ಬಿಹಾರದ ಸೇತುವೆಗಳೇಕೆ ದುರ್ಬಲ?
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉತ್ತಮ ಆಡಳಿತಗಾರ ಎಂದು ಪರಿಗಣಿಸಲಾಗಿದೆ... ಆದರೂ ಅವರ ರಾಜ್ಯದಲ್ಲಿ ಸೇತುವೆಗಳು ದುರ್ಬಲವಾಗಿವೆ. ಮೂರು ವಾರಗಳ ಅವಧಿಯಲ್ಲಿ 13 ಸೇತುವೆಗಳು ಅಲ್ಲಿ ಕುಸಿದಿವೆ ಅಂದರೆ ಕಾಮಗಾರಿ ಅದೆಷ್ಟು ಗುಣಮಟ್ಟದ್ದಾಗಿದೆ ಎಂಬುದು ಅರಿವಾಗುತ್ತದೆ.
ನಮ್ಮ ಉತ್ತರ ಕನ್ನಡ ಜಿಲ್ಲೆಯ ಮಂಜಗುಣಿ ಮತ್ತು ಕಡವಾಡ ಊರಿನಲ್ಲಿ ತಲಾ ಅಂದಾಜು ₹30 ಕೋಟಿ ವೆಚ್ಚದಲ್ಲಿ ಸೇತುವೆ ಕಟ್ಟಲಾಗಿದೆ. ಸೇತುವೆ ಕೆಲಸ ಎಂದೋ ಮುಗಿದಿದೆ. ಆದರೆ ಅವಕ್ಕೆ ಕೂಡು ರಸ್ತೆಯೇ ಇಲ್ಲ. ಅವು ಕೆಲವೇ ಜನರಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಸಹಾಯಕವಾಗಿವೆಯೇ ವಿನಾ ಬೃಹತ್ ವಾಹನಗಳಿಗೆ ಅಲ್ಲ. ಕೂಡು ರಸ್ತೆಯ ಕೆಲಸವು ಹಣದ ಕೊರತೆಯಿಂದ ನಿಂತಿದೆ. ಒಳ್ಳೆಯ ಬೆಲೆಗೆ ದನ ಖರೀದಿಸಿದವನಿಗೆ, ಚಿಕ್ಕ ದಾಂಬು (ದನಕ್ಕೆ ಕಟ್ಟುವ ಬಳ್ಳಿ) ಇಲ್ಲದಂತಾಗಿದೆ!
⇒ಚಂದ್ರಕಾಂತ ನಾಮಧಾರಿ, ಅಂಕೋಲಾ
ಸತ್ಯಾಂಶ ಬಯಲು: ಧೈರ್ಯ ತೋರುವರೇ?
‘ಅಧಿಕಾರಿಗಳ ವರ್ಗಾವಣೆ ಎಂಬುದು ಎಲ್ಲ ಸರ್ಕಾರಗಳಲ್ಲಿಯೂ ದಂಧೆಯೇ ಆಗಿದೆ’ ಎಂದು ಹೇಳಿ (ಪ್ರ.ವಾ., ಜುಲೈ 11) ಕಟು ವಾಸ್ತವವೊಂದನ್ನು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರುಅನಾವರಣಗೊಳಿಸಿದ್ದಾರೆ. ಕೆಲವು ಆಯಕಟ್ಟಿನ ಹುದ್ದೆಗಳಿಗಾಗಿ ‘ಇಷ್ಟು’ ಅವಧಿಗೆ ‘ಇಂತಿಷ್ಟು’ ಎಂಬುದು ನಿಗದಿ ಆಗಿರುತ್ತದೆ.
ಈ ವರ್ಗಾವಣೆ ದಂಧೆಯು ಬಹಳ ಆಳವಾಗಿ ಬೇರುಬಿಟ್ಟಿದೆ. ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇರುವವರು ಅಥವಾ ನಿವೃತ್ತ ಹಿರಿಯ ಅಧಿಕಾರಿಗಳಲ್ಲಿ ಯಾರಾದರೂ ತಮ್ಮ ಅಧಿಕಾರಾವಧಿಯ ಅನುಭವ ಕಥನ ಬರೆದು, ಈ ದಂಧೆಯ ಸತ್ಯಾಂಶ ಬಯಲು ಮಾಡುವ ಧೈರ್ಯ ತೋರಿಯಾರೇ?
⇒ವೆಂಕಟೇಶ್ ಮುದಗಲ್, ಕಲಬುರಗಿ
‘ಸುಪ್ರೀಂ’ ತೀರ್ಪು ಶ್ಲಾಘನೀಯ...
ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರು ಪತಿಯಿಂದ ಜೀವನಾಂಶ ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮೆಚ್ಚುಗೆಗೆ ಅರ್ಹ. ವಿಚ್ಛೇದನ ವಿಚಾರದಲ್ಲಿ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ತಾರತಮ್ಯಕ್ಕೆ ಈ ತೀರ್ಪು ತೆರೆ ಎಳೆದಿದೆ. ಧರ್ಮನಿರಪೇಕ್ಷ ಭಾರತದಲ್ಲಿ ಜಾತಿ, ಧರ್ಮ, ಲಿಂಗ ಮೀರಿ ಸರ್ವರಿಗೂ ಸಮಾನ ನ್ಯಾಯ ದೊರಕುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ.
⇒ಚೇತನ್ ಕಾಶಿಪಟ್ನ, ಉಜಿರೆ
‘ಗ್ಯಾರಂಟಿ’ ಬಗ್ಗೆ ಟೀಕೆ ಸಲ್ಲದು
‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಜನರಲ್ಲಿ ಶ್ರಮ ಮನೋಭಾವ ಮಾಯವಾಗುತ್ತಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಗಳು ನೀಡಿದ ಹೇಳಿಕೆ (ಪ್ರ.ವಾ., ಜುಲೈ 11) ಒಪ್ಪುವಂಥ
ದ್ದಲ್ಲ. ಶ್ರಮಪಡುವ ಮನೋಭಾವದ ಬಗ್ಗೆ ಸ್ವಾಮೀಜಿ ಅಭಿಪ್ರಾಯ ಒಪ್ಪುವುದಾದರೆ ಎಲ್ಲ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಮಠಾಧೀಶರು ಪೀಠವನ್ನು ತ್ಯಜಿಸಿ ಕೃಷಿಯಲ್ಲಿಯೋ, ಮತ್ತೊಂದು ಕ್ಷೇತ್ರದಲ್ಲಿಯೋ ಶ್ರಮಿಕರಾಗಿ ದುಡಿಯಲಿ ಎಂದು ಬಯಸಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮ, ಜಾತಿ, ಸಮುದಾಯಗಳ ಜನರಿಗೆ ತಲುಪುತ್ತಿವೆ. ಗ್ಯಾರಂಟಿ ಯೋಜನೆಗಳು ಕಷ್ಟದ ಬದುಕಿನಲ್ಲಿ ಸಂಜೀವಿನಿಯಂತೆ ಕೆಲಸ ಮಾಡುತ್ತಿವೆ.
ಗ್ಯಾರಂಟಿ ಸೌಲಭ್ಯಗಳು ಬಂದಮಾತ್ರಕ್ಕೆ ಬಡವರು ದುಡಿಯುವುದನ್ನು ನಿಲ್ಲಿಸಿ ಮನೆಯಲ್ಲಿ ಕೂರುವುದಿಲ್ಲ. ಈ ಯೋಜನೆಗಳಿಂದ ಕೃಷಿ ಕಾರ್ಯಕ್ಕೆ ಕೂಲಿಕಾರರು ಸಿಗುವುದಿಲ್ಲ, ಪ್ರಬಲ ಜಾತಿಗಳ ಬಡವರಿಗೆ ಯೋಜನೆಗಳು ತಲುಪುತ್ತಿಲ್ಲ ಎಂಬ ಅಭಿಪ್ರಾಯ ಸತ್ಯಕ್ಕೆ ದೂರ. ಗ್ಯಾರಂಟಿ ಯೋಜನೆಗಳು ಜಾತಿ ಆಧಾರಿತವಾಗಿ ಜಾರಿಯಲ್ಲಿದ್ದರೆ ಅದನ್ನು ವಸ್ತುನಿಷ್ಠವಾಗಿ ವಿವರಿಸಿ, ಯಾವ ಜಾತಿಗಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಸ್ವಾಮೀಜಿ ಮಾಡಲಿ.
ಸಮಸ್ಯೆಗಳಿಗೆಲ್ಲ ಗ್ಯಾರಂಟಿ ಯೋಜನೆಗಳನ್ನೇ ದೂರುವುದು ಬಡವರು, ಶ್ರಮಿಕರು ಹಾಗೂ ಮಹಿಳೆಯರನ್ನು ಅವಮಾನಿಸುವುದರ ಜೊತೆಗೆ ಅವರ ಬಗೆಗಿನ ತಾತ್ಸಾರ ಹಾಗೂ ಅಸಹನೆಯ ಮನೋಭಾವವನ್ನು ತೋರಿಸುತ್ತದೆ. ಯಾವುದೇ ಸರ್ಕಾರದ ಯಾವುದೇ ಯೋಜನೆಯನ್ನು ಟೀಕಿಸುವ ಮುನ್ನ ತಾರತಮ್ಯರಹಿತ ಸಮಾಜ ನಿರ್ಮಾಣದ ದೃಷ್ಟಿಯಿಂದ ಆ ಯೋಜನೆಗಳ ಪರಿಣಾಮದ ಬಗ್ಗೆ ಯೋಚಿಸಬೇಕು.
⇒ಸೋಮಲಿಂಗಪ್ಪ ಬೆಣ್ಣಿ, ಗುಳದಳ್ಳಿ, ಕೊಪ್ಪಳ ಜಿಲ್ಲೆ
ಮರುನಾಮಕರಣ: ರಾಜಕಾರಣಿಗಳ ಪ್ರತಿಷ್ಠೆಯಾಗದಿರಲಿ
ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ತಾವೇ ಅಧಿಪತಿ ಎಂಬಂತೆ ನಡೆದುಕೊಳ್ಳುವುದು ಒಪ್ಪುವಂಥದ್ದಲ್ಲ. ಇದಕ್ಕೆ ನಿದರ್ಶನವೆಂದರೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುಕ್ಕೆ ಪಣ ತೊಡುವುದು ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದು, ಆ ಹೆಸರನ್ನು ಕಿತ್ತೆಸೆಯುವುದಾಗಿ ಹೇಳಿಕೆ ಕೊಡುವುದು. ಇಲ್ಲಿ ರಾಜಕಾರಣಿಗಳ ಪ್ರತಿಷ್ಠೆ ಕಾಣುತ್ತದೆಯೇ ಹೊರತು ಅಭಿವೃದ್ಧಿಗೆ ತಾ ಮುಂದು ನಾ ಮುಂದು ಎಂಬ ಸೌಹಾರ್ದಯುತ ಪೈಪೋಟಿ ಕಾಣುತ್ತಿಲ್ಲ.
ಜನರ ಪರವಾಗಿ ಅಧಿಕಾರ ನಡೆಸಬೇಕಾದವರಿಗೆ ಇಂಥ ವರ್ತನೆಗಳು ತಕ್ಕುದಲ್ಲ. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿಗಣಿಸಿದ ನಂತರ ಜನರು ಜಿಲ್ಲೆಗೆ ಹೊಂದಿಕೊಂಡಿದ್ದಾರೆ. ಈಗ ಅಗತ್ಯವಿರುವುದು ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳ ಬಗ್ಗೆ ಚಿಂತನೆ. ಮರು ನಾಮಕರಣದಿಂದ ಅಭಿವೃದ್ಧಿಯಾಗುತ್ತದೆ ಎಂಬುದು ಹುಸಿ ನಂಬಿಕೆ. ಒಂದು ವೇಳೆ ಮರುನಾಮಕರಣ ಆದರೆ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಹೆಸರು ಬದಲಾಗಬೇಕು. ಇದಕ್ಕೆ ಬೇಕಾಗುವ ಸಮಯ, ಜನರ ತೆರಿಗೆ ಹಣ ಹಾಗೂ ಮಾನವ ಸಂಪನ್ಮೂಲವನ್ನು ಗಣನೆಗೆ ತೆಗೆದುಕೊಂಡರೆ ಮರು ನಾಮಕರಣದಿಂದ ಪ್ರಯೋಜನವೇನಿಲ್ಲ ಅನ್ನಿಸುತ್ತದೆ.
⇒ಜಿ. ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.