ಭ್ರೂಣಹತ್ಯೆ ಮತ್ತು ಕನಸಿನ ಮದುವೆ!
‘ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಮಠ ನಿರ್ಮಿಸಿಕೊಡಿ’ ಎಂದು ಮಂಡ್ಯ ಜಿಲ್ಲೆಯ ಮರಳಿಗ ಗ್ರಾಮದ ಯುವಕರು, ಗ್ರಾಮ ಸಭೆಗೆ ಅರ್ಜಿ ಸಲ್ಲಿಸಿರುವುದು ವರದಿಯಾಗಿದೆ. ವಿಪರ್ಯಾಸ ಎಂದರೆ ಕೆಲವು ವರ್ಷಗಳ ಹಿಂದೆ ಇದೇ ಜಿಲ್ಲೆಯಲ್ಲೇ ಅವ್ಯಾಹತವಾಗಿ ನಡೆದ ಹೆಣ್ಣುಭ್ರೂಣ ಹತ್ಯೆಯ ಕರ್ಮಕಾಂಡವು ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಹೆಣ್ಣುಭ್ರೂಣ ಹತ್ಯೆ ಮಾಡುತ್ತಿರುವುದೇ ಯುವಕರ ಮದುವೆಗೆ ಯುವತಿಯರು ದೊರಕದೆ ಇರುವುದಕ್ಕೆ ಮೂಲಕಾರಣ. ಭ್ರೂಣಹತ್ಯೆ ಹೀಗೆಯೇ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಗೃಹ ಯೋಜನೆ ಬದಲಾಗಿ, ಮಠ ಯೋಜನೆ ಜಾರಿಗೊಂಡರೂ ಅಚ್ಚರಿಪಡಬೇಕಿಲ್ಲ. ಪೋಷಕರು ಎಚ್ಚತ್ತುಕೊಳ್ಳಲು ಇದು ಸಕಾಲ.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣೆ ನಗಣ್ಯ
ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಬಳಿ ರಕ್ಷಣೆ ಮಾಡಿದ್ದ ನಾಲ್ಕು ಹುಲಿ ಮರಿಗಳು ಪುನರ್ವಸತಿ ಕೇಂದ್ರದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ. ಇತ್ತೀಚೆಗೆ ರಾಜ್ಯದಲ್ಲಿ ಹುಲಿಗಳ ಹತ್ಯೆ ಅವ್ಯಾಹತವಾಗಿ ನಡೆದಿದೆ. ಆದರೂ, ಅರಣ್ಯ ಇಲಾಖೆಯು ಅವುಗಳ ಸಂರಕ್ಷಣೆಯಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುತ್ತಿಲ್ಲ. ಕಾಡಂಚಿನಲ್ಲಿ ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷ ಎಲ್ಲೆ ಮೀರಿದೆ. ಸಮುದಾಯದ ಸಹಭಾಗಿತ್ವದಡಿ ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ಅಪರೂಪದ ಪ್ರಾಣಿ–ಪಕ್ಷಿಗಳ ಉಳಿಗಾಲ ಅಸಾಧ್ಯ.
ಸುರೇಶ್ ಎಂ.ಎನ್., ಬಿ.ಟಿ. ಹಳ್ಳಿ
ಅಧಿವೇಶನ: ಮತ್ತೆ ಗೊಂದಲದ ಗೂಡು
ಪ್ರತಿವರ್ಷದಂತೆ ಈ ಬಾರಿಯೂ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಗೊಂದಲದ ಗೂಡಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತ ಚರ್ಚೆಗೆ ಮಂಕು ಕವಿದಿದೆ. ಹೀಗಾದರೆ ಕೋಟ್ಯಂತರ ರೂಪಾಯಿ ವ್ಯಯಿಸಿ ಅಧಿವೇಶನ ನಡೆಸುವ ಉದ್ದೇಶವಾದರೂ ಏನು? ಒಂದೆಡೆ ವಿರೋಧ ಪಕ್ಷದ ನಾಯಕರು ಹೋರಾಟಗಾರರ ಜೊತೆ ಕೈಜೋಡಿಸಿ ಸದನದ ಹೊರಗೆ ಹೋರಾಟಕ್ಕಿಳಿದರೆ; ಆಡಳಿತ ಪಕ್ಷವು ಅದಕ್ಕೆ ಸದನದೊಳಗೆ ಪ್ರತಿಕ್ರಿಯಿಸುತ್ತಿದೆ. ಹೀಗೆ ಮುಂದುವರಿದರೆ ಉತ್ತರ ಕರ್ನಾಟಕದ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮರೀಚಿಕೆಯಾಗಲಿದೆ. ಈ ಭಾಗ ಪ್ರತಿನಿಧಿಸುವ ಶಾಸಕರೂ ಈ ಕುರಿತು ಚಕಾರ ಎತ್ತದಿರುವುದು ವಿಷಾದಕರ.
ಪ್ರದೀಪ ಬಿಸಲನಾಯಿಕ, ಚಿಕ್ಕೋಡಿ
ನರೇಂದ್ರ ಮೋದಿ ಅವರಿಗೊಂದು ಪತ್ರ
ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಸದಸ್ಯರು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ; ಅವರು ‘ವಂದೇ ಮಾತರಂ’ ಗೀತೆ ಬಗ್ಗೆ ಪ್ರಸ್ತಾಪಿಸಿದರು. ಮತ್ತೊಬ್ಬ ಸದಸ್ಯರು, ಇಂಡಿಗೊ ವಿಮಾನಯಾನ ಕಂಪನಿಯ ಏಕಸ್ವಾಮ್ಯದ ಬಗ್ಗೆ ಪ್ರಶ್ನೆ ಎತ್ತಿದಾಗ, ಜವಾಹರಲಾಲ್ ನೆಹರೂ ಅವರ ಬಗ್ಗೆ ಮತ್ತು ದೇಶ ವಿಭಜನೆ ವಿಷಯ ಕುರಿತು ಪ್ರಸ್ತಾಪಿಸಿದರು. ನಮ್ಮದು ಒಂದು ಪ್ರಶ್ನೆಯಿದೆ: ಮೋದಿಯವರು ಎಕನಾಮಿಕ್ಸ್‌ನಲ್ಲಿ ತಪ್ಪಾದಾಗಲೆಲ್ಲ ಹಿಸ್ಟರಿ ಬಗ್ಗೆ ಏಕೆ ಮಾತನಾಡುತ್ತಾರೆ?
ನಾಗಾರ್ಜುನ ಹೊಸಮನಿ, ಕಲಬುರಗಿ
ತಿಮ್ಮಕ್ಕನ ನೆನಪುಳಿಸುವ ಕೆಲಸವಾಗಲಿ
ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ನೋಡಿಕೊಳ್ಳುವವರಿಗೆ ಲಾಭವಾದೀತು, ಅಷ್ಟೇ. ಅಷ್ಟಕ್ಕೂ ಬೇಲೂರು, ತಿಮ್ಮಕ್ಕನ ಹುಟ್ಟೂರಲ್ಲ. ಆಕೆಯ ಹೆಸರಲ್ಲಿ ನಿಜಕ್ಕೂ ಆಗಬೇಕಾದದ್ದು ಆಕೆಯ ಜೀವನ, ಕಾರ್ಯಗಳ ವಾಸ್ತವಿಕ ಸಂಗತಿಗಳನ್ನು ಅಧಿಕೃತವಾಗಿ ದಾಖಲಿಸುವ ಪುಸ್ತಕ.
ಈಗಾಗಲೇ ಆಕೆಯ ವಯಸ್ಸು, ಮರ ಬೆಳೆಸಲು ಒದಗಿದ ಕಾರಣ ಮೊದಲಾದು ವನ್ನೆಲ್ಲ ಹಿತಾಸಕ್ತರು ಅತೀ ಉತ್ಪ್ರೇಕ್ಷಿತ ಸಂಕಥನವನ್ನು ಸೃಷ್ಟಿಸಿ ಪ್ರಚಾರ ಮಾಡಿದ್ದಾಗಿದೆ. ಇದು ಮುಂದೆ ಮತ್ತಷ್ಟು ಸುಳ್ಳು ಪುರಾಣಕ್ಕೆ ದಾರಿಯಾಗದಂತೆ ಈಗಲೇ ಕಡಿವಾಣ ಹಾಕುವುದು ರಾಜ್ಯ ಸರ್ಕಾರದ ಹೊಣೆ. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಹುಲಿಕಲ್‌ನಲ್ಲಿ ತಿಮ್ಮಕ್ಕನ ಮನೆ ಇದ್ದ ಜಾಗದಲ್ಲೇ ಅಥವಾ, ಆ ಊರಿನ ಮತ್ತೊಂದೆಡೆ (ಕುದೂರು ಆದೀತು) ವಿಶಾಲ ಜಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಿ ಅಥವಾ ಅಲ್ಲಿನ ಸರ್ಕಾರಿ ಶಾಲೆಗೆ ಸಾಲುಮರದ ತಿಮ್ಮಕ್ಕ ಅವರ ಹೆಸರನ್ನೇ ಇಡಲಿ.
ಟಿ. ಗೋವಿಂದರಾಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.