ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ ಋತುಚಕ್ರ ರಜೆ ನೀಡಿ ಆದೇಶ ಹೊರಡಿ ಸಿರುವುದು ಸರಿಯಷ್ಟೆ. ಅದೇ ರೀತಿ ಶಾಲೆ, ಕಾಲೇಜುಗಳಿಗೆ ಹೋಗುವ ಪ್ರೌಢಾವಸ್ಥೆಯ ವಿದ್ಯಾರ್ಥಿನಿಯರಿಗೂ ಈ ನಿಯಮ ಅನ್ವಯಿಸಬೇಕಿದೆ. ಮಾಸಿಕ ತೊಂದರೆಯನ್ನು ವಿದ್ಯಾರ್ಥಿನಿಯರೂ ಅನುಭವಿಸುತ್ತಿರುತ್ತಾರೆ. ಹಾಗಾಗಿ, ಋತುಚಕ್ರದ ದಿನಗಳಂದು ವಿದ್ಯಾರ್ಥಿನಿಯರ ಹಾಜರಾತಿಯಲ್ಲಿ ಗೈರುಹಾಜರಿ ನಮೂದಿಸದಂತೆ ಸರ್ಕಾರ ಆದೇಶಿಸಬೇಕಿದೆ.
⇒ಸುಧಾ ನಾರಾಯಣರಾವ, ಯಲಬುರ್ಗಾ
‘ಶಕ್ತಿ’ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಜೊತೆ
ಕಂಡಕ್ಟರ್‌ಗಳು ಜಟಾಪಟಿ ನಡೆಸುವುದು ಸರ್ವೇಸಾಮಾನ್ಯ. ಯೋಜನೆ ಆರಂಭ ವಾಗಿ ಎರಡೂವರೆ ವರ್ಷವಾಗಿದೆ. ಇದುವರೆಗೆ ಸರ್ಕಾರ ನಿಯಮ ಸಡಿಲಿಸುವ ಗೋಜಿಗೆ ಹೋಗಿಲ್ಲ. ಬಸ್‌ಗಳಲ್ಲಿ ಒಂದೂರಿಗೆ ಉಚಿತ ಟಿಕೆಟ್ ಪಡೆಯುವ ಮಹಿಳೆಯರು ಮಾರ್ಗಮಧ್ಯದಲ್ಲೇ ಅನಿವಾರ್ಯ ಕಾರಣಕ್ಕೆ ಇಳಿಯಲು ಮುಂದಾದರೆ ಕಂಡಕ್ಟರ್‌ಗಳು ಬಿಡುವುದಿಲ್ಲ. ಇದರಿಂದ ಅನೇಕ ಹೆಣ್ಣುಮಕ್ಕಳು ಅವಮಾನ ಎದುರಿಸಿದ್ದಾರೆ. ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ, ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ಆಗುತ್ತಿರುವ ಅವಮಾನ ತಪ್ಪಿಸಬೇಕಿದೆ.
⇒ಗೀತಾ ಕುಲಕರ್ಣಿ, ಗದಗ
ಮಣ್ಣಿನ ಮ್ಯೂಸಿಯಂ ಅಪರೂಪದ ಮತ್ತು ಅಪೂರ್ವವಾದ ಪರಿಕಲ್ಪನೆ
(ಲೇ: ಗಾಣಧಾಳು ಶ್ರೀಕಂಠ, ಪ್ರ.ವಾ., ಡಿ. 5). ಭೂಮಿ ಉಳಿಸಿಕೊಳ್ಳಲು, ನೆಮ್ಮದಿ ಯಿಂದ ಬದುಕಲು ಈ ಅರಿವು ಮುಖ್ಯ. ಹಳ್ಳಿಯ ಹಿರಿಯ ರೈತಾಪಿ ವರ್ಗಕ್ಕೆ, ಪೂರ್ವಿಕರಿಗೆ ಮಣ್ಣಿನ ಗುಣ ಗೊತ್ತಿತ್ತು. ಅದನ್ನು ಅನುಸರಿಸಿಯೇ ತಕ್ಕ ಬೆಳೆ ಬೆಳೆಯುತ್ತಿದ್ದರು. ಇದು ಮಣ್ಣಿನ ಫಲವತ್ತತೆಯನ್ನೂ ಸ್ಥಿರವಾಗಿಡುತ್ತಿತ್ತು. ಈಗಿನ ಪರಿಸ್ಥಿತಿ ಭಿನ್ನ. ಈ ಕಾರಣ ಕ್ಕಾಗಿಯೇ ಹೋಬಳಿಮಟ್ಟದಲ್ಲಿ ಇಂತಹ ಮ್ಯೂಸಿಯಂ ಸ್ಥಾಪಿಸುವುದು ಮುಂದಿನ ತಲೆಮಾರಿಗೆ ಉಪಯುಕ್ತ. ಕೃಷಿಯಿಂದ ದೂರ ಸರಿಯುತ್ತಿರುವ ಇಂದಿನ ಪೀಳಿಗೆಗೂ ಇದು ಉತ್ತೇಜನಕಾರಿ. ಈ ದಿಸೆಯಲ್ಲಿ ರೈತ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕು.
⇒ಚಂದ್ರಶೇಖರ ತಾಳ್ಯ, ಹೊಳಲ್ಕೆರೆ
ಇಂದು (ಡಿ. 6) ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ. ಅವರು ನಮ್ಮನ್ನಗಲಿ ಹಲವಾರು ವರ್ಷಗಳು ಗತಿಸಿವೆ. ಅವರ ಆದರ್ಶಗಳು ನಮ್ಮೊಟ್ಟಿಗಿವೆ. ಆದರೆ, ನಮ್ಮೆದೆಯ ಒಳಗೆ ಇನ್ನೂ ಜಾತಿ, ಧರ್ಮದ ಗೋಡೆಗಳು ಬಲಿಷ್ಠವಾಗುತ್ತಿವೆ. ತಾರತಮ್ಯಗಳು ಹೆಚ್ಚಾಗುತ್ತಿವೆ. ಮನುಷ್ಯರ ನಡುವೆ ಅಂತರ ಹೆಚ್ಚಾಗುತ್ತಿದೆ. ಇವೆಲ್ಲವೂ ಅಂಬೇಡ್ಕರ್ ಕಂಡ ಪ್ರಬುದ್ಧ ಭಾರತದ ಕನಸಿಗೆ ಕೊಳ್ಳಿ ಇಡುತ್ತಿವೆ. ಸಮಾನತೆಯೆಂಬುದು ಮನಸ್ಸಿನಾಳದಿಂದ ಬರಲಿ; ಮಹಾಪುರುಷರು ಕಂಡ ಕನಸಿನ ಭಾರತ ನಿರ್ಮಾಣವಾಗಲಿ.
⇒ನಾಗಾರ್ಜುನ ಹೊಸಮನಿ, ಕಲಬುರಗಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಬೂತ್‌ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ಅತಿಯಾದ ಒತ್ತಡ ಹೇರುತ್ತಿ ರುವುದು ದಿಟ. ಕಡಿಮೆ ಗಡುವಿನಲ್ಲಿ ಗುರಿ ಮುಟ್ಟಬೇಕಾದ ಆತಂಕ ಕೆಲವರ ಆತ್ಮಹತ್ಯೆಗೂ ಕಾರಣವಾಗಿದೆ. ಕೇರಳದಂತಹ ರಾಜ್ಯಗಳಲ್ಲಿ ಸ್ಥಳೀಯ ಚುನಾವಣಾ ಪ್ರಕ್ರಿಯೆಯೊಂದಿಗೆ ಎಸ್‌ಐಆರ್ ಸೇರಿ ಒತ್ತಡ ದುಪ್ಪಟ್ಟಾಗಿದೆ. ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಬಳಿಕ ಗಡುವು ಒಂದು ವಾರ ವಿಸ್ತರಿಸಿದರೂ, ಇದು ಸಾಕಾಗದು. ಆಯೋಗವು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಬದಲು, ಬಿಹಾರದಂತೆ ನೈಜ ಮತದಾರರು ಹೊರಗುಳಿಯದಂತೆ ಮತ್ತು ಬಿಎಲ್‌ಒಗಳಿಗೆ ಅನ್ಯಾಯವಾಗದಂತೆ ತಕ್ಷಣವೇ ಗಡುವು ವಿಸ್ತರಿಸಬೇಕು. ಸಂವೇದನಾಶೀಲ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ, ಆಯೋಗದ ವಿಶ್ವಾಸಾರ್ಹತೆ ಮತ್ತಷ್ಟು ಕುಸಿಯಲಿದೆ.
⇒ನಿರಂಜನ್ ಎಚ್.ಬಿ., ಸಾಗರ
ಸಾಮಾಜಿಕ ಬಹಿಷ್ಕಾರವನ್ನು ಶಿಕ್ಷಾರ್ಹ ಅಪರಾಧ ಎನಿಸುವ ಕಾಯ್ದೆ ತರಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಸಮಾಜದ ಮಾನವೀಯತೆ ಮತ್ತು ನ್ಯಾಯತತ್ತ್ವವನ್ನು ಬಲಪಡಿಸುವ ಇರಾದೆ ಇದರ ಹಿಂದಿದೆ. ಕುಟುಂಬ ಅಥವಾ ವ್ಯಕ್ತಿಯನ್ನು ಜಾತಿ, ಧರ್ಮ, ಆಚಾರ-ವಿಚಾರ ಅಥವಾ ವೈಯಕ್ತಿಕ ದ್ವೇಷದ ಕಾರಣದಿಂದ ಸಮಾಜದಿಂದ ದೂರ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ. ಈ ಕಾಯ್ದೆ ಅಂತಹ ಅನ್ಯಾಯಗಳಿಗೆ ತಡೆ ಹಾಕಿ ಬಲಹೀನರಿಗೆ ಕಾನೂನುಬದ್ಧ ರಕ್ಷಣೆ ಒದಗಿಸಲಿದೆ.
⇒ರುಕ್ಮಿಣಿ ನಾಗಣ್ಣವರ, ಬೆಂಗಳೂರು
ಗುರೂಜಿಯೊಬ್ಬ ಆಯುರ್ವೇದ ವೈದ್ಯ ಪಂಡಿತನ ಸೋಗಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಲೈಂಗಿಕ ಚಿಕಿತ್ಸೆ ನೀಡುವುದಾಗಿ ₹48 ಲಕ್ಷ ವಂಚಿಸಿರುವುದು ಆಘಾತಕಾರಿ. ಲೈಂಗಿಕ ಸಮಸ್ಯೆಗಳು ಹಾಗೂ ಇತರ ವಾಸಿಯಾಗದ ದೀರ್ಘಕಾಲದ ಕಾಯಿಲೆಗಳಿಗೆ ಆಯುರ್ವೇದ ಹಾಗೂ ಸಿದ್ಧೌಷಧಗಳು ತುಂಬಾ ಪರಿಣಾಮಕಾರಿ ಎಂದು ನಂಬಿಸುವ ನಕಲಿ ವೈದ್ಯರ ಬಗ್ಗೆ ಜನರು ಜಾಗೃತರಾಗಿರಬೇಕು.
⇒ಎಲ್. ಚಿನ್ನಪ್ಪ, ಬೆಂಗಳೂರು
ಮುಗಿಯಿತೋ ಮುಗಿಯಿತು
ರಾಜ್ಯೋತ್ಸವ ಮಾಸ
ಬಿಡುವೋ ಬಿಡುವು
‘ನವೆಂಬರ್ ಕನ್ನಡಿಗ’ರಿಗೆ
ಇನ್ನೊಂದು ವರುಷ!
ಸಿಪಿಕೆ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.