ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 22:35 IST
Last Updated 14 ಅಕ್ಟೋಬರ್ 2025, 22:35 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಎ.ಐ ಪಠ್ಯ ಬೇಡ; ಮೌಲ್ಯಶಿಕ್ಷಣ‌ ಬೇಕು  

2026–27ರಿಂದ ಸಿಬಿಎಸ್‌ಇ 3ನೇ ತರಗತಿ ಪಠ್ಯಕ್ರಮದಲ್ಲಿ‌ ‘ಕೃತಕ ಬುದ್ಧಿಮತ್ತೆ’ (ಎ.ಐ) ಸೇರ್ಪಡೆ‌ಗೆ ಕೇಂದ್ರ ಸರ್ಕಾರ ಮುಂದಾಗಿರುವುದು ನಿಜಕ್ಕೂ ಆತಂಕಕಾರಿ. ಕೋವಿಡ್‌ಗೂ ಮೊದಲು ಮಕ್ಕಳು ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಆಗ ಅವರಲ್ಲಿ ಕ್ರಿಯಾಶೀಲ ಅನ್ವೇಷಣಾ ಸಾಮರ್ಥ್ಯ  ಕಂಡುಬರುತ್ತಿತ್ತು. ತದನಂತರ ಆನ್‌ಲೈನ್‌ ಮೂಲಕ ಶಿಕ್ಷಣ ಕಲಿಸುವ ಬದಲಾವಣೆ ಕಂಡುಬಂತು. ಅದರ ಪರಿಣಾಮ ಮಕ್ಕಳು ಸಾಮಾಜಿಕ ಜಾಲತಾಣದ ವ್ಯಸನಕ್ಕೆ ಒಳಗಾದರು. ಮೊಬೈಲ್‌ನಲ್ಲಿ ನೋಡಿದ್ದೇ ಸರಿ, ಓದಿದ್ದೇ ನಿಜ ಎಂಬ ಗ್ರಹಿಕೆಗೆ ಒಳಗಾಗಿದ್ದಾರೆ. ಮೌಲ್ಯಶಿಕ್ಷಣ ಹಾಗೂ ನೈತಿಕಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪ್ರೈಮರಿ ಶಾಲಾ ಮಕ್ಕಳಿಗೆ ಈಗ ಬೇಕಿರುವುದು‌ ಮೌಲ್ಯಶಿಕ್ಷಣ ಹಾಗೂ ಸಂಸ್ಕಾರಯುತ ಜೀವನಕ್ಕೆ ತಳಹದಿ ಒದಗಿಸುವ ನೈತಿಕ‌ಶಿಕ್ಷಣವೇ ಹೊರತು ಕೃತಕ ಬುದ್ಧಿಮತ್ತೆ ಅಲ್ಲ.

ADVERTISEMENT

–ಸುರೇಂದ್ರ ಪೈ, ಭಟ್ಕಳ

ಮಹಿಳಾ ಸುರಕ್ಷತೆ; ಸಿಗಬೇಕಿದೆ ಆದ್ಯತೆ

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಸುದ್ದಿಗಳು ಪತ್ರಿಕೆಗಳಲ್ಲಿ ರಾರಾಜಿಸುತ್ತಿವೆ. ಆದರೆ, ಅತ್ಯಾಚಾರಿಗಳನ್ನು ಮಟ್ಟಹಾಕುವ ದಿಸೆಯಲ್ಲಿ ರಾಜ್ಯ ಸರ್ಕಾರ ಇನ್ನೂ ದಿಟ್ಟಹೆಜ್ಜೆ ಇಟ್ಟಂತೆ ಕಾಣುತ್ತಿಲ್ಲ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ, ಸುರಕ್ಷತೆಯಲ್ಲಿ ಹಿಂದುಳಿದಿರುವುದು ಸ್ಪಷ್ಟ. ರಾಜ್ಯದಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ಓಡಾಡುವಂತಹ ವಾತಾವರಣ ಸೃಷ್ಟಿಸುವ ಜರೂರಿದೆ.

–ಸಿಂಧು ಬಿ.ಯು., ಹಾಸನ

ರಾಜು ತಾಳಿಕೋಟೆ ‘ನಗೆಯ ಸರದಾರ’

ಕಲಾವಿದ ರಾಜು ತಾಳಿಕೋಟೆ ಅವರ ನಿಧನವು ಉತ್ತರ ಕರ್ನಾಟಕದ ರಂಗಭೂಮಿಗೆ ಆದ ದೊಡ್ಡ ನಷ್ಟ. ಉತ್ತರ ಕರ್ನಾಟಕದ ಭಾಷಾಶೈಲಿಯ
ರಸದೌತಣವನ್ನು ಸಮಗ್ರ ಕರ್ನಾಟಕಕ್ಕೆ ಉಣಬಡಿಸಿದ್ದು ಅವರ ಹೆಗ್ಗಳಿಕೆ. ಸಿನಿಮಾಗಳಲ್ಲಿ ಅಭಿನಯಿಸಿದರೂ ಅವರ ಆದ್ಯತೆ ರಂಗಭೂಮಿಯಾಗಿತ್ತು. ಬನಶಂಕರಿ ಜಾತ್ರೆಯಲ್ಲಿ ಕಂಪನಿ ನಾಟಕಗಳ ಪ್ರದರ್ಶನದ ಮೂಲಕ ಸತತ ಹತ್ತು ವರ್ಷ ‘ಬಾಕ್ಸ್‌ ಆಫೀಸ್ ಸುಲ್ತಾನ’ನಾಗಿ ಮೆರೆದಿದ್ದು ಅವರ ಹಿರಿಮೆ.

‘ಮಾನವಂತರ ಮನೆತನ’, ‘ಕುಂಕುಮ ಭಾಗ್ಯ’ ನಾಟಕಗಳು ಅವರ ಅಭಿನಯ ಚತುರತೆಗೆ ಸಾಕ್ಷಿ. ರಾಜ್ಯದಲ್ಲಿ ರಂಗಭೂಮಿಗೆ ಮರುಹುಟ್ಟು ನೀಡಿದ ಅಗ್ರಗಣ್ಯರಲ್ಲಿ ಅವರೂ ಒಬ್ಬರು. ‘ಗರತಿ ಗೆದ್ದಳು ಸವತಿ ಸೋತಳು’ ನಾಟಕದಲ್ಲಿನ ಅಭಿನಯಕ್ಕೆ ಖ್ಯಾತ ರಾಜಕಾರಣಿಯೊಬ್ಬರು, ಅವರಿಗೆ ಬೆಳ್ಳಿ ಖಡ್ಗ ನೀಡಿದ್ದರು. ಕನ್ನಡ ರಂಗಭೂಮಿ ಇರುವವರೆಗೂ ಅವರ ಹೆಸರು ಅಜರಾಮರವಾಗಿರಲಿದೆ.

–ಅಬ್ದುಲ ರಝಾಕ ಡಿ. ಟಪಾಲ, ಕೆರೂರ

ಋತುಚಕ್ರ ರಜೆ: ಮೇಲ್ಪಂಕ್ತಿಯಾಗಲಿ

ಹೆಣ್ಣುಮಕ್ಕಳ ಮಾಸಿಕ ಚಕ್ರದ ಅವಧಿಯ ದೈಹಿಕ–ಮಾನಸಿಕ ವೇದನೆಯನ್ನು ಸಹನೀಯಗೊಳಿಸುವ ದಿಸೆಯಲ್ಲಿ ಸರ್ಕಾರ ‘ಋತುಚಕ್ರ ರಜೆ ನೀತಿ’ ಜಾರಿಗೊಳಿಸುತ್ತಿರುವುದು ಶ್ಲಾಘನೀಯ.

ಸಾಮಾನ್ಯವಾಗಿ ಮುಟ್ಟಿನ ಅವಧಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ತೀವ್ರತರದ ಕಿಬ್ಬೊಟ್ಟೆ–ಸೊಂಟನೋವು, ವಾಕರಿಕೆ, ಆಯಾಸದ ಜೊತೆಗೆ ಮಾನಸಿಕವಾಗಿಯೂ ಜರ್ಜರಿತರಾಗುತ್ತಾರೆ. ಹಾರ್ಮೋನ್‌ಗಳ ಅಸಮತೋಲನದ ಪರಿಣಾಮದಿಂದ ಈ ಲಕ್ಷಣಗಳು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿ, ಅಧಿಕ ರಕ್ತಸ್ರಾವದೊಂದಿಗೆ ತೀವ್ರ ರೂಪ ಪಡೆಯುತ್ತವೆ. ಇಂತಹ ಸಮಯದಲ್ಲಿ ವೇತನಸಹಿತ ರಜೆ ನೀಡುವ ಕ್ರಮದಿಂದ ಋತುಚಕ್ರದ ನೋವಿನಿಂದ ಚೇತರಿಸಿಕೊಳ್ಳಲು ಮಹಿಳೆಯರಿಗೆ ಉಪಕಾರಿಯಾಗಿದೆ. ಗ್ರಾಮೀಣ ಭಾಗದ ಖಾಸಗಿ ಕಂಪನಿ–ಸಂಸ್ಥೆಗಳಲ್ಲಿಯೂ ಈ ನೀತಿಯು ಕಟ್ಟುನಿಟ್ಟಾಗಿ ಅನುಷ್ಠಾನವಾಗಲಿ. ರಾಜ್ಯದ ನೀತಿಯು ಇತರ ರಾಜ್ಯಗಳಿಗೆ ಮೇಲ್ಪಂಕ್ತಿಯಾಗಲಿ.

–ಸಮೀರ ಹಾದಿಮನಿ, ಆಲಮೇಲ

ಹಸಿರು ಹೊದಿಕೆಗೆ ಆಪತ್ತು ಗ್ಯಾರಂಟಿ

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಸರ್ಕಾರ ಜೋಡಿ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದು ನಗರದ ಹಸಿರು ಹೊದಿಕೆಗೆ ಧಕ್ಕೆ ತರಲಿದೆ.

ಈಗಾಗಲೇ, ಉದ್ಯಾನನಗರಿಯಲ್ಲಿ ದೊಡ್ಡಮಟ್ಟದಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಲಕ್ಷಗಟ್ಟಲೆ ಕೊಳವೆಬಾವಿ ಕೊರೆಯಲಾಗಿದೆ. ಅನೇಕ
ಅಪಾರ್ಟ್‌ಮೆಂಟ್‌ಗಳು ಮಲ್ಟಿ–ಲೆವೆಲ್ ಬೇಸ್‌ಮೆಂಟ್ ಪಾರ್ಕಿಂಗ್ ಹೊಂದಿವೆ. ಸುರಂಗ ಕೊರೆಯುವ ಪ್ರಕ್ರಿಯೆ ಬಂಡೆ ಮತ್ತು ಬಿರುಕುಗಳಿಂದ ನೀರಿನ ಮೂಲದ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ, ವಿಪರೀತ ನಗರೀಕರಣ
ದಿಂದಾಗಿ ನಗರದ ಭೂಪ್ರದೇಶವು ಮಳೆನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಅವೈಜ್ಞಾನಿಕ ಹಾಗೂ ದುಂದುವೆಚ್ಚದ ಈ ಯೋಜನೆಯನ್ನು ಕೈಬಿಡುವುದೇ ಒಳಿತು. 

–ಬಾಬು ಶಿರಮೋಜಿ, ಬೆಳಗಾವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.