ADVERTISEMENT

ವಾಚಕರ ವಾಣಿ | ಸೋಮವಾರ, ಮಾರ್ಚ್ 06, 2023

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:30 IST
Last Updated 5 ಮಾರ್ಚ್ 2023, 19:30 IST
   

ಫುಟ್‌ಬಾಲ್‌ ಪಟುಗಳಿಗೂ ಸಿಗಲಿ ಸತ್ಕಾರ
ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಎಷ್ಟು ಪ್ರಾಮುಖ್ಯ ಹೊಂದಿದೆಯೋ ಹಾಗೆಯೇ ಫುಟ್‌ಬಾಲ್‌ನಲ್ಲಿ ಸಂತೋಷ್ ಟ್ರೋಫಿ ಅಷ್ಟೇ ಖ್ಯಾತಿ ಪಡೆದಿದೆ. ಈ ಬಾರಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಸಂತೋಷ್ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ನಮ್ಮ ಕರ್ನಾಟಕ 54 ವರ್ಷಗಳ ನಂತರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಒಂದು ಐತಿಹಾಸಿಕ ಸಾಧನೆ.

ಈಗ ನಮ್ಮ ರಾಜ್ಯದ ರಾಜಕೀಯ ಕ್ರೀಡೆಗಳ ಚದುರಂಗದಾಟದಲ್ಲಿ ಇದು ಹಲವರ ಗಮನಕ್ಕೆ ಬಾರದೆ ನೇಪಥ್ಯಕ್ಕೆ ಸರಿದಿರುವುದು ದುರದೃಷ್ಟಕರ. ರಣಜಿ ಟ್ರೋಫಿ ಗೆದ್ದಿದ್ದರೆ ತಂಡಕ್ಕೆ ಯಾವ ಬಗೆಯಲ್ಲಿ ಪ್ರೋತ್ಸಾಹ, ಸನ್ಮಾನ ದೊರಕುತ್ತಿತ್ತೋ ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ರಾಜ್ಯ ಫುಟ್‌ಬಾಲ್ ಆಟಗಾರರಿಗೂ ಎಲ್ಲ ರೀತಿಯ ಸತ್ಕಾರ, ನಗದು ಬಹುಮಾನ ದೊರಕಬೇಕಾದುದು ನ್ಯಾಯಯುತ.

-ಎಚ್.ವಿ.ಶ್ರೀಧರ್, ಬೆಂಗಳೂರು

ADVERTISEMENT

**

ಮಂತ್ರಿಯಾದರೆ ದಂಧೆ ಮಾಡಬಹುದೇ?
‘ಪುತ್ರ ಲಂಚ ಪಡೆದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಏನು ಮಾಡುತ್ತಾರೆ? ಅವರ ಮಗ ಮಾಡಿದ್ದಕ್ಕೆ ಮುಖ್ಯಮಂತ್ರಿ ಏಕೆ ರಾಜೀನಾಮೆ ನೀಡಬೇಕು?’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿರೂಪಾಕ್ಷಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ? 40 ಪರ್ಸೆಂಟ್‌ ದಂಧೆ ಮಾಡಲು ಅವರು ಮಂತ್ರಿಯಲ್ಲ’ ಎಂದಿದ್ದಾರೆ. ಅಂದರೆ ಅದರರ್ಥ ಮಂತ್ರಿಯಾದರೆ 40 ಪರ್ಸೆಂಟ್‌ ದಂಧೆ ಮಾಡಬಹುದು ಎಂದೇ?

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಕೆಲವು ವರ್ಷಗಳ ನಂತರ ರೈಲೊಂದು ಅಪಘಾತಕ್ಕೀಡಾಗಿತ್ತು. ಅಂದಿನ ರೈಲ್ವೆ ಸಚಿವರಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು ಗಮನಾರ್ಹ. ಈಗ ಲಂಚಕೋರ ಸಚಿವರು, ಶಾಸಕರು, ಅಧಿಕಾರಿಗಳೆಲ್ಲರನ್ನೂ ನಿಯಂತ್ರಿಸಲು ಮುಖ್ಯಮಂತ್ರಿಯೊಬ್ಬರಿಗೆ ಸಾಧ್ಯವಿಲ್ಲ ಎಂಬುದು ಒಪ್ಪತಕ್ಕದ್ದೇ. ಆದರೆ ಇಂಥ ಪ್ರಕರಣಗಳು ಎದುರಾದಾಗ ಅಂತಹವರನ್ನು ಕೂಡಲೇ ಅಮಾನತು ಮಾಡುವ ಕೆಚ್ಚೆದೆಯ ನಿರ್ಧಾರವನ್ನು ಕೈಗೊಳ್ಳಬೇಕು ಅಷ್ಟೆ. ಅದೇ ಜನರ ನಿರೀಕ್ಷೆ. ಅದನ್ನು ಬಿಟ್ಟು ಸಮರ್ಥನೆಗೆ ಇಳಿಯಬಾರದು. ಚಲನಚಿತ್ರದ ಹಾಡೊಂದರಲ್ಲಿ ‘... ಕಳ್ಳರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ, ಭೂಮಿಗೇ ಬೇಲಿ ಹಾಕಬೇಕಲ್ವಾ...’ ಎಂಬ ಸಾಲು ಬರುತ್ತದೆ. ಅಂತಹ ಹೀನಾಯ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ದುರಂತ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

**

ಪರ್ಯಾಯ ಇಂಧನ ಶೋಧಿಸಲಿ
ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಅಡುಗೆ ಅನಿಲದ ದರ ಏರಿಕೆ ಆಗುತ್ತಲೇ ಇರುತ್ತದೆ, ತಮ್ಮ ಅವಧಿಯಲ್ಲಷ್ಟೇ ಅಲ್ಲ ಹಿಂದಿನ ಸರ್ಕಾರ ಇದ್ದಾಗಲೂ ಏರಿಕೆ ಆಗಿತ್ತು ಎಂದು ಆಳುವವರು ಸಮರ್ಥಿಸಿಕೊಳ್ಳುತ್ತಾರೆ. ಹಿಂದಿನವರ ನೀತಿ ನಿಯಮಾವಳಿಗಳನ್ನು ಮುಂದುವರಿಸುವುದಾದರೆ ಇಂದಿನವರ ಅಗತ್ಯವೇನು? ಅಡುಗೆ ಅನಿಲವನ್ನು ಆಹಾರ ಭದ್ರತಾ ವ್ಯವಸ್ಥೆಯಡಿ ಸೇರಿಸಿ ಜನಸಾಮಾನ್ಯರ ಹಿತ ಕಾಯಬೇಕಿದೆ. ಜನಸಾಮಾನ್ಯರ ಹಿತ ಕಾಯದ ನೀತಿ ನಿಯಮಗಳನ್ನು ರದ್ದುಪಡಿಸಲು ಸಾಧ್ಯವಾಗದ ಸರ್ಕಾರ ಏಕೆ ಬೇಕು?

ಅಡುಗೆ ಮಾಡಲು ವಿಜ್ಞಾನಿಗಳು ಪರ್ಯಾಯ ಇಂಧನ ಶೋಧಿಸುವುದಕ್ಕಾದರೂ ಸರ್ಕಾರ ಉತ್ತೇಜನ ನೀಡಬೇಕು. ಜನರು ಪರ್ಯಾಯ ಆಹಾರ ಪದ್ಧತಿಗಳನ್ನು ಶೋಧಿಸಿಕೊಳ್ಳಲು ಆಹಾರ ತಜ್ಞರು ಸಲಹೆ ಸೂಚನೆಗಳನ್ನು ನೀಡಬೇಕು. ಇಂತಹ ಹಲವಾರು ಸಾಧ್ಯತೆಗಳ ಬಗ್ಗೆ ಯೋಚಿಸುವ ಕಾಲ ಸನ್ನಿಹಿತವಾದಂತಿದೆ.

-ಮಲ್ಲಿಕಾರ್ಜುನ, ಸುರಧೇನುಪುರ

**

ಕನ್ನಡ– ಸಂಸ್ಕೃತ ಬೇರೆ ನುಡಿಗಳು
‘ಕನ್ನಡ ಮತ್ತು ಸಂಸ್ಕೃತವನ್ನು ಬೇರೆ ಮಾಡುವುದಕ್ಕೆ ಆಗುವುದಿಲ್ಲ’ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ನಾವು ಹಲವು ಬಗೆಯಲ್ಲಿ ಹಲವರಿಂದ ಹಿಂದೆಯೇ ಕೇಳಿದ್ದೇವೆ. ಮೊದಲಿಗೆ ಭಾಷಾವಿಜ್ಞಾನದ ನೆಲೆಯಿಂದ ನಿಂತು ನೋಡಿದರೆ, ಕನ್ನಡ ಒಂದು ದ್ರಾವಿಡ ನುಡಿ ಮತ್ತು ಸಂಸ್ಕೃತವು ಇಂಡೊ- ಯುರೋಪಿಯನ್ ನುಡಿ ಎಂದು ಭಾಷಾವಿಜ್ಞಾನಿಗಳು ಹಿಂದೆಯೇ ತಮ್ಮ ಕೆಲಸಗಳಿಂದ ತೋರಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ, ಕನ್ನಡ ಮತ್ತು ಸಂಸ್ಕೃತ ಎರಡೂ ಬೇರೆ ನುಡಿವಳಿಗಳಿಗೆ (ನುಡಿ ಕುಟುಂಬ: ಇಲ್ಲಿ ಬಳಿ ಅಂದರೆ ಕುಟುಂಬ) ಸೇರಿವೆ.

ಭಾಷಾ ವಿಜ್ಞಾನದ ನೆಲೆಯಲ್ಲಿ ಇದನ್ನು ಹಿಂದೆಯೇ ಹೇಳಿದ್ದರೂ, ಹಲವರು ಕನ್ನಡ ಮತ್ತು ಸಂಸ್ಕೃತದ ನಡುವೆ ಇಲ್ಲದ ನಂಟಿನ ಕುರಿತು ಇನ್ನೂ ಹೇಳಿಕೆ ನೀಡುತ್ತಿರುವುದು ತಪ್ಪು. ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ಕನ್ನಡದ ನಾಳೆಗಳ ಜೊತೆ ಕನ್ನಡಿಗರ ಏಳಿಗೆ ಕಡೆ ಗಮನ ನೀಡಿದರೆ ಒಳಿತು. ಕನ್ನಡ ಮತ್ತು ಸಂಸ್ಕೃತ ಎರಡನ್ನೂ ಬೇರೆ ನುಡಿಗಳಾಗಿ ನೋಡುವುದೇ ಸರಿಯಾದ ನಿಲುವು.

-ವಿವೇಕ್ ಶಂಕರ್, ಬೆಂಗಳೂರು

**

ಶೌಚಾಲಯ, ರಾಜಕಾಲುವೆಗೆ ಯಾಕಿಲ್ಲ ಹಣ?
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2023- 24ನೇ ಸಾಲಿನ ಬಜೆಟ್‌ನಲ್ಲಿ ಉದ್ಯಾನ, ಮೇಲ್ಸೇತುವೆ ಮತ್ತು ಜಂಕ್ಷನ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಲೀ ಅಥವಾ ಅವುಗಳಲ್ಲಿ ವಿಶ್ರಾಂತಿ ಕೊಠಡಿ, ನ್ಯಾಪ್ಕಿನ್‌, ಮುಟ್ಟಿನ ಕಪ್‌ಗಳನ್ನು ಅಳವಡಿಸುವುದಕ್ಕಾಗಲೀ ಹಣ ನಿಗದಿಪಡಿಸದಿರುವುದು ಬೇಸರದ ಸಂಗತಿ.

ಹಿಂದಿನ ವರ್ಷ ಮಳೆಯಿಂದಾಗಿ ರಾಜಕಾಲುವೆ ತುಂಬಿ, ಬದಿಯಲ್ಲಿದ್ದ ಕೊಳೆಗೇರಿಗಳು, ಗುಡಿಸಿಲುಗಳು, ಕಟ್ಟಡಗಳೆಲ್ಲ ನೀರಿನಿಂದ ಆವೃತವಾಗಿದ್ದವು. ಆದರೆ ರಾಜಕಾಲುವೆಗೆ ಕಾಂಕ್ರೀಟ್ ಗೋಡೆ ನಿರ್ಮಿಸುವ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆಯೂ ಬಜೆಟ್‌ನಲ್ಲಿ ಹಣವನ್ನು ತೆಗೆದಿರಿಸದೇ ಇರುವುದು ನೋವಿನ ವಿಚಾರ.

-ಚನ್ನಬಸವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.