ADVERTISEMENT

ವಾಚಕರ ವಾಣಿ | ಮಹಿಳಾ ರಾಜಕೀಯ ಪಕ್ಷ: ಇಂದಿನ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 0:52 IST
Last Updated 4 ಏಪ್ರಿಲ್ 2025, 0:52 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಲ್ಲಿ ಕೆಪಿಸಿಸಿ ಕಚೇರಿ ಮುಂದೆ ಪೋಸ್ಟರ್‌ ಹಿಡಿದು ನಿಂತ ಮಹಿಳೆಯರ ಚಿತ್ರ ಗಮನಸೆಳೆಯಿತು
(ಪ್ರ.ವಾ., ಏಪ್ರಿಲ್ 3). ಮಹಿಳೆಯರು ತಮ್ಮ ಅನೇಕ ಬೇಡಿಕೆಗಳ ಕುರಿತು ಧರಣಿ, ಪ್ರತಿಭಟನೆ, ಮತಪ್ರದರ್ಶನ ನಡೆಸುತ್ತಲೇ ಇರುತ್ತಾರೆ. ಇಂಥ ಆಗ್ರಹ, ಪ್ರತಿಭಟನೆಗಳಿಗೆ ಸರ್ಕಾರಗಳು ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ.

ತಾಯಂದಿರೇ, ನೀವು ದೇಶದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಇದ್ದೀರಿ. ನೀವು ಪುರುಷಪ್ರಾಧಾನ್ಯ ಸರ್ಕಾರಗಳನ್ನು ಕಾಡುವುದು, ಬೇಡುವುದು ಸಾಕು. ನಿಮ್ಮದೇ ಸರ್ಕಾರ ರಚನೆಯ ಕುರಿತು ಯೋಚಿಸಲು ಇದು ಸಕಾಲ. ಇಂದಿನ ಸರ್ಕಾರಗಳ ಆಡಳಿತ ವೈಖರಿಯನ್ನು ನೋಡಿ ಜನ ಬೇಸತ್ತಿದ್ದಾರೆ. ಇವೆಲ್ಲವುಗಳಿಂದ ಜನರಿಗೆ ಮುಕ್ತಿ ಬೇಕಾಗಿದೆ.ಪಾರದರ್ಶಕವಾದ ಪರಿಣಾಮಕಾರಿ ಆಡಳಿತ ವ್ಯವಸ್ಥೆ ಬೇಕಾಗಿದೆ. ಪುರುಷ ಪ್ರಧಾನ ಪಕ್ಷಗಳು ಸಮರ್ಪಕ ಆಡಳಿತ ನೀಡಲು ವಿಫಲವಾಗಿವೆ. ಪರ್ಯಾಯ ಮಹಿಳಾ ರಾಜಕೀಯ ಪಕ್ಷದ ಸಂಘಟನೆ ಇಂದಿನ ಅಗತ್ಯವಾಗಿದೆ.

ADVERTISEMENT

‘ತೊಟ್ಟಿಲು ತೂಗುವ ಕೈ ದೇಶವನ್ನು ತೂಗಬಲ್ಲದು’. ಅನೇಕ ರಂಗಗಳಲ್ಲಿ ಇಂದು ಮಹಿಳೆಯರು ಮುಂಚೂಣಿಯಲ್ಲಿ ಇದ್ದಾರೆ. ಅವರ ಕಾರ್ಯಕ್ಷಮತೆ, ದಕ್ಷತೆ ಪುರುಷರಿಗಿಂತ ಕಡಿಮೆ ಏನಲ್ಲ. ತಮ್ಮದೇ ಆದ ಮಹಿಳಾ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಂಡು ದೇಶದ ಚುಕ್ಕಾಣಿಯನ್ನು ಹಿಡಿಯಲು ಮಹಿಳೆಯರು ಏಕೆ ಮುಂದಾಗಬಾರದು? ದೇಶಕ್ಕೆ ಇಂದು ಪರ್ಯಾಯ, ಪ್ರಾಮಾಣಿಕ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ. 

-ವೆಂಕಟೇಶ ಮಾಚಕನೂರ, ಧಾರವಾಡ

ಉಪಾಧ್ಯಕ್ಷ ಹುದ್ದೆ ಭರ್ತಿಗೆ ಕ್ರಮ ಜರುಗಿಸಿ

ಲೋಕಸಭೆಯ ಉಪಾಧ್ಯಕ್ಷ ಹುದ್ದೆಯು 2019ರಿಂದ ಖಾಲಿಯಾಗಿಯೇ ಉಳಿದಿರುವ ಬಗ್ಗೆ ಸಂಸದರೊಬ್ಬರು
ಕಳವಳ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಲೋಕಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ
ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಡೆಸಿಕೊಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೋಕಸಭೆಯ ಅಧ್ಯಕ್ಷರಿಗೆ ಇರುವ ಬಹುಪಾಲು ಅಧಿಕಾರಗಳನ್ನು ಅವರು ಚಲಾಯಿಸಬಹುದು. ಆದರೆ, ರಾಜಕೀಯ ಕಾರಣದಿಂದಾಗಿ ಈ ಹುದ್ದೆಯನ್ನು ತುಂಬದೇ ಇರುವುದು ಸರಿಯಲ್ಲ.

ದಶಕಗಳ ಹಿಂದೆ ಈ ಹುದ್ದೆಯನ್ನು ವಿರೋಧ ಪಕ್ಷದವರಿಗೆ ನೀಡುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಬಳಿಕ ಅದು ಆಳುವ ಪಕ್ಷಕ್ಕೆ ಅಪಥ್ಯ ಆಗತೊಡಗಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಹುದ್ದೆಗಳಿಗೆ ಆಡಳಿತ ಪಕ್ಷದ ಸದಸ್ಯರೇ ಚುನಾಯಿತರಾಗುತ್ತಿದ್ದಾರೆ. ಒಂದು ವೇಳೆ ಈ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ನೀಡಿದರೆ, ಆ ಮೂಲಕ ಆಯ್ಕೆಯಾಗುವ ಉಪಾಧ್ಯಕ್ಷರು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ದನಿಯಾಗಬಹುದು. ಅದೇನೇ ಇರಲಿ, ಈ ಹುದ್ದೆಯನ್ನು ಬೇಗ ತುಂಬುವತ್ತ ಕೇಂದ್ರ ಸರ್ಕಾರ ಈಗಲಾದರೂ ಗಮನಹರಿಸಬೇಕಾಗಿದೆ. 

-ಕೆ.ವಿ.ವಾಸು, ಮೈಸೂರು

ನಗರದ ದುಃಸ್ಥಿತಿ: ನಿವಾರಣೆ ಎಂದು?

‘ದೊಡ್ಡ ಯೋಜನೆಗಳ ಭಾರದಲ್ಲಿ ಗೌಣವಾದ ಜನರ ನಿರೀಕ್ಷೆಗಳು’ ಶೀರ್ಷಿಕೆಯ ಸಂಪಾದಕೀಯ (ಪ್ರ.ವಾ., ಏ. 3) ಸಕಾಲಿಕ ಮತ್ತು ಸರ್ಕಾರದ ಬೇಜವಾಬ್ದಾರಿ ನಡೆಗೆ ಕನ್ನಡಿ ಹಿಡಿದಿದೆ. ತಾವು ಅಧಿಕಾರಕ್ಕೆ ಬಂದರೆ ಜನರನ್ನು ಸುಖದ ಉಯ್ಯಾಲೆಯಲ್ಲಿ ತೂಗುತ್ತೇವೆ ಎಂದು ಹೇಳಿತ್ತು ಕಾಂಗ್ರೆಸ್. ಆ ಪಕ್ಷದ ನೇತೃತ್ವದ ಸರ್ಕಾರ ಈಗ ವಿವಿಧ ರೂಪದಲ್ಲಿ ಕರಗಳನ್ನು ಹೇರಿ ಜನರನ್ನು ಸಡಿಲಗೊಂಡ, ತುಕ್ಕು ಹಿಡಿದ ಉಯ್ಯಾಲೆಯಲ್ಲಿ ಕುಳ್ಳಿರಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಬಂಧಿಸಿದ ಸಚಿವರು ಯಾವುದೇ
ವಂದಿಮಾಗಧರಿಲ್ಲದೆ ಬಿಎಂಟಿಸಿಯಲ್ಲಾಗಲೀ, ಕಾಲ್ನಡಿಗೆಯಲ್ಲಾಗಲೀ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಂಚರಿಸಿದರೆ ತಿಳಿಯುತ್ತದೆ ನಗರವಾಸಿಗಳ ಪಾಡು. ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲದ ಕಾರಣ ರಸ್ತೆಗಳ ಮೇಲೇ ನಡೆದಾಡಬೇಕಾದ ಸ್ಥಿತಿ ಅನೇಕ ಕಡೆ ಇದೆ. ಪಾದಚಾರಿ ಮಾರ್ಗಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಕೆಲವರು ಆಕ್ರಮಿಸಿ ವ್ಯಪಾರ– ವಹಿವಾಟು ನಡೆಸುತ್ತಿದ್ದಾರೆ. ಮೇಲ್ಸೇತುವೆ, ಮೆಟ್ರೊ ರೈಲು ನಿರ್ಮಾಣ, ರಸ್ತೆ ವಿಸ್ತರಣೆ,
ವೈಟ್ ಟಾಪಿಂಗ್ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಅಧ್ವಾನ ಮಾಡಲಾಗಿದೆ. ಎಲ್ಲೆಲ್ಲೂ ದೂಳು
ತುಂಬಿಕೊಂಡ, ಗುಂಡಿಮಯ ರಸ್ತೆಗಳು ಕಾಣಸಿಗುತ್ತವೆ. ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎನ್ನುವಂತಹ ದುಃಸ್ಥಿತಿ ಆವರಿಸಿದೆ. 

-ರಮೇಶ್ ಬಿ., ಬೆಂಗಳೂರು

ಸುಂಕ ಹೆಚ್ಚಳ: ಅಮೆರಿಕದಲ್ಲಿ ಹಣದುಬ್ಬರಕ್ಕೆ ದಾರಿ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ತಮ್ಮ ದೇಶಕ್ಕೆ ಆಮದಾಗುವ ಉತ್ಪನ್ನಗಳು, ಸೇವೆಗಳ ಮೇಲೆ ಹೊಸದಾಗಿ ಒಂದಿಷ್ಟು ಸುಂಕವನ್ನು ವಿಧಿಸಿದ್ದಾರೆ. ಈ ಎಲ್ಲ ದೇಶಗಳು ಅಮೆರಿಕವನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದು ಅವರ ಮಾತು. ಹೊಸದಾಗಿ ತಾವು ವಿಧಿಸಿರುವ ಸುಂಕದ ಪರಿಣಾಮವಾಗಿ ಅಮೆರಿಕಕ್ಕೆ ಒಳ್ಳೆಯದಾಗುತ್ತದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಅರ್ಥಶಾಸ್ತ್ರಜ್ಞರ ಪೈಕಿ ಕೆಲವರ ಅಭಿಪ್ರಾಯ ಬೇರೆಯದೇ ಆಗಿದೆ.

ಟ್ರಂಪ್ ಅವರ ನಡೆಯ ಕಾರಣದಿಂದಾಗಿ ಅಮೆರಿಕಕ್ಕೆ ಆಮದಾಗುವ ಎಲ್ಲ ಉತ್ಪನ್ನಗಳು ಮತ್ತು ಸೇವೆಗಳು ದುಬಾರಿ ಆಗುತ್ತವೆ. ಅಂದರೆ, ಅಮೆರಿಕದ ಗ್ರಾಹಕರು ಇದುವರೆಗೆ ಬಳಕೆ ಮಾಡುತ್ತಿದ್ದ, ಮುಂದೆ ಬಳಕೆ ಮಾಡಲಿರುವ ವಿದೇಶಿ ಉತ್ಪನ್ನಗಳು ಹಾಗೂ ಸೇವೆಗಳಿಗೆ ಹೆಚ್ಚು ದುಡ್ಡು ಕೊಡಬೇಕಾಗುತ್ತದೆ. ಇದು ನೇರವಾಗಿ ಅಲ್ಲಿ ಹಣದುಬ್ಬರದ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ವರದಿಯೊಂದರ ಪ್ರಕಾರ 2024ರಲ್ಲಿ ಅಮೆರಿಕ ಆಮದು ಮಾಡಿಕೊಂಡಿರುವ ಉತ್ಪನ್ನಗಳ ಮೌಲ್ಯವನ್ನು ಪ್ರತಿ ಕುಟುಂಬದ ಮಟ್ಟಕ್ಕೆ ಲೆಕ್ಕ ಹಾಕಿದರೆ ಅದು 24 ಸಾವಿರ ಡಾಲರ್‌ ಆಗುತ್ತದೆ. ಸುಂಕದ ಪರಿಣಾಮವಾಗಿ, ಅಮೆರಿಕದ ಪ್ರತಿ ಕುಟುಂಬವು ತಾವು ಇದುವರೆಗೆ ಬಳಸುತ್ತಿದ್ದ ಉತ್ಪನ್ನಗಳನ್ನೇ ಮುಂದೆಯೂ ಬಳಸಲು ಹೆಚ್ಚುವರಿಯಾಗಿ 7,300 ಡಾಲರ್ ವ್ಯಯಿಸಬೇಕಾಗುತ್ತದೆ. ಇದಕ್ಕೆ ಅಲ್ಲಿನ ಜನ ಸಿದ್ಧರಿದ್ದಾರೆಯೇ? ಇದಕ್ಕೆ ಕೆಲವು ತಿಂಗಳಲ್ಲಿ ಉತ್ತರ ಸಿಗಬಹುದು.

ಟ್ರಂಪ್ ಅವರ ನಡೆಯು ಸದ್ಯದ ಸ್ಥಿತಿಯಲ್ಲಿ ಅಮೆರಿಕದ ಗ್ರಾಹಕರ ಜೇಬಿಗೆ ಹೊಸ ಹೊರೆಯನ್ನು ಹಾಕುವಂತೆ ಕಾಣುತ್ತಿದೆ. 

-ರವಿಕಿರಣ್ ಶೆಟ್ಟಿ, ನೇರಳಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.