ವಾಚಕರ ವಾಣಿ
ರಾಜ್ಯದ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರನ್ನು, ಆಗಸ್ಟ್ 2ರಂದು ಏಕಕಾಲಕ್ಕೆ ಕೆಲಸದಿಂದ ವಜಾಗೊಳಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಲ್ಲಿನ ಅರ್ಹತೆ, ಅನರ್ಹತೆಯ ಪ್ರಶ್ನೆಯು ನ್ಯಾಯಾಲಯದ ಕಟಕಟೆಯಲ್ಲಿದೆ. 10–15 ವರ್ಷಗಳಿಂದ ಕಾರ್ಯ ನಿರ್ವಹಿಸುವಾಗ ಇಲ್ಲದ ಈ ಪ್ರಶ್ನೆ ಈಗೇಕೆ?
ಪ್ರಕರಣದ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದ್ದು, ಉನ್ನತ ಶಿಕ್ಷಣ ಇಲಾಖೆಯು ನ್ಯಾಯಾಲಯದ ಆದೇಶವನ್ನು ಎದುರು ನೋಡುತ್ತಿದೆ. ಈ ಮಧ್ಯೆ ಅತಿಥಿ ಉಪನ್ಯಾಸಕರಿಗೆ ಕೆಲಸವೂ ಇಲ್ಲ, ಸಂಬಳವೂ ಇಲ್ಲದೆ ಬೇರೆ ಕೆಲಸ ನಿರ್ವಹಿಸಲಾಗದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಉನ್ನತ ಶಿಕ್ಷಣ ಸಚಿವರು ಕಾನೂನು ತಜ್ಞರ ಸಲಹೆ ಪಡೆದು ಅತಿಥಿ ಉಪನ್ಯಾಸಕರ ನೇಮಕಕ್ಕೆ ತಕ್ಷಣ ಮುಂದಾಗಲಿ.
⇒ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ
ಕೇಂದ್ರ ಸರ್ಕಾರ ಬಲವಂತವಾಗಿ ‘ಹಿಂದಿ’ ಹೇರಿಕೆ ಮಾಡುತ್ತಿದೆ ಎಂಬ ಕೂಗು ಆಗಾಗ ಕನ್ನಡಪರ ಸಂಘಟನೆಗಳು, ರಾಜಕೀಯ ನಾಯಕರಿಂದ ಕೇಳಿ ಬರುತ್ತಿರುತ್ತದೆ. ಆದರೆ, ದಿಲ್ಲಿ ಚಲೊ, ರಾಸ್ತಾ–ರೋಕೊ, ರೇಲ್ ರೋಕೊ, ಸಜಾ ಬಂದಿ, ಅಠಾರಾ ಕಚೇರಿ, ದವಾಖಾನೆ, ಸಬ್ಜಿ ಮಾರ್ಕೆಟ್, ಬೈಠಕ್, ಹಮಾರಿ ಮಾಂಗೇ ಪೂರಾ ಕರೋ, ಇತ್ಯಾದಿ ಹಲವಾರು ಹಿಂದಿ ಶಬ್ದಗಳನ್ನು ಬಳಸುತ್ತಿದ್ದೇವೆ. ಇದು ನಮಗರಿವಿಲ್ಲದೇ ಮಾಡಿಕೊಂಡಿರುವ ಹಿಂದೆ ಹೇರಿಕೆಯಲ್ಲವೆ?
⇒ವೆಂಕಟೇಶ ಮುದಗಲ್, ಕಲಬುರಗಿ
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಆಯೋಗ ರಚನೆಯಾದ ದಿನದಿಂದ ಯಾವುದೇ ಹೊಸ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಉದ್ಯೋಗಾಕಾಂಕ್ಷಿಗಳು ಅಡಕತ್ತರಿಗೆ ಸಿಲುಕಿದ್ದಾರೆ. ಈಗ ಆಯೋಗವೂ ವರದಿ ಸಲ್ಲಿಸಿದೆ. ಒಳಮೀಸಲಾತಿ ಜಾರಿಗೊಳಿಸುವ ಜೊತೆಗೆ ಅಭ್ಯರ್ಥಿಗಳ ವಯೋಮಿತಿಯನ್ನು ಸಡಿಲಗೊಳಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಬೇಕಿದೆ.
⇒ಪವನ್ ಜಯರಾಂ, ಚಾಮರಾಜನಗರ
‘ಮತ ಕಳವು’ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿರುವುದು ಸರಿಯಷ್ಟೇ. ರಾಹುಲ್ ಅವರ ದಾಖಲೆಯನ್ನು ಬೆನ್ನುಹತ್ತಿ ಹೊರಟ ‘ಪ್ರಜಾವಾಣಿ’ಯು ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನಿರೆಡ್ಡಿ ಗಾರ್ಡನ್‌ನಲ್ಲಿ ಸತ್ಯಾಸತ್ಯತೆ ಪರಿಶೀಲಿಸಿದಾಗ ಹಲವು ಅಕ್ರಮಗಳು ಬಯಲಾಗಿವೆ. ‘ಪ್ರಜಾವಾಣಿ’ ಮಾಡಿರುವ ಕೆಲಸವನ್ನು ಚುನಾವಣಾ ಆಯೋಗವೂ ಮಾಡಿ ರಾಹುಲ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತಲ್ಲವೇ?
ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವರು ಇದ್ದಾರೆ. ಈ ಮೊದಲು ಸಚಿವರ ಸ್ಥಾನದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇದ್ದರು. ಎನ್‌ಡಿಎ ಸರ್ಕಾರವು ಸಿಜೆಐ ಅವರನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟಿತು. ವಿರೋಧ ಪಕ್ಷಗಳು ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಣೆ ನೀಡಲಿಲ್ಲ.
⇒ಕೆ.ಎಂ. ಜಯರಾಮಯ್ಯ, ಮೈಸೂರು
ಬೆಂಗಳೂರಿನ ಉದ್ಯಮಿಯೊಬ್ಬರು ತಿರುಪತಿ ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿರುವುದು ವರದಿಯಾಗಿದೆ. ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ನೀಡುವ ಸಾಕಷ್ಟು ದಾನಿಗಳು ಇದ್ದಾರೆ. ಈ ದಾನಿಗಳು ನಡೆಸುವ
ಉದ್ಯಮಗಳಲ್ಲಿ ದುಡಿಯುವವರಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಇರುತ್ತಾರೆ. ಅವರ ಮಕ್ಕಳ ಶಿಕ್ಷಣಕ್ಕೆ ದೇಣಿಗೆಯ ಹಣ ವಿನಿಯೋಗಿಸಿದರೆ ಆ ಕೆಲಸವೂ ದೇವರ ಕೆಲಸವೇ ಆಗುತ್ತದಲ್ಲವೇ?
⇒ಸಂತೋಷ ಡಿ. ವಾಲಿ, ರಾಮದುರ್ಗ
ಚಂದ್ರನಲ್ಲಿ ಪರಮಾಣು ಪೈಪೋಟಿ ಲೇಖನ (ಲೇ: ನಾಗೇಶ ಹೆಗಡೆ, ಪ್ರ.ವಾ., ಆಗಸ್ಟ್ 14) ಓದುತ್ತಿದ್ದಂತೆ ಮಾನವನ ದುರಾಸೆಗೆ ಮುಂಬರುವ ದಿನಗಳಲ್ಲಿ ಎಲ್ಲಿ ಭೂತಾಯಿ ಸರ್ವನಾಶವಾಗುವಳೋ ಎಂಬ ಚಿಂತೆ ಆವರಿಸಿತು. ಬುವಿಯ ಮೇಲೆ ಮಾನವ ಸೃಷ್ಟಿಯ ತ್ಯಾಜ್ಯದಿಂದ ಮಲಿನ ಮಾಡಿಯಾಯಿತು; ನಂತರದಲ್ಲಿ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ಸುರಿಮಳೆಯಾಯಿತು, ಈಗ ಚಂದಿರನ ಸರದಿ. ಪೈಪೋಟಿಗೆ ಬಿದ್ದವರಂತೆ ಪರಮಾಣು ಸ್ಥಾವರಗಳನ್ನು ಚಂದಿರನ ಮೇಲೆ ಸ್ಥಾಪಿಸಬೇಕೆಂಬ ಜಿಜ್ಞಾಸೆ ಹುಟ್ಟಿದ್ದಾದರೂ ಏಕೆ? ಅದೆಷ್ಟೋ ಬಡರಾಷ್ಟ್ರಗಳು ಇನ್ನೂ ಅನ್ನ, ಅರಿವೆ, ವಸತಿ ಸೌಲಭ್ಯದಿಂದ ವಂಚಿತವಾಗಿವೆ. ಅವುಗಳ ಅಭಿವೃದ್ಧಿಯ ಚಿಂತನೆಯು ಮುಂದುವರಿದ ದೇಶಗಳ ನಾಯಕರಿಗೆ ಬಾರದಿರುವುದು ಸೋಜಿಗ.
⇒ಪರಮೇಶ್ವರ ಜೆ.ಎಂ., ಸಂಡೂರು
ನೀತಿ
ನಮ್ಮ ಪ್ರಜಾಪ್ರಭುತ್ವದಲ್ಲಿ,
ಆಳುವವರು ಎಂದಿಗೂ
ನಿಜ ನುಡಿಯಬಾರದು
ನುಡಿದರೆ
ಅಧಿಕಾರದಲ್ಲಿರಬಾರದು
ಇದು ರಾಜನೀತಿ!
ರಾಜಣ್ಣಗೆ ಆದ ರೀತಿ
ಎಚ್. ಆನಂದರಾಮ ಶಾಸ್ತ್ರೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.