ADVERTISEMENT

ವಾಚಕರ ವಾಣಿ | ಗುರುವಾರ, ಮಾರ್ಚ್ 09, 2023

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:30 IST
Last Updated 8 ಮಾರ್ಚ್ 2023, 19:30 IST
   

ದಾರಿ ತಪ್ಪಿಸುವ ಸಾಂಖ್ಯಿಕ ಚಿತ್ರಣ
ಭಾರತದ ಆರ್ಥಿಕತೆಯ ತಲಾ ವರಮಾನವು 2013- 14ರಿಂದ 2022- 23ರ ಅವಧಿಯಲ್ಲಿ ದುಪ್ಪಟ್ಟಾಗಿದೆ ಎಂದು ಬೀಗುವುದಕ್ಕೆ ಯಾವುದೇ ಅರ್ಥವಿಲ್ಲ. ಇದು ಏನನ್ನು ತೋರಿಸುತ್ತಿದೆಯೋ ಅದಕ್ಕಿಂತ ಹೆಚ್ಚು ಸಂಗತಿಗಳನ್ನು ಮುಚ್ಚಿಟ್ಟಿದೆ. ದುಪ್ಪಟ್ಟಾಗಿದೆ ಎನ್ನುವುದು ಚಾಲ್ತಿ ಬೆಲೆಯ ತಲಾ ವರಮಾನದ ಚಿತ್ರವೇ ವಿನಾ ಸ್ಥಿರ ಬೆಲೆಯ ಚಿತ್ರವಲ್ಲ ಎಂಬುದನ್ನು ಪತ್ರಿಕೆಯ ವರದಿ (ಪ್ರ.ವಾ., ಮಾರ್ಚ್ 7) ತೋರಿಸಿದೆ. ಇದಲ್ಲದೆ ಆರ್ಥಿಕ ಸೂಚಿಗಳನ್ನು ಇಡಿಯಾಗಿ ನೋಡುವುದಕ್ಕೆ ಬದಲಾಗಿ ಬಿಡಿಸಿ ನೋಡಿದಾಗ ಮಾತ್ರ ನಿಜ ಚಿತ್ರಣ ಗೋಚರವಾಗುತ್ತದೆ. ಉದಾಹರಣೆಗೆ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳ ತಲಾ ವರಮಾನವು ಈ ಅವಧಿಯಲ್ಲಿ ಐದು ಅಂಕಿಗಳನ್ನು ದಾಟಿಲ್ಲ. ಇನ್ನೂ ಆಳದಲ್ಲಿ ಬಿಡಿಸಿ ನೋಡಿದರೆ ಭಯಂಕರ ಚಿತ್ರ ದೊರೆಯುತ್ತದೆ. ಉದಾಹರಣೆಗೆ, 2021-22ರ ಕರ್ನಾಟಕ ರಾಜ್ಯದ ತಲಾ ವರಮಾನ ₹ 2.65 ಲಕ್ಷ. ಆದರೆ ಬೆಂಗಳೂರು ನಗರ ಜಿಲ್ಲೆಯದ್ದು ₹ 6.21 ಲಕ್ಷವಾದರೆ, ದಕ್ಷಿಣ ಕನ್ನಡದ್ದು ₹ 4.43 ಲಕ್ಷ. ಆದರೆ ಕಲಬುರಗಿಯದ್ದು ₹ 1.24 ಲಕ್ಷವಾದರೆ, ಬೀದರ್ ಜಿಲ್ಲೆಯದ್ದು ₹ 1.33 ಲಕ್ಷ. ಈ ಎಲ್ಲ ಅಸಮಾನತೆಯ, ತಾರತಮ್ಯದ ಚಿತ್ರಣವನ್ನು ದೇಶದ ಆರ್ಥಿಕತೆಯ ತಲಾ ವರಮಾನ ದುಪ್ಪಟ್ಟಾಗಿದೆ ಎಂಬ ಚಿತ್ರಣವು ಮರೆಮಾಚುತ್ತದೆ.
ಟಿ.ಆರ್.ಚಂದ್ರಶೇಖರ, ಬೆಂಗಳೂರು

**

ನಂದಿನಿ ಮೊಸರಲ್ಲೇಕೆ ‘ದಹಿ’ ಪ್ರಸ್ತಾಪ?
ಕೆಎಂಎಫ್‌ ಮೊಸರಿನ ಪ್ಯಾಕೆಟ್‌ ಮೇಲೆ ‘ದಹಿ’ ಎಂದು ಮುದ್ರಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಅಧಿಕಾರಿಗಳ ಎಡವಟ್ಟೋ ಆಥವಾ ಮುಂದೊಂದು ದಿನ ‘ನಂದಿನಿ’ ಗುಜರಾತ್‌ ಮೂಲದ ‘ಅಮುಲ್‌’ನ ಸಂಗಡ ವಿಲೀನವಾಗುವ ಸಂಕೇತವೋ ತಿಳಿಯದು. ದಶಕಗಳ ಹಿಂದೆ ಲೋಕ ನ್ಯಾಯಾಲಯಗಳನ್ನು ಲೋಕ್‌ ಅದಾಲತ್‌ ಎಂದು ಹೆಸರಿಸಿದ್ದು, ಅದೇ ಹೆಸರಿನಲ್ಲಿ ಇಂದು ಕೂಡಾ ಅದು ಮುಂದುವರಿದಿದೆ ಮತ್ತು ವಿದ್ಯುತ್‌ ಅದಾಲತ್‌, ವಾಟರ್‌ ಅದಾಲತ್‌, ಪಿಂಚಣಿ ಅದಾಲತ್‌ ಹೆಸರಿನಲ್ಲಿ ಎದ್ದು ಕಾಣುತ್ತಿದೆ.

ADVERTISEMENT

ಬಹುಶಃ ಇಂಥವುಗಳನ್ನು ಊಹಿಸಿಯೋ ಏನೋ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಪಾಟೀಲ್‌ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ‘ಕನ್ನಡ ಕಾವಲು ಸಮಿತಿ’ಯನ್ನು ರಚಿಸಿದ್ದರು.
–ರಮಾನಂದ ಶರ್ಮಾ, ಬೆಂಗಳೂರು

**

ಅಂಚೆ ಕಚೇರಿ ದಕ್ಷತೆ ಹೆಚ್ಚಿಸಿಕೊಳ್ಳಬೇಕಾಗಿದೆ
ಜನಸಾಮಾನ್ಯರ ಅಗತ್ಯಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸುತ್ತಿರುವ ಇಲಾಖೆಯೆಂದರೆ ಅಂಚೆ ಇಲಾಖೆ ಎಂಬ ಮಾತಿದೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು. ಆದರೆ, ಇಲಾಖೆಯು ದಕ್ಷತೆ ಹೆಚ್ಚಿಸಿಕೊಳ್ಳುವಲ್ಲಿ ಮುತುವರ್ಜಿ ವಹಿಸುವುದು ಅಗತ್ಯವಿದೆ. ಒಂದು ಪಾರ್ಸೆಲ್ ಬುಕ್ ಮಾಡಿ ಅದು ಎಲ್ಲಿಗೆ ಮುಟ್ಟಿದೆ ಎಂಬುದರ ಬಗ್ಗೆ ಹುಡುಕಾಟ ಮಾಡಿದರೆ ಸರಿಯಾಗಿ ಮಾಹಿತಿ ದೊರೆಯುತ್ತಿಲ್ಲ. ವೆಬ್‌ಸೈಟ್, ದೂರು ವಿಭಾಗ ಪರಿಪೂರ್ಣವಾಗಿ ಕೆಲಸ ಮಾಡುತ್ತಿಲ್ಲ. ವಿಚಾರಿಸಲು ಕೆಲವು ಅಂಚೆ ಕಚೇರಿಗಳಿಗೆ ಕರೆ ಮಾಡಿದರೆ ಫೋನ್ ರಿಂಗಾದರೆ ಎತ್ತುವುದಿಲ್ಲ, ಕೆಲವು ಕಚೇರಿಗಳ ದೂರವಾಣಿ ಕೆಲಸ ಮಾಡುತ್ತಿಲ್ಲ. ಟೋಲ್ ಫ್ರೀ ನಂಬರ್ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಇಂದಿನ ಅಗತ್ಯಗಳನ್ನು ಪೂರೈಸಲು ಹಾಗೂ ಸ್ಪರ್ಧೆಯನ್ನು ಎದುರಿಸಬೇಕಾದರೆ ಇಲಾಖೆ ತನ್ನ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಬೇಕಿದೆ.
–ಈ. ಬಸವರಾಜು, ಬೆಂಗಳೂರು

**

ಚಿತ್ರೋತ್ಸವದ ಸಿದ್ಧತೆ: ಮಾಹಿತಿ ಬಿಡುಗಡೆಯಾಗಲಿ
‘ವಿಶ್ವ ಕನ್ನಡ ಸಿನಿಮಾ ದಿನ’ ಸಮಾರಂಭದ ವರದಿ (ಪ್ರ.ವಾ., ಮಾರ್ಚ್ 4) ಓದಿ ಈ‌ ಪತ್ರ ಬರೆಯಬೇಕಾಯಿತು. ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ‘ಮಾರ್ಚ್ 3ರಿಂದಲೇ ಬಿಫೆಸ್ ನಡೆಸಲು ಸರ್ಕಾರಿ ಆಜ್ಞೆ ಮಾಡಿಸಬೇಕಾಗಿತ್ತು’ ಎಂದಿದ್ದಾರೆ. ಆದರೆ ಈಗ ನಡೆಯಬೇಕಿರುವ ಚಿತ್ರೋತ್ಸವಕ್ಕೆ ಎಷ್ಟು ತಯಾರಿ ಆಗಿದೆ ಎಂಬುದನ್ನು ಹೇಳಿಲ್ಲ. ಎಂಟ್ರಿಗಳ ಅಂತಿಮ ದಿನಾಂಕವನ್ನು ವಿಸ್ತರಿಸಲಾಯಿತು, ಕಾರಣ ಕೊಟ್ಟಿಲ್ಲ. ಅದಿರಲಿ, ಹದಿನೈದು ದಿನ ಇರುವಂತೆ ಅದರ ವೆಬ್‌ಸೈಟ್ ನೋಡಿದರೆ ಫೆ. 14ರಿಂದೀಚೆಗೆ ಏನೂ ಮಾಹಿತಿ ಹಾಕಿಲ್ಲ.

ಫೆ. 8 ಹಾಗೂ 24ರಂದು ನಾನು ಅಧ್ಯಕ್ಷರಿಗೆ ರವಾನಿಸಿದ ಇ–ಮೇಲ್‌ಗಳಿಗೆ ಉತ್ತರ ಬಂದಿಲ್ಲ. ₹ 4.48 ಕೋಟಿ ಸರ್ಕಾರ ನೀಡಿದ್ದರೆ ಅದನ್ನು ಹೇಗೆ ವ್ಯಯಿಸಬೇಕೆಂದು ತೀರ್ಮಾನಿಸಲಾಗಿದೆ? ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 20 ಕೋಟಿ ನೀಡಿದ್ದರೆ, ₹ 25 ಕೋಟಿ ಖರ್ಚು ಮಾಡಿ ಬಾಕಿ 5 ಕೋಟಿಗೆ ಬೇಡಿಕೆ ಇಟ್ಟಿದ್ದಾರಂತೆ. ಚಲನಚಿತ್ರ ಅಕಾಡೆಮಿಯು ಉದ್ಘಾಟನಾ ಸಮಾರಂಭಕ್ಕೆ ಸಿನಿಮಾ ತಾರೆ, ನಿರ್ದೇಶಕರನ್ನು ಕರೆಸಲು ಎಷ್ಟು ಖರ್ಚು ಮಾಡಬಯಸಿದೆ? ಕೇಂದ್ರ ಚುನಾವಣಾ ಆಯೋಗವು ಅಂತಿಮ ಪರಿಶೀಲನೆ ನಡೆಸಲು ಬರುತ್ತಿದೆ. ಅದಾದ ನಂತರ ಚುನಾವಣಾ ದಿನಾಂಕದ ಘೋಷಣೆ ಆಗಬಹುದು. ಸಂಘಟನಾ ಸಮಿತಿಯ ಅಧ್ಯಕ್ಷರು ಸಂಕಲ್ಪ ಯಾತ್ರೆ ಇನ್ನಿತರ ರಾಜಕೀಯ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ವಾರ್ತಾ ಇಲಾಖೆಗೆ ಪ್ರಚಾರದ ಕೆಲಸವೂ ಇದೆಯಲ್ಲ. ಪರೀಕ್ಷೆ ಸೀಸನ್ ಇರುವುದರಿಂದ ಸ್ವಯಂಸೇವಕರು ಎಲ್ಲಿ‌ ಸಿಗುತ್ತಾರೆ? ಕಾಲೇಜು ವಿದ್ಯಾರ್ಥಿಗಳು ಸಿನಿಮಾ ನೋಡಲು‌ ಬರುವ ಸಂಭವ ಕಡಿಮೆ. ಪತ್ರಿಕಾಗೋಷ್ಠಿಗಳು‌ ನಡೆದ ವರದಿ ಇಲ್ಲ. ಆಂತರಿಕ ಮೀಟಿಂಗ್, ಜ್ಯೂರಿ, ಸಮಿತಿಗಳು ಆಗಿದ್ದರೆ ಬಹಿರಂಗಗೊಳಿಸಬೇಕು. ಕನಿಷ್ಠ ಯಾವ‌ ವಿಭಾಗಕ್ಕೆ ಎಷ್ಟು ಪ್ರವೇಶಗಳು ಬಂದಿವೆ ಎಂದಾದರೂ‌ ತಿಳಿಸಬೇಕಿತ್ತು. ಆರ್ಟಿಸ್ಟ್ ಡೈರೆಕ್ಟರ್ ಕೂಡ (ಜಾಣ) ಮೌನ ವಹಿಸಿದ್ದಾರೆ. ಸಂಘಟಕರು ರಾಜ್ಯ ಸರ್ಕಾರಕ್ಕಷ್ಟೆ ಉತ್ತರದಾಯಿಗಳಲ್ಲ, ಸಾರ್ವಜನಿಕರಿಗೂ.
–ಎಚ್.ಎಸ್.ಮಂಜುನಾಥ, ಗೌರಿಬಿದನೂರು

*

ಹೋದ ಮಾನ...

ದಾಳಿಯ
ಸಮಯದಲ್ಲಿ
ಸಿಕ್ಕಿದ್ದು
ಅಡಕೆಯ ಹಣ
ಎಂದಿದ್ದಾರೆ
ಮಾಡಾಳರು!
ಅಡಕೆಗೆ
ಹೋದ ಮಾನ
ಆನೆ ಕೊಟ್ಟರೂ
ಬರದು
ಎಂಬುದಕ್ಕೆ
ಈ ಪ್ರಕರಣವೇ
ಸಾಕ್ಷಿ!

–ಪಿ.ಜೆ.ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.