ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮೌಲ್ಯಶಿಕ್ಷಣ ಶಾಲಾಪಠ್ಯದ ಭಾಗವಾಗಿರಲಿ

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೌಲ್ಯಶಿಕ್ಷಣ ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಡಿಎಸ್‌ಇಆರ್‌ಟಿಯಿಂದ ಅಭ್ಯಾಸ ಮತ್ತು ಚಟುವಟಿಕೆ ಪುಸ್ತಕಗಳನ್ನು ಹೊರತರುವುದಾಗಿ ಹೇಳಿದೆ. ಆದರೆ, ಮೌಲ್ಯಶಿಕ್ಷಣವನ್ನು ಭಾಷೆ, ಪರಿಸರ ಅಧ್ಯಯನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಸಮ್ಮಿಳಿತಗೊಳಿಸಿ ಕಲಿಸಬೇಕಿದೆ. ಚಟುವಟಿಕೆಯ ಪುಸ್ತಕದಲ್ಲಿ ಮೌಲ್ಯಶಿಕ್ಷಣ ಕುರಿತು ಹೇಳ
ಹೊರಟಿರುವುದು ಸರಿಯಲ್ಲ. ಶಿಕ್ಷಕರು ಹಾಗೂ ಮಕ್ಕಳು ಅಭ್ಯಾಸ ಪುಸ್ತಕಗಳಿಗೆ ನೀಡುತ್ತಿರುವ ಮಹತ್ವ ಕಡಿಮೆ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದಾದರೂ ಪಠ್ಯವಸ್ತುವಿನಲ್ಲಿಯೇ ಮೌಲ್ಯಶಿಕ್ಷಣ ಅಳವಡಿಸಿ ಜಾರಿಗೊಳಿಸಲಿ.

⇒ಮಲ್ಲಿಕಾರ್ಜುನ ಕುನ್ನೂರ, ಮಾಗಣಗೇರಾ

ADVERTISEMENT

ಪುರುಷ ಹಿರಿಯ ನಾಗರಿಕರಿಗೆ ‘ಶಕ್ತಿ’ ನೀಡಿ

ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಮೂಲಕ ಮಹಿಳೆಯರಿಗೆ ನಗರ ಸಾರಿಗೆ ಹಾಗೂ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಸರಿಯಷ್ಟೇ. ಬಾಳಿನ ಮುಸ್ಸಂಜೆಯಲ್ಲಿರುವ ಪುರುಷ ಹಿರಿಯ ನಾಗರಿಕರಿಗೆ ಆದಾಯದ ಮೂಲಗಳು ಕಡಿಮೆ. ಅವರಿಗೆ ವಯಸ್ಸಾಗಿರುವುದರಿಂದ ಅನವಶ್ಯಕವಾಗಿ ಪ್ರಯಾಣ ಮಾಡುವುದಿಲ್ಲ. ಹಾಗಾಗಿ, ‘ಶಕ್ತಿ’ ಯೋಜನೆಯನ್ನು ಪುರುಷ ಹಿರಿಯ ನಾಗರಿಕರಿಗೂ ವಿಸ್ತರಿಸಬೇಕಿದೆ.

⇒ಚಂದ್ರಕುಮಾರ್ ಡಿ., ಬೆಂಗಳೂರು

ಮತೀಯ ಆಚರಣೆಗೆ ಮೂಗುದಾರ ಹಾಕಿ

ವಿಧಾನಸೌಧ, ಸರ್ಕಾರಿ ಕಚೇರಿ, ಶಾಲಾ–ಕಾಲೇಜು ಸೇರಿ ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಹಬ್ಬ, ಪೂಜೆ, ಹೋಮ, ಹವನದಂಥ ಮತೀಯ ಚಟುವಟಿಕೆಗಳು ಸದ್ದಿಲ್ಲದೆ ಸಾಗುತ್ತಿವೆ. ಸಾರ್ವಜನಿಕರು, ವಿದ್ಯಾರ್ಥಿಗಳ ಮೇಲೆ ಹೇರಿಕೆ ಅತಿಯಾಗುತ್ತಿದೆ. ಆಯಾ ಧರ್ಮದ ಶೈಕ್ಷಣಿಕ ಸಂಸ್ಥೆಗಳು ಪ್ರಾರ್ಥನೆಯನ್ನು ಪ್ರಾಮುಖ್ಯ ಮಾಡಿಕೊಂಡಿವೆ. ಶೈಕ್ಷಣಿಕ ಸಂಸ್ಥೆಗಳ ಕಟ್ಟಡದ ಬಣ್ಣ ಹಾಗೂ ಸಮವಸ್ತ್ರವೂ ಧಾರ್ಮಿಕತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾದರೆ, ಸರ್ಕಾರಿ ಸಂಸ್ಥೆ, ಶಾಲಾ-ಕಾಲೇಜುಗಳ ಕಲಿಕೆ ಕಲುಷಿತಗೊಂಡು ಮತೀಯ, ರಾಜಕೀಯ ವೈಷಮ್ಯ ಹೆಚ್ಚುತ್ತದೆ. ಇದಕ್ಕೆ ಕಡಿವಾಣ ಹಾಕುವುದು ಸರ್ಕಾರದ ಹೊಣೆ. 

⇒ಶಿವರಾಜ ಯತಗಲ್, ರಾಯಚೂರು

ಮುಟ್ಟಿನ ರಜೆ: ಹೆಚ್ಚಿನ ಕಾಳಜಿ ಅಗತ್ಯ

ಚಿಕ್ಕ ವಯಸ್ಸಿಗೆ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಆದ್ದರಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಯ ಅವಶ್ಯಕತೆಯಿದೆ. ವರ್ಷದಲ್ಲಿ ಇಂತಿಷ್ಟು ದಿವಸ ತರಗತಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಹೆಚ್ಚುವರಿಯಾಗಿ ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ದಿನಗಳನ್ನು ಒದಗಿಸಿಕೊಡಬೇಕಾಗಿದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಋತುಚಕ್ರದ ಅವಧಿಯಲ್ಲಿ ಗೊಂದಲ, ಮುಜುಗರ ಎದುರಿಸುತ್ತಾರೆ. ಆದುದರಿಂದ, ಪ್ರತಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರನ್ನು ನೋಡಲ್ ಶಿಕ್ಷಕಿಯಾಗಿ ಗುರುತಿಸಿ, ಅವರನ್ನು ಋತುಚಕ್ರದ ಅವಧಿಯಲ್ಲಿ ಸಂಪರ್ಕಿಸಲು ಹೆಣ್ಣುಮಕ್ಕಳಿಗೆ ತಿಳಿಸಬೇಕು. ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಬೇಕಿದೆ.

⇒ಯಮುನಾ ನಾಗರಾಜು, ಮೈಸೂರು

ನಗುವಿನ ಹಿಂದೆ ಹೂತುಹೋದ ಮೌನ

ಬಾಲಿವುಡ್‌ನ ಅಜರಾಮರ ಹಾಸ್ಯನಟ ಗೋವರ್ಧನ್ ಅಸ್ರಾಣಿ ನಿಧನರಾಗಿದ್ದಾರೆ. ‘ನನ್ನ ಸಾವಿನ ಬಗ್ಗೆ ದೊಡ್ಡ ಸುದ್ದಿ ಬೇಡ’ ಎಂದು ಅವರೇ ತನ್ನ ಕುಟುಂಬಕ್ಕೆ ಸೂಚಿಸಿದ್ದರಂತೆ. ಹಾಗಾಗಿ, ಅಂತ್ಯಸಂಸ್ಕಾರ ಮುಗಿದ ನಂತರವೇ ಅವರ ನಿಧನದ ಸುದ್ದಿ ಹೊರಬಿದ್ದಿದೆ. ಇದು ಅಸ್ರಾಣಿ ಅವರ ಜೀವನದ ತತ್ತ್ವವನ್ನೇ ಹೇಳುತ್ತದೆ; ನಗಿಸುವವರ ಜೀವನದಲ್ಲಿ ಸಾಕಷ್ಟು ನಿಶ್ಶಬ್ದವೂ ಇರುತ್ತದೆ ಅಲ್ಲವೆ?

ಅಸ್ರಾಣಿ ಅವರ ಮುಖ ಪರದೆಯ ಮೇಲೆ ಕಾಣಿಸಿಕೊಂಡರೆ ಪ್ರೇಕ್ಷಕರ ತುಟಿಗಳ ಮೇಲೆ ನಗು ಹೊಳೆಯುತ್ತಿತ್ತು. ಹಾಸ್ಯ, ಚುಟುಕು, ಮೃದು ವ್ಯಂಗ್ಯ – ಇವುಗಳೆಲ್ಲ ಅವರ ಅಭಿನಯದ ಶಸ್ತ್ರಾಸ್ತ್ರಗಳು. ‘ಶೋಲೆ’ಯಲ್ಲಿನ ಜೈಲರ್ ಪಾತ್ರದಿಂದ ಹಿಡಿದು ಹಲವು ಸಿನಿಮಾಗಳಲ್ಲಿ ನೂರಾರು ಹಾಸ್ಯಕ್ಷಣಗಳನ್ನು ಅಮರಗೊಳಿಸಿದ್ದಾರೆ.

⇒ಶಿವಯೋಗಿ ಎಂ.ವಿ., ರಾಂಪುರ

ಆಳುವವರ ಹೊಣೆಗೇಡಿತನಕ್ಕೆ ಮದ್ದೆಲ್ಲಿ?

ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ, ಯಾವುದಾದರೊಂದು ವಿವಾದ ಸೃಷ್ಟಿಸಿ ಜನರ ಗಮನ ಸೆಳೆಯುವ ತಂತ್ರ ಅನುಸರಿಸುವುದು ರೂಢಿಯಾಗಿದೆ. ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುವುದೇ ಇವರ ಪಾಲಿನ ಸಂವಿಧಾನ. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ರೈತರು, ದಲಿತರು, ಸ್ತ್ರೀಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದು ಅಪರೂಪ. ಜನರ ಕಲ್ಯಾಣಕ್ಕೆ ನೆರವಾಗದ ವಿಷಯಗಳನ್ನು ಜ್ವಲಂತ ಸಮಸ್ಯೆಗಳೆಂದು ಬಿಂಬಿಸುತ್ತಿರುವ ಹೊಣೆಗೇಡಿತನವು ಜನರ ಪಾಲಿಗೆ ಉರುಳಾಗಿದೆ.

⇒ಭೀಮಾನಂದ ಮೌರ್ಯ, ಮೈಸೂರು

ಜಾತೀಯತೆ: ಗುಪ್ತಗಾಮಿನಿ ಬಹಿರಂಗ
ಜಾತಿ ಎಲ್ಲಿದೆ? ನಾವು ಯಾರ ಜಾತಿಯನ್ನೂ ಕೇಳುವುದಿಲ್ಲ; ಕಳೆದ ಒಂದು ದಶಕದಲ್ಲಿ ನಾವೆಲ್ಲರೂ (ಹಿಂದೂಗಳು) ಒಂದೇ ಎನ್ನುವ ರಾಷ್ಟ್ರೀಯತೆಯ ಭಾವನೆ ಮೂಡಿದ್ದು, ಜಾತಿ ತಾರತಮ್ಯವು ಹಿನ್ನೆಲೆಗೆ ಸರಿದಿದೆ ಎಂಬಿತ್ಯಾದಿ ಮಾತುಗಳನ್ನು ನಾವು ಮಾಧ್ಯಮಗಳಲ್ಲಿ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ನಿಜಕ್ಕೂ ಇದು ಸತ್ಯವೇ? ಜಾತಿ, ಧರ್ಮದ ಗೊಡವೆಯೇ ಇಲ್ಲದ ನವ ಸಮ ಸಮಾಜ ನಿರ್ಮಾಣವಾಗಿದೆಯೇ? ಇಂಥ ಪ್ರಶ್ನೆಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಉತ್ತರಿಸಿದೆ. ಒಂದು ಸಮಾಜವಾಗಿ ನಾವು ಕೇಳಲಿಚ್ಛಿಸದ, ಅಸ್ತಿತ್ವದಲ್ಲಿ ಇಲ್ಲವೆಂದು ಪ್ರತಿಪಾದಿಸುವ, ಸಮಾಜದಲ್ಲಿ ಗುಪ್ತಗಾಮಿನಿಯಂತಿರುವ, ವ್ಯಕ್ತಿ ಮತ್ತು ಸಾಮಾಜಿಕ ನೆಲೆಯಲ್ಲಿ ಹಲವು ಸುಳ್ಳಿನ ಪೋಷಾಕು ತೊಟ್ಟಿರುವ ಸತ್ಯಗಳನ್ನು ಸಮೀಕ್ಷೆ ಹೊರಗೆಡವಿದೆ. – ಶರತ್ ಸುಬ್ಬೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.