₹5 ನೋಟು: ಅಪನಂಬಿಕೆ ನಿವಾರಿಸಿ
ಭಾರತೀಯ ರಿಸರ್ವ್ ಬ್ಯಾಂಕ್ ಅನುಸಾರ ಐದು ರೂಪಾಯಿ ನೋಟು
ಒಪ್ಪಿಕೊಳ್ಳಬೇಕಾದ ಕರೆನ್ಸಿ (ಲೀಗಲ್ ಟೆಂಡರ್). ಆದರೆ ಕೆಲವು ಊರುಗಳಲ್ಲಿನ ಅಂಗಡಿ, ಹೋಟೆಲ್‌ಗಳು ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಆ ಮೌಲ್ಯದ ನಾಣ್ಯಗಳೇ ಚಲಾವಣೆ ಆಗುತ್ತಿವೆ. ಹತ್ತು ರೂಪಾಯಿ ನಾಣ್ಯದ ಬಗೆಗೆ ಇದೇ ಅಪನಂಬಿಕೆಯ ಪ್ರವೃತ್ತಿ ಇತ್ತು. ರಿಸರ್ವ್ ಬ್ಯಾಂಕ್ ಹಲವು ಬಾರಿ ಸ್ಪಷ್ಟೀಕರಣ ನೀಡಿದ ನಂತರ ವ್ಯಾಪಾರಿಗಳು ಈಗ ಸ್ವೀಕರಿಸತೊಡಗಿದ್ದಾರೆ. ನೋಟ್ ಮುದ್ರಣಕ್ಕಿಂತ ನಾಣ್ಯ ಟಂಕಿಸುವುದೇ ಹೆಚ್ಚಾಗಿರಬಹುದು. ಈಗಾಗಲೇ ಇರುವ ಐದು ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ನೀಡುವ ಅಗತ್ಯ ಇದೆ. ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಕ್ರಮ ಕೈಗೊಳ್ಳಲೂ ಯೋಚಿಸಬೇಕು.
ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಯಕ್ಷಗಾನದ ಪಾವಿತ್ರ್ಯ ಅಳಿಯದಿರಲಿ
ಕರಾವಳಿ ಕರ್ನಾಟಕದ ಯಕ್ಷಗಾನ ಕಲೆಯು ರಾಜಕೀಯ ಪಕ್ಷವೊಂದರ ಮತ್ತು ಅದರ ನಾಯಕನ ವೈಭವೀಕರಣದ (ಗುಣ)ಗಾನಸುಧೆಯನ್ನು ಹರಿಸುವ ದುರಂತದೆಡೆಗೆ ಇಷ್ಟಿಷ್ಟಾಗಿ ಸಾಗುತ್ತಿರುವ ವಾಸ್ತವವನ್ನು ಅಲ್ಲಿಯ ಮೂಲದವರೇ ಆದ ನಾರಾಯಣ ಎ. ಅವರು ತಮ್ಮ ಅಂಕಣ ಬರಹದಲ್ಲಿ (ಪ್ರ.ವಾ., ಜೂನ್ 11) ಸಮರ್ಥವಾಗಿ ತಿಳಿಸಿದ್ದಾರೆ.
ಯಕ್ಷಗಾನವೆಂಬ ಶುದ್ಧ ಕಲೆಗೆ ಮೆತ್ತಿಕೊಳ್ಳುತ್ತಿರುವ ಈ ಕಳಂಕದ ಕಲೆಯನ್ನು ಹೀಗೆಯೇ ಬಿಟ್ಟರೆ ಅದು ಮುಂದೆ ಯಕ್ಷಗಾನ ಕಲೆಯ ಪಾವಿತ್ರ್ಯವನ್ನೂ ಮೌಲ್ಯವನ್ನೂ ಹಾಳುಮಾಡುತ್ತದೆ. ಮಾತ್ರವಲ್ಲ, ಜನಮಾನಸದಲ್ಲಿ ಹಲವು ಬಗೆಯ ವಿಷಮಭಾವಗಳನ್ನು ಬಿತ್ತಿ ಪೋಷಿಸತೊಡಗುತ್ತದೆ. ಯಾವುದೇ ಕಲೆಯು ಮನವನ್ನು ಪ್ರಫುಲ್ಲಗೊಳಿಸಬೇಕೇ ವಿನಾ ಪ್ರಕ್ಷುಬ್ಧಗೊಳಿಸಬಾರದು,
ಪ್ರಸನ್ನಗೊಳಿಸಬೇಕೇ ವಿನಾ ಪ್ರಕೋಪಕ್ಕೆ ಈಡುಮಾಡಬಾರದು, ಆತ್ಮಗಳನ್ನು ಬೆಸೆಯಬೇಕೇ ವಿನಾ ಆತ್ಮೀಯತೆಯನ್ನು ಕಸಿಯಬಾರದು, ದಿವ್ಯಾನುಭೂತಿ ನೀಡಬೇಕೇ ವಿನಾ ಅಸಹನೆಯ ಅನುಭವ ನೀಡಬಾರದು.
ಆಗಬಹುದಾದ ಈ ಎಲ್ಲ ಅವಘಡಗಳಿಂದ ಯಕ್ಷಗಾನ ಕಲೆಯನ್ನು
ಪಾರು ಮಾಡಲು ಕಲಾವಿದರು, ವಿದ್ವಾಂಸರು, ಚಿಂತಕರು ಸೂಕ್ತ ಪ್ರಯತ್ನಗಳನ್ನು ದೊಡ್ಡ ಸ್ತರದಲ್ಲಿ ಮಾಡಬೇಕಾದ ಅನಿವಾರ್ಯ ಈಗ ಉಂಟಾಗಿದೆ.
ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಜಾತಿಯ ಕಸ ತಲೆಯಿಂದ ತೆಗೆಯಬೇಕಿದೆ
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಕುಟುಂಬದ ವಿರೋಧ ಲೆಕ್ಕಿಸದೆ ಅಂತರ್ಜಾತಿ ವಿವಾಹವಾದ ಕೆಎಸ್ಆರ್‌ಟಿಸಿ ಬಸ್ ಚಾಲಕರೊಬ್ಬರು, ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ
ಕೈಕೊಟ್ಟು ತಲೆ ಮರೆಸಿಕೊಂಡಿರುವ ಸುದ್ದಿ (ಪ್ರ.ವಾ., ಜೂನ್ 12) ಸಾಮಾಜಿಕ ಕಳಕಳಿ ಇರುವ ಪ್ರಜ್ಞಾವಂತರಿಗೆ ಬಹಳ ನೋವುಂಟು ಮಾಡಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಧರಣಿ ಕುಳಿತ ರಕ್ಷಿತಾ ಅವರ ಪರವಾಗಿ ಸರ್ಕಾರ ಸಹಿತ ಇಡೀ ಪ್ರಜ್ಞಾವಂತ ಸಮಾಜ ನಿಲ್ಲಬೇಕು.
ಈ ಜಾತಿ, ಧರ್ಮ, ದೇವರು, ಪಾಪ– ಪುಣ್ಯದಂತಹ ಕಲ್ಪನೆಗಳು, ನಮ್ಮ ಪೋಷಕರು ಮತ್ತು ಸುತ್ತಲಿನ ಮನುಷ್ಯ ಸಮಾಜದ ಮೂಲಕವೇ ನಮ್ಮ ಆಳದ ಮೆದುಳಿನೊಳಗೆ ಹೋಗಿ ನೆಲೆ ನಿಂತಿವೆ. ಬಾಲ್ಯದ ಮತ್ತು ಬೆಳೆಯುವ
ಕಾಲಘಟ್ಟದಲ್ಲಿ, ಯಾವು ಯಾವುದೋ ಕಾರಣದಿಂದಾಗಿ ತಲೆಯೊಳಗೆ ತುಂಬಿಕೊಳ್ಳುವ ಮತ್ತು ಅನೇಕರಲ್ಲಿ ಮೌಢ್ಯವಾಗಿ ರೂಪಾಂತರಗೊಳ್ಳುವ
ಕಸವನ್ನು ತಲೆಯಿಂದ ಹೊರಹಾಕಿ, ಆ ಜಾಗದಲ್ಲಿ ಬೆಳಕನ್ನು ತುಂಬಿಸುವುದೇ ಶಿಕ್ಷಣ.
ಯುವಕರಿಗೆ ಶಿಕ್ಷಣ ಕೊಡುವ ಶಾಲೆ, ಕಾಲೇಜು ಆ ಕೆಲಸವನ್ನು ಮಾಡಬೇಕು. ಮದುವೆ ಅನ್ನುವುದು ಒಂದು ವರ್ಷ ಜೊತೆಯಲ್ಲಿದ್ದು ಅನುಭವಪಟ್ಟು ಆನಂತರ ಹಿಂದಿರುಗುವುದಲ್ಲ. ಅದೊಂದು ಪೂರ್ಣಪ್ರಜ್ಞೆ. ಆ ವಿಧಿಗೆ ಒಳಗಾಗುವ ಮೊದಲೇ ಯೋಚಿಸಬೇಕಿತ್ತು. ಈಗ ಕಾಲ ಮುಗಿದಿದೆ. ತಲೆಯೊಳಗೆ ತುಂಬಿರುವ ಜಾತಿಯ ಕಸವನ್ನು ತೆಗೆದು, ಹೊಸ ಬದುಕು ನಡೆಸುವುದೊಂದೇ ಉಳಿದಿರುವ ಮಾರ್ಗ.
ತಾ.ಸಿ.ತಿಮ್ಮಯ್ಯ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.