ಧರ್ಮರಕ್ಷಕರೋ ತೆರೆಮರೆಯ ರಾಜಕಾರಣಿಗಳೋ?
‘ಧರ್ಮ ಮತ್ತು ರಾಜಕೀಯವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಉದ್ಧಾರಕ್ಕೆ ಧರ್ಮವೂ ಬೇಕು ರಾಜಕೀಯವೂ ಬೇಕು. ಆದರೆ ಎರಡೂ ಒಂದನ್ನೊಂದು ಕಲೆತರೆ ಸಮಾಜ ದಾರಿ ತಪ್ಪುತ್ತದೆ’ ಎಂಬ ಎಚ್ಚರಿಕೆಯ ಸಂದೇಶ ನೀಡುತ್ತಾ ಬಂದಿದ್ದರು ಮಠಾಧೀಶರು. ಅವರು ಎಲ್ಲೂ ಬಹಿರಂಗವಾಗಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಪರ ನಿಂತ ಉದಾಹರಣೆಗಳು ಇರಲಿಲ್ಲ. ಆಶೀರ್ವಾದ ಬಯಸಿ ಮಠಕ್ಕೆ ಬಂದವರನ್ನೆಲ್ಲಾ ಆಶೀರ್ವದಿಸಿ, ‘ನಿಮ್ಮ ನಿಮ್ಮ ಶಕ್ತಿಯ ಅನುಸಾರ ಗೆದ್ದು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ, ನಿಮ್ಮನ್ನು ನಂಬಿದ ಜನರಿಗೆ ನಿಷ್ಠರಾಗಿ ನಡೆದುಕೊಳ್ಳಿ’ ಎನ್ನುವ ಸಂದೇಶ ನೀಡುತ್ತಿದ್ದರು. ದೂರದಿಂದಲೇ ಎಲ್ಲವನ್ನೂ ಗ್ರಹಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಸರಿದಾರಿಗೆ ತರುತ್ತಿದ್ದರು. ಆದರೆ ಈಗ ಆ ಕಾಲ ಕಣ್ಮರೆಯಾಗುತ್ತಿದೆ.
ಅಸ್ತಿತ್ವದ ಹಟಕ್ಕೆ ಬಿದ್ದವರಂತೆ ಕೆಲವು ಮಠಾಧೀಶರು ಇಂದು ರಾಜಕಾರಣಿಗಳಿಗೆ ಪಕ್ಷಗಳ ಟಿಕೆಟ್ ಕೊಡಿಸುವಲ್ಲಿಂದ ಅವರನ್ನು ಗೆಲ್ಲಿಸಿಕೊಂಡು ಬರುವವರೆಗೆ ಪಕ್ಷ ಮತ್ತು ವ್ಯಕ್ತಿ ನಿಷ್ಠೆಗೆ ಕಟ್ಟುಬಿದ್ದವರಂತೆ ವರ್ತಿಸು
ತ್ತಿದ್ದಾರೆ. ಜಾತಿಯ ಅಸ್ತ್ರ ಹಿಡಿದುಕೊಂಡು ಭಾವಿ ಕಾವಿ ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ.
ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ
***
ಶಿಕ್ಷಕರಿಗೆ ಸಿಗಲಿ ರಿಯಾಯಿತಿ ರಜೆ
ಮೇ 29ರಿಂದ ಶಾಲೆಗಳು ಆರಂಭವಾಗುವುದಾಗಿ ವರದಿಯಾಗಿದೆ. ಇನ್ನೂ ಎಸ್ಎಸ್ಎಲ್‌ಸಿ ಪರೀಕ್ಷೆ ಮುಗಿದಿಲ್ಲ. ಅದಾದ ನಂತರ ಮೌಲ್ಯಮಾಪನ, ಶಿಕ್ಷಕರಿಗೆ ತರಬೇತಿಗಳು ಶುರು. ಮೇ ಹತ್ತರ ತನಕ ಶಿಕ್ಷಕರು ಒಂದಿಲ್ಲೊಂದು ತರಬೇತಿಯಲ್ಲಿ ತಲ್ಲೀನರಾಗಿರುತ್ತಾರೆ, ಬಳಿಕ ಚುನಾವಣಾ ಕಾರ್ಯ, ಅದು ಮುಗಿದ ಬಳಿಕ ಮತ ಎಣಿಕೆ. ಅದಾದ ವಾರ ಹತ್ತು ದಿನಕ್ಕೆ ಶಾಲೆ ಆರಂಭ! ಇಷ್ಟೆಲ್ಲದರ ನಡುವೆ ರಜೆಯ ಮಜೆ ಸವಿಯಲಾದೀತೇ? ಶಿಕ್ಷಕರ ಸಂಕಷ್ಟ ಒಂದೆಡೆಯಾದರೆ ಅವರ ಮಡದಿ, ಮಕ್ಕಳಿಗೂ ಇವರ ಜೊತೆ ಮನೆವಾಸವೇ ಗತಿ. ಪರೀಕ್ಷೆ, ಮೌಲ್ಯಮಾಪನ, ಚುನಾವಣಾ ಕಾರ್ಯಗಳಲ್ಲಿ ಕಳೆದುಹೋಗುವ ಶಿಕ್ಷಕರಿಗೆ ಕಡೇಪಕ್ಷ ಹದಿನೈದು ದಿನ ರಿಯಾಯಿತಿ ರಜೆಯನ್ನಾದರೂ ಶಿಕ್ಷಣ ಇಲಾಖೆ ನೀಡಿದರೆ ಮಹದುಪಕಾರವಾದೀತೇನೊ. ಅಧಿಕಾರಿಗಳು ಚಿಂತಿಸಿ ನಿರ್ಣಯ ತೆಗೆದುಕೊಳ್ಳಲಿ.
ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
***
ನಂದಿನಿ ಬೆಣ್ಣೆ ಮಾಯವಾಗಿದ್ದೇಕೆ?
ನಮ್ಮ ಮನೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದಲೂ ನಂದಿನಿ ಹಾಲು ಮತ್ತು ಬೆಣ್ಣೆಯನ್ನೇ ಬಳಸುತ್ತಾ ಬಂದಿದ್ದೇವೆ. ನಂದಿನಿ ಹೊರತಾಗಿ ಅಪ್ಪಿತಪ್ಪಿಯೂ ಬೇರೆ ಬ್ರ್ಯಾಂಡ್‍ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಾವು ಬಳಸಿಲ್ಲ. ಇದು ನಮಗೆ ಹೆಮ್ಮೆಯ ವಿಷಯ. ಈಗ್ಗೆ ನಾಲ್ಕೈದು ತಿಂಗಳಿನಿಂದ ನಂದಿನಿ ಬೆಣ್ಣೆ ಮಾರುಕಟ್ಟೆಯಿಂದ ಇದ್ದಕ್ಕಿದ್ದಂತೆ ಮಾಯವಾಗಿದೆ. ಇದಕ್ಕೇನು ಕಾರಣವೋ ತಿಳಿಯದಾಯಿತು. ಕೆಎಂಎಫ್ ಅಧಿಕಾರಿಗಳನ್ನೇ ನಮ್ಮ ನಂದಿನಿ ಹಾಲಿನ ವಿತರಕರು ನೇರವಾಗಿ ವಿಚಾರಿಸಿದಾಗಲೂ ಅವರಿಂದ ಸ್ಪಷ್ಟ ಉತ್ತರವಿಲ್ಲ.
ಈಗೊಂದು ವಾರದ ಕೆಳಗೆ ದಾವಣಗೆರೆಯ ವಿದ್ಯಾನಗರದ ಮುಖ್ಯ ಬೀದಿಯಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ನಂದಿನಿ ಬೆಣ್ಣೆಗಾಗಿ ವಿಚಾರಿಸಿದೆ. ಅವರು ನಂದಿನಿ ಇಲ್ಲ ಅಮೂಲ್ ಬೆಣ್ಣೆ ಇದೆ ಎಂದಾಗ ನನಗೆ ಆಘಾತವಾಯಿತು. ನಂದಿನಿಯ ಹೊಟ್ಟೆಯೊಳಗೆ ಅಮೂಲ್ ಎಂಬ ಅನ್ಯ ಪ್ರಾಣಿ ಇದ್ದಕ್ಕಿದ್ದಂತೆ ಪ್ರವೇಶಿಸಿದ್ದಾದರೂ ಹೇಗೆ ಎಂದು ಸೋಜಿಗವಾಯಿತು. ನಮ್ಮಂತಹ ಸಾಮಾನ್ಯರಿಗೆ ಇದರ ಮರ್ಮ ತಿಳಿಯುವುದು ದುಸ್ತರ. ನಾನೀಗ ನಂದಿನಿಯ ಪ್ಯಾಕೆಟ್ ಮೇಲಿನ ಮುದ್ದಾದ ಹಸುವಿನ ಚಿತ್ರ ನೋಡುತ್ತಾ ವಿಷಾದದ ನಿಟ್ಟುಸಿರುಬಿಡುತ್ತಾ ಕುಳಿತಿರುವೆ.
ಚಂದ್ರಶೇಖರ ತಾಳ್ಯ, ಹೊಳಲ್ಕೆರೆ
***
ಫುಟ್‌ಬಾಲ್ ಪ್ರತಿಕೃತಿ ಮರೆಮಾಚಬೇಕೆ?
ದಾವಣಗೆರೆಯ ವೃತ್ತವೊಂದರಲ್ಲಿರುವ ‘ಫುಟ್‌ಬಾಲ್’ ಪ್ರತಿಕೃತಿಯನ್ನು ಮರೆಮಾಚಲು ರಾಷ್ಟ್ರೀಯ ಪಕ್ಷವೊಂದು ಆಗ್ರಹಿಸಿರುವ ಸುದ್ದಿ (ಪ್ರ.ವಾ., ಏ. 10) ಓದಿ ಆಶ್ಚರ್ಯವಾಯಿತು. ಈ ಬಾರಿ ‘ಫುಟ್‌ಬಾಲ್’ ರಾಜಕೀಯ ಪಕ್ಷವೊಂದರ ಚಿಹ್ನೆ ಎಂಬುದು ಅದಕ್ಕೆ ಕಾರಣ. ಇದು ಸರಿ ಎನ್ನುವುದಾದರೆ, ದೈನಂದಿನ ಚಲಾವಣೆಯಲ್ಲಿರುವ, ಹಸ್ತದ ಗುರುತು ಇರುವ ಎರಡು ರೂಪಾಯಿಯ ನಾಣ್ಯವನ್ನು ಏನು ಮಾಡುವುದು? ಏಕೆಂದರೆ ಅದು ಒಂದು ರಾಜಕೀಯ ಪಕ್ಷದ ಚಿಹ್ನೆ. ಜೊತೆಗೆ ‘ತೆನೆ ಹೊತ್ತ ಮಹಿಳೆ’ ಸಹ ರಾಜಕೀಯ ಪಕ್ಷವೊಂದರ ಚಿಹ್ನೆ ಆಗಿರುವುದರಿಂದ, ರೈತಮಹಿಳೆಯರಿಗೆ ತಮ್ಮ ಜಮೀನಿನಲ್ಲಿ ತೆನೆಯನ್ನು ತಲೆ ಮೇಲೆ ಹೊತ್ತು ಹೋಗಬೇಡಿ ಎನ್ನಲು ಸಾಧ್ಯವೇ? ಹಾಗಾದರೆ ಕ್ರೀಡಾ ಸಾಮಗ್ರಿ ಮಾರಾಟ ಅಂಗಡಿಗಳ ಶೋಕೇಸ್‌ನಲ್ಲಿ ಪ್ರದರ್ಶನಕ್ಕೆ ಇಟ್ಟ ಫುಟ್‌ಬಾಲ್ ಗಳನ್ನೂ ತೆಗೆಸಬೇಕಾಗುತ್ತದೆ ಅಲ್ಲವೇ?
ಸಿ.ಸಿದ್ದರಾಜು ಆಲಕೆರೆ, ಮಂಡ್ಯ
***
ಜಪ್ತಿ ವಸ್ತು: ವಿವರ ಬಹಿರಂಗವಾಗಲಿ
ಮತದಾರರಿಗೆ ಅಭ್ಯರ್ಥಿಗಳು ಒಡ್ಡುವ ಪ್ರಲೋಭನೆಗಳನ್ನು ತಡೆಯಲು ಈ ಬಾರಿ, ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗುವ ಸ್ವಲ್ಪ ದಿನಗಳ ಮುಂಚೆಯಿಂದಲೇ, ಮತದಾರರಿಗೆ ಹಂಚಲು ಸಾಗಿಸಲಾಗುತ್ತಿದ್ದ ಸಾಮಾನು ಸರಂಜಾಮು, ನಗದನ್ನು ಜಪ್ತಿ ಮಾಡಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದು ಪ್ರಶಂಸನೀಯ. ಪ್ರತೀ ಚುನಾವಣೆ ಕಾಲಕ್ಕೆ ಆಯೋಗ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆ. ಹಲವಾರು ಬಾರಿ ಕ್ರಿಮಿನಲ್ ಪ್ರಕರಣಗಳನ್ನು ಕೂಡ ದಾಖಲಿಸಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ಆನಂತರ ಈ ಪ್ರಕರಣಗಳಲ್ಲಿ ಏನು ಕ್ರಮವಾಯಿತು, ಎಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಹಾಗೂ ಎಷ್ಟು ಅಪರಾಧಿಗಳಿಗೆ ಶಿಕ್ಷೆಯಾಯಿತು ಎಂಬುದು ತಿಳಿದುಬರುವುದಿಲ್ಲ.
ಆಯೋಗವು ಪ್ರತೀ ಚುನಾವಣೆ ಕಾಲಕ್ಕೆ, ಹಿಂದಿನ ಚುನಾವಣೆಗಳಲ್ಲಿ ಜಪ್ತಿ ಮಾಡಲಾದ ನಗದು, ವಸ್ತುಗಳು ಹಾಗೂ ದಾಖಲಾದ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾದ ಕುರಿತು ಸಾರ್ವಜನಿಕರ ಗಮನಕ್ಕೆ ತರುವುದು ಉತ್ತಮ. ಚುನಾವಣಾ ನೀತಿ ಸಂಹಿತೆ ಎನ್ನುವುದು ಚುನಾವಣೆಗಳ ನಂತರ ಮರೆತುಬಿಡುವ ಒಂದು ಪ್ರಹಸನವಾಗಬಾರದು.
ವೆಂಕಟೇಶ ಮಾಚಕನೂರ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.