚಾರಿತ್ರಿಕವಾಗಿದೆ. ಈ ರೀತಿಯ ಬೆಳವಣಿಗೆಗಳು ನ್ಯಾಯಾಂಗದಲ್ಲಿ ಆಗುತ್ತಿರುವುದು ಮುಂದಿನ ದಿನಗಳಿಗೆ ಸಕಾರಾತ್ಮಕ ಚಿಂತನೆಗಳನ್ನು ರವಾನಿಸಿದಂತೆಯೇ ಸರಿ.
–ಎಚ್.ಸುನಿಲ್ ಕುಮಾರ್, ಬೆಂಗಳೂರು

**

ಬೆಂಬಲ ಬೆಲೆ: ನಿರ್ವಹಣೆ ಸುಗಮವಾಗಲಿ
‘ಬೆಲೆ ಕುಸಿತದ ಕೂಪದಲ್ಲಿ ಕೊಬ್ಬರಿ ಬೆಳೆಗಾರ’ ಲೇಖನ (ಪ್ರ.ವಾ., ಮಾರ್ಚ್‌ 9) ಕೊಬ್ಬರಿ ಬೆಳೆಗಾರನ ಸಂಕಟವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ ಸುಮಾರು 4,000 ಉಂಡೆ ಕೊಬ್ಬರಿಗೆ ಒಂದು ಲಕ್ಷ ರೂಪಾಯಿ ಪಡೆದಿದ್ದೆ. ಈ ವರ್ಷ 4,200 ಉಂಡೆ ಕೊಬ್ಬರಿಗೆ ನನಗೆ ಸಿಕ್ಕಿರುವ ಹಣ ಕೇವಲ ₹ 52,000. ಹೀಗೆ ಆದಾಯಕ್ಕೆ ಅರ್ಧಕ್ಕರ್ಧ ಹೊಡೆತ ಬಿದ್ದರೆ ರೈತರು ಉಸಿರಾಡುವುದಾದರೂ ಹೇಗೆ? ಈ ವರ್ಷ ಕೊಬ್ಬರಿಗೆ ಕ್ವಿಂಟಲ್‌ಗೆ ಬೆಂಬಲ ಬೆಲೆ ₹ 11,750 ನಿಗದಿಯಾಗಿದೆ. ಆದರೆ ಖರೀದಿ ಕೇಂದ್ರಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ (ಇದು ಕನಿಷ್ಠ ₹ 15 ಸಾವಿರದಿಂದ 16 ಸಾವಿರವಾದರೂ ಇರಬೇಕಿತ್ತು).

ನಬಾರ್ಡ್‌ ಕೇಂದ್ರಗಳಲ್ಲಿ ಕೊಬ್ಬರಿ ಮಾರಾಟ ಮಾಡುವುದು ಯಾವತ್ತೂ ರೈತರಿಗೆ ಸವಾಲಿನ ಕೆಲಸ. ದಾಖಲೆ ನೀಡಿ, ಹೆಸರು ನೋಂದಣಿ ಮಾಡಿಸಿದ ಮೇಲೆ ಅವರು ಹೇಳಿದ ದಿನ ಕೊಬ್ಬರಿ ತೆಗೆದುಕೊಂಡು ಹೋಗಬೇಕು. ಕೆಲವೊಮ್ಮೆ ಒಂದೆರಡು ದಿನಗಳಾದರೂ ಮಾರುಕಟ್ಟೆಯಲ್ಲಿ ಕಾಯಬೇಕು. ಶೇ 20-25ರಷ್ಟು ಕೊಬ್ಬರಿಯನ್ನು ಆರಿಸಿ ತಿರಸ್ಕರಿಸಿ, ಉಳಿದಿದ್ದನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಅವರು ಬೇಡ ಅಂದ ಕೊಬ್ಬರಿ ಅರ್ಧ ಬೆಲೆಗೂ ಮಾರಾಟವಾಗುವುದಿಲ್ಲ! ಬೆಂಬಲ ಬೆಲೆಯ ಆಶಯ ಒಳ್ಳೆಯದಿದ್ದರೂ ಅದನ್ನು ನಿರ್ವಹಿಸುತ್ತಿರುವ ರೀತಿ ತೀರಾ ಕೆಟ್ಟದ್ದಾಗಿದೆ. ಇನ್ನು ಮೇಲಾದರೂ ಕೊಬ್ಬರಿ ಬೆಳೆಗಾರರು, ರೈತ ಸಂಘದವರು ಎಚ್ಚೆತ್ತು, ಕನಿಷ್ಠ ಬೆಂಬಲ ಬೆಲೆ ₹ 15,000, ಆರಿಸಿ ಉಳಿದ ಕೊಬ್ಬರಿಗೆ ₹ 10,000 ನೀಡುವ ಆಶ್ವಾಸನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ ಎಂದು ಘೊಷಿಸಿದರೆ, ಸ್ವಲ್ಪಮಟ್ಟಿನ ಉಪಯೋಗವಾಗಬಹುದೇನೊ?!
–ಬಿ.ಆರ್.ಸತ್ಯನಾರಾಯಣ‌, ಚಾಮರಾಜಪುರ, ಚನ್ನರಾಯಪಟ್ಟಣ

*

ಬೇಕಾಗಬಹುದು...!

ಪ್ರತಿದಿನ ಆಗುತ್ತಿದೆ

ಪ್ರತಿಮೆ- ಪುತ್ಥಳಿಗಳ

ಅನಾವರಣ ಸುಗಮ

ಮುಂದೊಂದು ದಿನ ಬೇಕಾಗಬಹುದೇನೊ

ನಿರ್ವಹಣೆಗೇ ಒಂದು ನಿಗಮ.

–ಮಲ್ಲಿಕಾರ್ಜುನ, ಸುರಧೇನುಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.