ADVERTISEMENT

ವಾಚಕರ ವಾಣಿ: 29 ನವೆಂಬರ್ 2024

ವಾಚಕರ ವಾಣಿ
Published 28 ನವೆಂಬರ್ 2024, 23:43 IST
Last Updated 28 ನವೆಂಬರ್ 2024, 23:43 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಈ ಸ್ವಾಮೀಜಿಗಳಿಗೆ ಏನಾಗಿದೆ?

ಇತ್ತೀಚೆಗೆ ಮಠದಯ್ಯಗಳ ಉದ್ಧಟತನದ ಹೇಳಿಕೆಗಳು ಸಮಾಜದಲ್ಲಿ ಆಶಾಂತಿಯನ್ನು ಉಂಟುಮಾಡುವಂತಿವೆ. ಒಬ್ಬ ಸ್ವಾಮೀಜಿ ತನ್ನ ಸಂಘ ಪರಿವಾರನಿಷ್ಠ ಸ್ವಾಮಿಗಳೊಂದಿಗೆ ರಾಜ್ಯಪಾಲರನ್ನು ಕಂಡು, ‘ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸಂವಿಧಾನವು ಸರ್ವರನ್ನೂ ಗೌರವಿಸುತ್ತದೆ ಎಂಬ ಅರಿವು ಇವರಿಗೆ ಇದ್ದಂತಿಲ್ಲ. ಸಂವಿಧಾನದ ಒಂದು ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪ್ರತಿಪಾದಿಸುತ್ತದೆ. ಇನ್ನೊಂದು ವಿಧಿಯು ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಸುಧಾರಣಾ ಪ್ರವೃತ್ತಿಗೆ ಹೆಚ್ಚು ಮಹತ್ವ ನೀಡಲು ಸೂಚಿಸುತ್ತದೆ. ಹಾಗಾದರೆ, ತಮಗೆ ಎಂತಹ ಸಂವಿಧಾನ ಬೇಕೆಂಬುದನ್ನಾದರೂ ಸೂಚಿಸಬೇಕಲ್ಲವೇ ಇವರು. ಇದು, ಸಂವಿಧಾನದ ಬಗ್ಗೆ ಇವರಿಗಿರುವ ಅಸಹನೆಯ ಪ್ರತೀಕವಷ್ಟೆ.

ಇನ್ನೊಬ್ಬ ಸ್ವಾಮೀಜಿ, ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದು ಹುಕುಂ ಮಾಡುತ್ತಾರೆ (ನಂತರ, ಬಾಯಿ ತಪ್ಪಿ ಹಾಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡುತ್ತಾರೆ). ಮುಸಲ್ಮಾನರೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮೊಂದಿಗೆ ಸೇರಿ ಹೋರಾಡಿದ್ದಾರೆ, ಈ ದೇಶ ಅವರದ್ದು ಸಹ ಎಂಬುದನ್ನು ಮರೆತುಬಿಡುತ್ತಾರೆ. ಹಿಂದುಳಿದ ಸಮುದಾಯಗಳ ಕೆಲ ಸ್ವಾಮಿಗಳು ಸೇರಿ, ಸರ್ಕಾರವನ್ನೇ ಉರುಳಿಸುತ್ತೇವೆಂದು ಗುಡುಗಿದ್ದೂ ಉಂಟು. ಮತ್ತೊಬ್ಬ ಸ್ವಾಮೀಜಿ, ಮೀಸಲಾತಿ ಕೊಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಅನ್ನುತ್ತಾರೆ. ಇನ್ನೊಬ್ಬರು, ಮುಸಲ್ಮಾನ ವ್ಯಾಪಾರಿಗಳಲ್ಲಿ ಏನನ್ನೂ ಕೊಳ್ಳದಿರಿ ಎಂದು ಫರ್ಮಾನು ಹೊರಡಿಸುತ್ತಾರೆ! ಈ ಸ್ವಾಮೀಜಿಗಳಿಗೆ ಏನಾಗಿದೆ?! ತಮ್ಮ ಮಠಕ್ಕೆ ಬರುವ ಭಕ್ತಾದಿಗಳನ್ನು ಸಮಾನವಾಗಿ ಕಾಣದೆ ಮೇಲಂಗಿ ಬಿಚ್ಚಿಸಿ ಅಗೌರವ ತೋರುವ, ಪಂಕ್ತಿಭೇದ ಮಾಡುವ ಅವರು ತಮಗೆ ಗೌರವ ನೀಡಬೇಕು ಎನ್ನುತ್ತಾರೆ. ಅದು ಕಾಡಿಬೇಡಿ ಪಡೆಯುವುದಲ್ಲ ಸ್ವಾಮಿ, ತಮ್ಮ ವ್ಯಕ್ತಿತ್ವದಿಂದ ಗಳಿಸುವುದು.

ADVERTISEMENT

- ಬಿ.ಎಲ್.ವೇಣು, ಚಿತ್ರದುರ್ಗ

ಸಂವೇದನೆ ಇಲ್ಲದವರು ರಾಜ್ಯ ಆಳಬೇಕೇಕೆ?

ರಾಜ್ಯದಲ್ಲಿ ಬಿಜೆಪಿಯ ವ್ಯವಸ್ಥಿತ ಪ್ರಚಾರ ತಂತ್ರದ ಮರ್ಮವನ್ನು ಕಾಂಗ್ರೆಸ್‌ ಪಕ್ಷ ಅರಿಯದಿರುವ ಕುರಿತು ರವೀಂದ್ರ ಭಟ್ಟ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ನ. 28) ಎಳೆಎಳೆಯಾಗಿ, ಬಿಡಿಸಿ ಬಿಡಿಸಿ ಬರೆದಿದ್ದಾರೆ. ಕಾಂಗ್ರೆಸ್ಸಿಗರ ದಾರಿದ್ರ್ಯದ ಮುಸುಡಿಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. ಅಷ್ಟೂ ಸಂವೇದನೆ ಇಲ್ಲದ ಈ ಕಾಂಗ್ರೆಸ್ಸಿಗರು ಯಾಕೆ ರಾಜ್ಯವನ್ನು ಆಳಬೇಕು?! ಪಾಪ, ಸಿದ್ದರಾಮಯ್ಯ ಅವರೊಬ್ಬರೇ ಇವರೆಲ್ಲರ ಹೆಣಭಾರವನ್ನು ಹೊತ್ತುಕೊಂಡು ಇರಬೇಕಾಗಿದೆಯಲ್ಲಾ!

- ಹಿ.ಶಿ.ರಾಮಚಂದ್ರ ಗೌಡ, ಮೈಸೂರು

ಹಸಿದವರು ಅಸಹಾಯಕರು ‘ಕನ್ನಡಿಗರೆಂದೂ ಬ್ರಿಟಿಷರ ಸೇವೆ ಮಾಡಲಿಲ್ಲ. ದಕ್ಷಿಣ ಭಾರತದಲ್ಲಿ ಬ್ರಿಟಿಷರ ಸೇವೆ ಮಾಡಿದವರು ತಮಿಳರು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 27). ಇದು ನಿಜವೇ ಆಗಿದೆ. ಆದರೆ, ಅದಕ್ಕೆ ಬೇರೆಯದೇ ಆದ ಐತಿಹಾಸಿಕ ಕಾರಣವಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು– ಅಂದಿನ ಮದ್ರಾಸ್ ಪ್ರಾಂತ್ಯ– ಮಾತ್ರ ನೇರವಾಗಿ ಬ್ರಿಟಿಷರ ಆಡಳಿತದಲ್ಲಿತ್ತು. ಆದ್ದರಿಂದ ಸಹಜವಾಗಿಯೇ ತಮಿಳರು ತಮ್ಮ ಮಾಲೀಕರಾಗಿದ್ದ ಬ್ರಿಟಿಷರಿಗೆ ಗುಲಾಮರಾಗಿ ಸೇವೆ ಸಲ್ಲಿಸಬೇಕಿತ್ತು. ಆದರೆ, ನಮ್ಮ ರಾಜ್ಯವು ಹಲವು ಭಾಗಗಳಾಗಿ, ಮೈಸೂರು ಮಹಾರಾಜರು, ಕೊಲ್ಹಾಪುರ ಮಹಾರಾಜರು ಮತ್ತು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಇದೇ ರೀತಿ ಕೇರಳದ ಕೆಲವು ಭಾಗಗಳು ಟ್ರಾವಂಕೂರ್ ಮಹಾರಾಜರ ಆಳ್ವಿಕೆಯಲ್ಲಿದ್ದವು (ನಮ್ಮ ರಾಜ್ಯದ ಕೊಡಗು ಮತ್ತು ಬಳ್ಳಾರಿ ಜಿಲ್ಲೆಗಳೂ ಅಂದಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದು, ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದವು). ಈ ರಾಜರು ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲೇ ಆಳ್ವಿಕೆ ನಡೆಸುತ್ತಿದ್ದರೂ ಕೆಲವು ರೀತಿಯ ಆಡಳಿತಾತ್ಮಕ ಸ್ವಾತಂತ್ರ್ಯ ಹೊಂದಿದ್ದರು. ಆದ್ದರಿಂದ ಸಹಜವಾಗಿಯೇ ನಾವು ನೇರವಾಗಿ ಬ್ರಿಟಿಷರ ಗುಲಾಮರಾಗಿ ಸೇವೆ ಸಲ್ಲಿಸಲಿಲ್ಲ.

ಇಂದು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ತಮಿಳರು ಹೆಚ್ಚಾಗಿರಲು ಕಾರಣವೇನೆಂದರೆ, 1956ಕ್ಕೆ ಮೊದಲು ಈ ಪ್ರದೇಶವು (ಕೋಲಾರ ಜಿಲ್ಲೆಯ ಕೆಲವು ಭಾಗಗಳೂ ಸೇರಿ) ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಅಂದು, ಗಣಿಯ ಒಳಗೆ ಇಳಿದು ಚಿನ್ನವನ್ನು ತರುವ ಕೆಲಸ ಅತ್ಯಂತ ಅಪಾಯಕಾರಿಯಾಗಿದ್ದರಿಂದ, ಹೆಚ್ಚಿನ ಕೂಲಿ ಕೊಡುವೆನೆಂದರೂ ಇತರ ಜನರಾರೂ ಮುಂದೆ ಬರಲಿಲ್ಲ. ಆದರೆ, ಕಡುಬಡತನದಲ್ಲಿದ್ದ ಅನಕ್ಷರಸ್ಥ ತಮಿಳರು (ಬಹುಪಾಲು ದಲಿತರು) ಈ ಕೆಲಸ ಮಾಡಲು ಹಿಂಜರಿಯದೆ ಮುಂದೆ ಬಂದರು. ಇದೇ ತಮಿಳರೇ ನಮ್ಮ ರಾಜ್ಯದಲ್ಲಿರುವ ಅನೇಕ ಅಣೆಕಟ್ಟುಗಳನ್ನು ಕಟ್ಟಲು ತಮ್ಮ ಊರು, ಹೆತ್ತವರು ಮತ್ತು ಬಂಧುಗಳನ್ನು ಬಿಟ್ಟು ಇಲ್ಲಿಗೆ ಬಂದರು. ಈ ಅಣೆಕಟ್ಟುಗಳನ್ನು ನಿರ್ಮಿಸಲು 15-20 ವರ್ಷಗಳೇ ಆಗುತ್ತಿದ್ದುದರಿಂದ, ಅವರು ಅಲ್ಲಿಯೇ ಶಾಶ್ವತವಾಗಿ ನೆಲೆಯೂರಿದರು. ಇಂದಿಗೂ ಈ ಅಣೆಕಟ್ಟುಗಳಿರುವಲ್ಲಿ ತಮಿಳರು ಮಾತ್ರ ನೆಲಸಿರುವ ಪ್ರದೇಶಗಳನ್ನು ನೋಡಬಹುದು.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿರುವ ಕಾಫಿ ಮತ್ತು ಟೀ ತೋಟಗಳಲ್ಲಿ 100-150 ವರ್ಷಗಳಿಂದ ಇದೇ ತಮಿಳರು ಕನಿಷ್ಠ ಸೌಲಭ್ಯಗಳಿಲ್ಲದೆ ಇಂದಿಗೂ ದುಡಿಯುತ್ತಿದ್ದಾರೆ. ಅಂದಿನ ಬ್ರಿಟಿಷರು ಹೋಗಿ, ಭಾರತೀಯರೇ ಇಂದು ಮಾಲೀಕರಾಗಿದ್ದರೂ ಅವರ ಪರಿಸ್ಥಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಇದೇ ಕಾರಣದಿಂದಾಗಿಯೇ, ಮೂಲ ಆಂಧ್ರಪ್ರದೇಶದವರಾದ ತೆಲುಗು ದಲಿತರು ಬೆಂಗಳೂರಿನಲ್ಲಿ ಪೌರಕಾರ್ಮಿಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಅಸಹಾಯಕ ಜನರನ್ನು ಗುಲಾಮರೆಂದು ಯಾರಾದರೂ ಹೀಯಾಳಿಸಿದರೆ ಅದು ತಪ್ಪಾಗುತ್ತದೆ. ಸ್ವಾವಲಂಬನೆ ಇದ್ದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ಇರಲು ಸಾಧ್ಯ. ಹಸಿವು, ಬಡತನದ ಮುಂದೆ ಇದಾವುದೂ ಉಳಿಯುವುದಿಲ್ಲ. ಹಸಿದವರ ಕಷ್ಟ ಹಸಿದವರಷ್ಟೇ ಬಲ್ಲರು.

- ಎಂ.ಗೋಪಿನಾಥ್, ಬೆಂಗಳೂರು

ಗಮನಾರ್ಹ ಹೇಳಿಕೆ: ನ್ಯಾಯಾಂಗ ಪರಾಮರ್ಶಿಸಲಿ

ಭ್ರಷ್ಟಾಚಾರಿಗಳು ಕಠಿಣ ಶಿಕ್ಷೆಗೆ ಅರ್ಹರು ಎಂಬ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ ಅವರ ಅಭಿಪ್ರಾಯ (ಪ್ರ.ವಾ., ನ. 28) ಹಾಗೂ ಅತ್ಯಾಚಾರ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ಸರಿಯಲ್ಲ ಎಂಬ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಈ ಮೊದಲಿನ ಹೇಳಿಕೆ ಎರಡೂ ಗಮನಾರ್ಹ. ದಂಡಂ ದಶಗುಣಂ! ಕತ್ತೆಗೆ ಲತ್ತೆ ಪೆಟ್ಟು ಯೋಗ್ಯ ಎಂಬುದನ್ನು ಸಾರಿ ಹೇಳುತ್ತವೆ. ನ್ಯಾಯಾಂಗವು ಈ ಕುರಿತು ಗಂಭೀರವಾಗಿ ಪರಾಮರ್ಶಿಸಲಿ.

- ಅನಿಲಕುಮಾರ ಮುಗಳಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.