ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 15 ಫೆಬ್ರುವರಿ 2026, 23:30 IST
Last Updated 15 ಫೆಬ್ರುವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಪದಚ್ಯುತಿ ಆಟ: ಮತದಾರರಿಗೆ ಪೀಕಲಾಟ

ರಾಷ್ಟ್ರಮಟ್ಟದ ರಾಜಕೀಯದಲ್ಲಿ ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರು ಒಬ್ಬರನ್ನೊಬ್ಬರು ಪದಚ್ಯುತಿಗೊಳಿಸುವ ಜಿದ್ದಿಗೆ ಬಿದ್ದಿದ್ದಾರೆ. ಲೋಕಸಭೆಯ ಸ್ಪೀಕರ್‌ ಅವರನ್ನು ವಿಪಕ್ಷಗಳು ಪದಚ್ಯುತಿಗೊಳಿಸುವ ಹುಮ್ಮಸ್ಸಿನಲ್ಲಿವೆ. ಆಡಳಿತ ಪಕ್ಷದ ಸಂಸದರೊಬ್ಬರು ವಿಪಕ್ಷದ ನಾಯಕನನ್ನೇ ಪದಚ್ಯುತಿಗೊಳಿಸಲು ಮುಂದಾಗಿದ್ದಾರೆ. ಈಗ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸುವ ಯೋಚನೆಯಲ್ಲಿ ವಿಪಕ್ಷಗಳು ಮುಳುಗಿವೆ. ಇನ್ನು ಉಳಿದಿರುವುದು ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ. ಈ ಇಬ್ಬರ ಪದಚ್ಯುತಿಗೆ ಯಾವಾಗ ಮುಹೂರ್ತ ಬರುತ್ತದೆಯೋ ಕಾದುನೋಡಬೇಕಿದೆ. ದೇಶದ ಅಭಿವೃದ್ಧಿ ಮರೀಚಿಕೆಯಾಗಿದೆ. ಜನಪ್ರತಿನಿಧಿಗಳ ಈ ಹುಚ್ಚಾಟದಿಂದಾಗಿ ಮತದಾರರು ಪೀಕಲಾಟಕ್ಕೆ ಸಿಲುಕುವಂತಾಗಿದೆ.

ADVERTISEMENT

–ಪ್ರಸನ್ನ ಗಣಪತಿ ಎ.ಎಚ್., ಬೆಂಗಳೂರು  

ನಕಲಿ ಪಿಎಚ್‌.ಡಿ: ತನಿಖೆಗೆ ವಿಳಂಬ ಏಕೆ?

ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಯುಜಿಸಿ ಅರ್ಹತೆಯನ್ನು  ಕಡ್ಡಾಯಗೊಳಿಸಲಾಗಿದೆ. ಇದರಿಂದ ಕಾಲೇಜಿನಲ್ಲಿ ಉಳಿಯುವ ಹಟಕ್ಕೆ ಬಿದ್ದಿರುವ ಕೆಲವರು ಅಡ್ಡದಾರಿ ಹಿಡಿದು ನಕಲಿ ಪಿಎಚ್‌.ಡಿ ಪ್ರಮಾಣಪತ್ರ ತಂದು ಕೆಲಸ ಗಿಟ್ಟಿಸಿಕೊಂಡಿರುವುದು ಉಂಟು. ಇದರ ಪತ್ತೆಗೆ ಉನ್ನತ ಶಿಕ್ಷಣ ಇಲಾಖೆಯು ಮುಂದಾಗದಿರುವುದು ಅಚ್ಚರಿ ತಂದಿದೆ. ಪ್ರತಿವರ್ಷ ಕೌನ್ಸೆಲಿಂಗ್ ಮೂಲಕ ಅತಿಥಿ
ಉಪನ್ಯಾಸಕರನ್ನು ಆಯ್ಕೆ ಮಾಡಲಾಗುತ್ತದೆ. ಹತ್ತು ತಿಂಗಳಷ್ಟೆ ಕನಿಷ್ಠ ವೇತನ ನೀಡಿ
ಎಲ್ಲಾ ಸರ್ಕಾರಗಳು ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಉಳಿತಾಯ ಮಾಡಿ ಕೊಂಡಿವೆ. ಅತಿಥಿ ಉಪನ್ಯಾಸಕರ ಸಮಸ್ಯೆಗೆ ಕನಿಷ್ಠ ರೂಪದ ಪರಿಹಾರ ಕಂಡು ಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ಹತ್ತಿಪ್ಪತ್ತು ವರ್ಷ ಸೇವೆ ಸಲ್ಲಿಸಿದವರನ್ನು
ಅರ್ಹತೆ ಇಲ್ಲವೆಂದು ಮನೆಗೆ ಕಳುಹಿಸಲಾಗಿದೆ. ಏನೋ ಮಾಡುತ್ತೇವೆ; ತಾಳ್ಮೆಯಿಂದಿರಿ ಎಂದು ಸರ್ಕಾರ ಹೇಳುತ್ತಿದೆ. ತಾಳ್ಮೆ ಎಂಬುದು ಮನಸ್ಸಿನ ವ್ಯಾಪ್ತಿಗೆ ಬರುವುದಷ್ಟೆ ಅಲ್ಲ; ಹೊಟ್ಟೆಯ ವ್ಯಾಪ್ತಿಗೂ ಬರುತ್ತದೆ. ಹೊಟ್ಟೆ ಕೇಳಬೇಕಲ್ಲವೆ?

–ವೃಂದಾ ಹೆಗಡೆ, ಸಾಗರ

‘ಸಮಾನ ಅಭಿವೃದ್ಧಿ’ಯಿಂದ ನೈಜ ಪ್ರಗತಿ

ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆ ಆಧಾರಿತ ನೀತಿಗಳು ಶಿಕ್ಷಣ, ಸರ್ಕಾರಿ ಉದ್ಯೋಗ ಮತ್ತು ಅಭಿವೃದ್ಧಿಯ ಮೇಲೂ ಪ್ರಭಾವ ಬೀರುತ್ತವೆ. ಖಾಸಗಿ ವಲಯದ ಬೆಳವಣಿಗೆಯಿಂದ ಗುಣಮಟ್ಟದ ಶಿಕ್ಷಣ ಮತ್ತು ಹೊಸದಾಗಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಆದರೆ, ಶಿಕ್ಷಣದ ವಾಣಿಜ್ಯೀಕರಣದಿಂದ ಜನಸಾಮಾನ್ಯರಿಗೆ
ಸಮಾನ ಅವಕಾಶ ದಕ್ಕುತ್ತಿಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ಸ್ಪರ್ಧೆಯು ಹೆಚ್ಚಾಗಿದ್ದರೆ, ಖಾಸಗಿ ಕ್ಷೇತ್ರದಲ್ಲಿ ಕೌಶಲ ಆಧಾರಿತ ಅವಕಾಶಗಳು ವಿಸ್ತರಿಸುತ್ತಿವೆ. ಅಭಿವೃದ್ಧಿ ವೇಗವಾಗಿದ್ದರೂ ಸಾಮಾಜಿಕ ಅಸಮಾನತೆಯ ಅಂತರ ಹೆಚ್ಚಾಗದಂತೆ ಸರ್ಕಾರಗಳು ಸಮತೋಲನದ ನೀತಿಗಳನ್ನು ಅನುಸರಿಸಬೇಕು. ಸಮಾನ ಅಭಿವೃದ್ಧಿಯೇ ಸಮಾಜದ ನಿಜವಾದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

⇒ಜಹೀರ್ ಪಿ., ಬಳ್ಳಾರಿ

‘ದುರ್ಗೋತ್ಸವ’ವನ್ನು ಮರೆತ ರಾಜ್ಯ ಸರ್ಕಾರ

ಚಿತ್ರದುರ್ಗವು ಐತಿಹಾಸಿಕ ತಾಣ. ಯುವಜನರಿಗೆ ಇಲ್ಲಿನ ಚರಿತ್ರೆಯನ್ನು ಮನನ ಮಾಡಿಸಲು 1991–92ರಲ್ಲಿ ಮೊದಲ ಬಾರಿಗೆ ದುರ್ಗೋತ್ಸವ ಆಚರಿಸಲಾಯಿತು. ಬಳಿಕ ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಹಲವು ಕಾರಣಗಳಿಂದ ಉತ್ಸವ ಆಚರಣೆ
ನನೆಗುದಿಗೆ ಬಿದ್ದಿತು. ಒತ್ತಡ ಹೆಚ್ಚಿದ್ದರಿಂದ 2015ರಲ್ಲಿ ಎರಡನೇ ಬಾರಿಗೆ ದುರ್ಗೋತ್ಸವ ಆಚರಿಸಲಾಯಿತು. ಆ ನಂತರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉತ್ಸವಕ್ಕೆ ಮುಂದಾಗಿಲ್ಲ. ಇದು ಜಿಲ್ಲೆಯ ಜನರಿಗೆ ಬೇಸರ ತರಿಸಿದೆ.

–ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ 

ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ  

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ ಪಕ್ಷವು ಬಹುಮತ ಗಳಿಸಿದೆ. 2024ರ ಜುಲೈನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಬಿಸಿಯಿಂದಾಗಿ ಶೇಖ್
ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡಿತ್ತು. ಬಳಿಕ ಮೊಹಮ್ಮದ್‌ ಯೂನುಸ್‌ ನಾಯಕತ್ವದ ಮಧ್ಯಂತರ ಸರ್ಕಾರ ಬಂದಾಗ ಬಾಂಗ್ಲಾದ
ಚಿತ್ರಣವೇ ಬಯಲಾಯಿತು. ಮೂಲಭೂತವಾದಿಗಳ ಅಟ್ಟಹಾಸ ತಾರಕಕ್ಕೇರಿತು. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಯಿತು. ಈಗ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ತಾರಿಕ್‌ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಗೊಳ್ಳುವ ಸೂಚನೆಗಳು ಗರಿಗೆದರಿವೆ. ಬಾಂಗ್ಲಾದಲ್ಲಿ ಶಾಂತಿ ಮತ್ತೆ ನೆಲಸಲಿ; ಹಿಂದೂಗಳ ಮೇಲಿನ ದಬ್ಬಾಳಿಕೆಯೂ ನಿಲ್ಲಲಿ.  

–ಲೋಹಿತ ರಾಮಣ್ಣಾ ಹಸೂರೆ, ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.