ಯುವಜನರ ಹೋರಾಟ ಹತ್ತಿಕ್ಕುವ ತಂತ್ರ
ಅಧಿಕಾರದ ಗದ್ದುಗೆ ಏರಿದರೆ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವುದಾಗಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹೇಳಿತ್ತು. ಆದರೆ, ಅಧಿಕಾರಕ್ಕೇರಿ ಎರಡೂವರೆ ವರ್ಷ ಕಳೆದರೂ ಭರವಸೆ ಈಡೇರಿಸಿಲ್ಲ. ಈ ನಡುವೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದರು. ಆಡಳಿತ ಯಂತ್ರವು ಈ ಹೋರಾಟ ಹತ್ತಿಕ್ಕುವ ದಮನಕಾರಿ ತಂತ್ರ ಅನುಸರಿಸಿದೆ. ಯುವಜನರ ಪ್ರಜಾಸತ್ತಾತ್ಮಕ ಹೋರಾಟದ ಹಕ್ಕನ್ನು ಮೊಟಕುಗೊಳಿಸಲು ಯತ್ನಿಸುವುದು ಬೆಂಕಿಯನ್ನು ಕಟ್ಟಿಹಾಕುವ ಪ್ರಯತ್ನದಂತೆ. ಅದರ ಫಲಶ್ರುತಿ ಶೂನ್ಯ; ಅಪಾಯವೇ ಹೆಚ್ಚು.
⇒ಶರಣು ಗಡ್ಡಿ, ಕೊಪ್ಪಳ
ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಿ
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಆದರೆ, ಸದನದಲ್ಲಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳು ಗಮನ ಸೆಳೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದ ಕಾರ್ಯಕರ್ತೆಯರು ರಾಜ್ಯದಾದ್ಯಂತ ಪ್ರತಿಭಟಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳು ಗಮನಹರಿಸುತ್ತಿಲ್ಲ. ಇನ್ನಾದರೂ ಕುರ್ಚಿ ಕಿತ್ತಾಟದ ವಿಷಯ ಬದಿಗೊತ್ತಿ, ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕದ ಜನತೆಗೂ ಒಂದಿಷ್ಟು ಸುವರ್ಣಯುಗ ತರುವ ಚರ್ಚೆ ಮಾಡಲಿ.
⇒ನಾಗಾರ್ಜುನ್ ಸಿರಿವಂತ, ಬೆಂಗಳೂರು
ಇಂಗ್ಲಿಷ್ ಮೋಹ: ಸರ್ಕಾರಿ ಶಾಲೆಗೆ ಕುತ್ತು
‘ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ’ ವರದಿಯು (ಪ್ರ.ವಾ., ಡಿ. 9)
ವರ್ತಮಾನಕ್ಕೆ ಕನ್ನಡಿ ಹಿಡಿದಿದೆ. ಆದರೂ, ಇಂದು ಎಲ್ಲಾ ವರ್ಗದ ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ಕಳವಳಕಾರಿ. ಇದು ಹೀಗೆಯೇ ಮುಂದುವರಿದರೆ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಹೋಗುವುದರಲ್ಲಿ ಸಂದೇಹವೇ ಇಲ್ಲ. ಈ ಸಮಸ್ಯೆಗೆ, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿದಲ್ಲಿ ಮಾತ್ರವೇ ಸ್ವಲ್ಪ ಪರಿಹಾರ ದೊರೆಯಬಹುದೇನೋ?
⇒ಎಚ್.ಎಸ್. ಟಿ. ಸ್ವಾಮಿ, ಚಿತ್ರದುರ್ಗ
ಮತ ಮಾರಾಟದಿಂದ ಭ್ರಷ್ಟಾಚಾರ ಹೆಚ್ಚಳ
ಸಮಾಜದಲ್ಲಿ ಉಲ್ಬಣಿಸಿರುವ ಭ್ರಷ್ಟಾಚಾರಕ್ಕೆ ಜನರೇ ಅಂತ್ಯ ಹಾಡಬೇಕು. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಾರೆ ಎನ್ನುವುದು ಭ್ರಮೆಯಷ್ಟೆ! ಚುನಾವಣೆಗಳಲ್ಲಿ ಸಾವಿರಾರು ರೂಪಾಯಿಗೆ ಮತ ಮಾರಿಕೊಳ್ಳುತ್ತೇವೆ. ಇದರರ್ಥ ಮತದಾರರನ್ನು ಖರೀದಿಸಲು ರಾಜಕಾರಣಿಯು ಹಗರಣ ಮಾಡಿ ಹಣ ಗಳಿಸುತ್ತಾನೆ. ಹಾಗಾಗಿ, ಮತ ಮಾರಿಕೊಂಡವರಿಗೆ ಆಯ್ಕೆಗಳಿಲ್ಲ. ದೇಶದ ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗದೆ ಇಡೀ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎನ್ನುವುದು ಹಗಲುಗನಸು. ಜನಕೇಂದ್ರಿತವಾದ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಬಯಸುವವರು ಕೂಡ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರಬೇಕಲ್ಲವೆ?
⇒ಸಿದ್ದಣ್ಣ ಪೂಜಾರಿ, ಯಕ್ಷಿಂತಿ
ಬೀದಿನಾಯಿ ಹಾವಳಿ ತಡೆಯಲು ನಿರ್ಲಕ್ಷ್ಯ
ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಈ ವಿಚಾರವನ್ನು ಲಘುವಾಗಿ ಪರಿಗಣಿಸಿವೆ. ಬೀದಿನಾಯಿಗಳ ಹಾವಳಿ ತಡೆಯಲು ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಈ ಆದೇಶಕ್ಕೆ ಸರ್ಕಾರ ಹಾಗೂ ಸ್ಥಳೀಯ ಸರ್ಕಾರಗಳು ಕವಡೆಕಾಸಿನ ಕಿಮ್ಮತ್ತು ನೀಡದೆ ಬೇಜವಾಬ್ದಾರಿ ತೋರುತ್ತಿವೆ. ಇದರಿಂದ ಮಕ್ಕಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ. ದಾವಣಗೆರೆ ಹೊರವಲಯದಲ್ಲಿ ರಾಟ್‌ವೀಲರ್ ತಳಿಯ ನಾಯಿಗಳು ಮಹಿಳೆ ದಾಳಿ ನಡೆಸಿ ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ನಡೆದಿದೆ. ರಾಜ್ಯದಾದ್ಯಂತ ಹಲವೆಡೆ ಬೀದಿನಾಯಿ ದಾಳಿ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಸರ್ಕಾರ ಕೈಕಟ್ಟಿ ಕೂರದೆ ಪರ್ಯಾಯ ವ್ಯವಸ್ಥೆ ರೂಪಿಸುವ ತುರ್ತಿದೆ.
⇒ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ
ಜನರ ಜೀವ ಹಿಂಡುತಿದೆ ಹಾರುಬೂದಿ
ಕೊಪ್ಪಳದಲ್ಲಿ ಕಾರ್ಖಾನೆಗಳ ದೂಳು ಹಾಗೂ ಹಾರುಬೂದಿಯಿಂದ ಹಳ್ಳಿಗಳಲ್ಲಿನ ಜನರ ಬದುಕು ಮಸುಕಾಗುತ್ತಿದೆ. ನಾಗರಿಕರು ಹಲವು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಈ ಕಂಪನಿಗಳ ವಿರುದ್ಧ ನಾಗರಿಕರು ಹಾಗೂ ರೈತರು ಸುದೀರ್ಘ ಹೋರಾಟ ಮಾಡಿದರೂ ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ. ಹಳ್ಳಿಗಳು ನಾಶವಾಗುವ ಮೊದಲು ಸರ್ಕಾರ ಎಚ್ಚತ್ತುಕೊಂಡು ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳ ತಡೆಗೆ ಮಾರ್ಗೋಪಾಯ ರೂಪಿಸುವ ಅಗತ್ಯವಿದೆ.
⇒ಖಾದರ್ ಬರಗೂರು, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.