ವಾಚಕರ ವಾಣಿ
ಸರಳ ಮದುವೆ: ಅನುಕರಣೀಯ ನಡೆ
‘ಮದುವೆ ಖರ್ಚಿನಲ್ಲಿ ಶಾಲೆಗಳಿಗೆ ನೀರಿನ ಯಂತ್ರ’ (ಪ್ರ.ವಾ., ನ. 13). ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಬಿದಿರುಮೆಳೆ ಕೊಪ್ಪಲಿನ ಎಂಜಿನಿಯರ್ ಶಿವಕುಮಾರ್– ಸಂಗೀತಾ ಸರಳವಾಗಿ ಮದುವೆಯಾಗಿ, ಉಳಿದ ಹಣವನ್ನು ಬಳಸಿ ಹೋಬಳಿಯ 26 ಸರ್ಕಾರಿ ಶಾಲೆಗಳಿಗೆ ಒಟ್ಟು ₹ 5 ಲಕ್ಷ ವೆಚ್ಚದಡಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ಇವತ್ತಿನ ದಿನಗಳಲ್ಲಿ ಉಳ್ಳವರು ಬಿಡಿ, ಆರ್ಥಿಕವಾಗಿ ಸಬಲರಲ್ಲದವರೂ ಸಾಲಸೋಲ ಮಾಡಿ ಮದುವೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸುವುದನ್ನು ನಾವು ನೋಡುತ್ತೇವೆ. ಆದರೆ ಶಿವಕುಮಾರ್– ಸಂಗೀತಾ ಜೋಡಿ ಇರಿಸಿರುವ ಈ ನಡೆ ಇತರರಿಗೂ ಅನುಕರಣೀಯ.
– ನಿಖಿತಾ ಶಶಾಂಕ್ ಭಟ್, ಬೆಂಗಳೂರು
ಕನ್ನಡದಲ್ಲಿ ಪ್ರಶ್ನೆಪತ್ರಿಕೆ: ಪ್ರಾಧಿಕಾರಕ್ಕೆ ಆಗದೇ?
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್) ಪ್ರಶ್ನೆಪತ್ರಿಕೆಯನ್ನು ಕನ್ನಡ
ದಲ್ಲಿಯೂ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೂಚಿಸಿರುವುದು (ಪ್ರ.ವಾ., ನ.14) ಸರಿಯಾಗಿದೆ. ಕೆ–ಸೆಟ್ ಪರೀಕ್ಷೆಯ ಮನೋವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಇಂಗ್ಲಿಷ್‌ನಲ್ಲಿ ಮಾತ್ರವೇ ನೀಡುವ ನಿರ್ಧಾರ ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆಗಳ ಕನ್ನಡ ಅನುವಾದ ಸರಿಯಾಗಿ ಆಗದಿರುವ ಕಾರಣ ಅಭ್ಯರ್ಥಿಗಳು ಗೊಂದಲಕ್ಕೀಡಾಗಿ ಅಂಕಗಳನ್ನು ಕಳೆದುಕೊಳ್ಳುತ್ತಿರುವ ಅಪಾಯ ಹೆಚ್ಚಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕೆ–ಸೆಟ್ ಪರೀಕ್ಷೆ ಇರುವುದರಿಂದ ಮತ್ತು ಈಗಾಗಲೇ ಪ್ರಶ್ನೆಪತ್ರಿಕೆ ಸಿದ್ಧವಾಗಿರುವುದರಿಂದ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯಲ್ಲಿ ಸಹ ಈ ಪ್ರಶ್ನೆಪತ್ರಿಕೆಯನ್ನು ಪೂರೈಸಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.
ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿಷಯ ಮತ್ತು ಪರಿಭಾಷೆಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಸಾಧ್ಯವಿಲ್ಲ ಎಂಬ ಮಾತು ಹಾಸ್ಯಾಸ್ಪದ. ಅನೇಕ ಕನ್ನಡ ವಿದ್ವಾಂಸರು ಕನ್ನಡ ಭಾಷೆಗೆ ಸರಿಸಮಾನವಾಗಿ ಇಂಗ್ಲಿಷ್ ಭಾಷೆಯಲ್ಲೂ ಪ್ರಾವೀಣ್ಯ ಪಡೆದಿದ್ದಾರೆ. ಅಂಥವರ ನೆರವನ್ನು ಪಡೆದು ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಾಧ್ಯವಿಲ್ಲವೇ?
– ಪ್ರೊ. ಬಸಪ್ಪ ಯ.ಬಂಗಾರಿ, ಬೆಂಗಳೂರು
ಬಾಕು ಸಮ್ಮೇಳನ: ದೃಢ ನಿರ್ಧಾರ ಅಗತ್ಯ
ಜಾಗತಿಕ ತಾಪಮಾನ ಹೆಚ್ಚಳದ ಬಿಸಿ ತಟ್ಟುತ್ತಿರುವ ಸಂದರ್ಭದಲ್ಲಿ ಹವಾಮಾನ ಬದಲಾವಣೆ ತಡೆಗಾಗಿ ಜಗತ್ತಿನ ಪ್ರಮುಖ ದೇಶಗಳು ನವೆಂಬರ್ 11ರಿಂದ ಹತ್ತು ದಿನಗಳ ಕಾಲ ಬಾಕು ನಗರದಲ್ಲಿ ಸಭೆ ನಡೆಸುತ್ತಿವೆ. ವಾತಾವರಣಕ್ಕೆ ಬಿಡುಗಡೆಯಾಗುವ ಮಲಿನಕಾರಕಗಳಿಂದ ಜಗತ್ತು ಅತಿಯಾದ ತಾಪಕ್ಕೆ ತುತ್ತಾಗುತ್ತಿದೆ.
ಈ ವರ್ಷ ಬಿಸಿಗಾಳಿ, ಚಂಡಮಾರುತ, ಅತಿಮಳೆ, ಭೂಕುಸಿತದಂತಹ ಹಲವು ವೈಪರೀತ್ಯಗಳಿಗೆ ಜಗತ್ತಿನ ಹಲವು ರಾಷ್ಟ್ರಗಳು ತುತ್ತಾಗಿವೆ. ಇದನ್ನು ಗಮನದಲ್ಲಿ ಇರಿಸಿಕೊಂಡು ದೃಢಹೆಜ್ಜೆ ಇಡಬೇಕಾಗಿದೆ. ಅಧಿಕೃತವಾಗಿ ಇಂತಹ ಸಭೆಗಳೇನೋ ನಡೆದುಹೋಗುತ್ತವೆ. ತೆಗೆದುಕೊಂಡ ನಿರ್ಧಾರಗಳು, ಘೋಷವಾಕ್ಯಗಳು ಕೇಳಲು ಆಕರ್ಷಣೀಯ
ವಾಗಿ ಇರುತ್ತವೆ. ಆದರೆ ನಂತರ ಅವುಗಳ ಅನುಷ್ಠಾನ, ನಿಯಮಗಳ ಪಾಲನೆ ಎಲ್ಲವೂ ನಿರ್ಲಕ್ಷ್ಯಕ್ಕೆ ಒಳಪಡುತ್ತವೆ. ಬಾಕು ಸಮ್ಮೇಳನ ಕೂಡ ಅದೇ ರೀತಿ ಆಗದಿರಲಿ.
– ಅಮರ್ ಹೀರಾ, ರಾಯಚೂರು
ಹರಿಯುವ ನೀರಿಗೆ ಸೆಸ್?
ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಟ್ಟಿ, ಹರಿಯುವ ನದಿಗಳ ನೀರು ಬಳಸುವ ನಗರಗಳಿಗೆ ಹಸಿರು ಸೆಸ್ ವಿಧಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಈ ಕುರಿತು ಪ್ರಸ್ತಾವ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದು ಪಶ್ಚಿಮಘಟ್ಟವನ್ನು ಸಂರಕ್ಷಿಸಲು ಹಸಿರು ಸೆಸ್ ವಿಧಿಸುವ ಅಗತ್ಯ ಇದೆ ಎಂದಿದ್ದಾರೆ.
ಹರಿವ ನೀರಿಗೆ ದೊಣೆ ನಾಯಕನ ಅಪ್ಪಣೆಯೇ ಎಂಬ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಉಚಿತವಾಗಿ ಸಿಕ್ಕರೆ ಬೇಕಾಬಿಟ್ಟಿ ಬಳಸುತ್ತಾ ಅದನ್ನು ಪೋಲು ಮಾಡಿ ಹಾಳುಗೆಡವುವರ ಸಂಖ್ಯೆಯೇನೂ ಕಡಿಮೆ ಇಲ್ಲ. ಹಾಗೆಂದು ಸೆಸ್ ವಿಧಿಸುತ್ತಾ ಸಾಗಿದರೆ ಕೊನೆ ಮೊದಲಿಲ್ಲ. ಜೊತೆಗೆ ವಿಧಿಸಿದ ಸೆಸ್ ಹಣ ಅದೇ ಉದ್ದೇಶಕ್ಕೆ ಬಳಕೆ ಆಗುತ್ತದೆ ಎಂಬುದೂ ಖಾತರಿ ಇಲ್ಲ. ಇದಕ್ಕೆ ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್ ಮುಂತಾದವನ್ನು ಉದಾಹರಿಸಬಹುದು. ನಾನಾ ಹೆಸರುಗಳಲ್ಲಿ ಸಂಗ್ರಹಿಸುವ ಸೆಸ್ ಹಣವನ್ನು, ಸಂಗ್ರಹಿಸಿದ ಉದ್ದೇಶಕ್ಕೆ ಮಾತ್ರವೇ ವ್ಯಯಿಸಿದರೆ ಒಳಿತು. ಇಲ್ಲವಾದರೆ ಸೆಸ್ ಅರ್ಥಹೀನ. ಹಾಗಾಗಿ ಸೆಸ್ ಚಿಂತನೆ ಬಿಟ್ಟು ಪಶ್ಚಿಮಘಟ್ಟಗಳ ಉಳಿವಿಗೆ ವಿಶೇಷ ಅನುದಾನ ನೀಡುವತ್ತ ಗಮನಹರಿಸಲಿ.
– ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಪಾದಚಾರಿ ಮಾರ್ಗ ಒತ್ತುವರಿ: ಪರಿಹಾರ ಕಷ್ಟಸಾಧ್ಯ
ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ (ಪ್ರ.ವಾ., ನ.13). ಈ ಮಾತು ಹೊಸದೇನಲ್ಲ ಹಾಗೂ ಈ ಸಮಸ್ಯೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಕರ್ನಾಟಕದ ಬಹುತೇಕ ಎಲ್ಲ ನಗರ ಹಾಗೂ ಪಟ್ಟಣಗಳ ಸಮಸ್ಯೆ. ನಗರಗಳ ಕೆಲವು ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಷ್ಟೇ ಅಲ್ಲದೆ ರಸ್ತೆಗಳನ್ನು ಸಹ ಆಕ್ರಮಿಸಿ ನಿರ್ಭಯವಾಗಿ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದಾರೆ. ಯಾವುದೇ ಪಕ್ಷವಾಗಲಿ, ಯಾವ ಅಧಿಕಾರಿಗಳೇ ಆಗಲಿ ಇಂಥವರನ್ನು ಏನೂ ಮಾಡಲಾಗದ ಪರಿಸ್ಥಿತಿ ಇದೆ. ಅವರನ್ನು ಎದುರುಹಾಕಿಕೊಂಡರೆ ಎಲ್ಲಿ ತಮ್ಮ ವೋಟಿಗೆ ಸಂಚಕಾರ ಬರುತ್ತದೆಯೋ ಎಂಬ ಆತಂಕ ನಮ್ಮ ಜನಪ್ರತಿನಿಧಿಗಳಿಗೆ ಇರುವುದೇ ಇದಕ್ಕೆ ಮುಖ್ಯ ಕಾರಣ.
ಜನಪ್ರತಿನಿಧಿಗಳ ಈ ದೌರ್ಬಲ್ಯವನ್ನು ಇಂತಹ ವ್ಯಾಪಾರಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರಬಹುದು. ಈ ಸಮಸ್ಯೆಯು ಪಾದಾಚಾರಿಗಳಿಗೆ ಮಾತ್ರವಲ್ಲದೆ ವಾಹನ ಸವಾರರನ್ನೂ ಕಾಡುತ್ತದೆ. ಮುಖ್ಯ ರಸ್ತೆಗಳಲ್ಲಿ ಇಂತಹ ವ್ಯಾಪಾರಿಗಳನ್ನು ಪೊಲೀಸರು ಒಂದುಕಡೆಯಿಂದ ಎತ್ತಂಗಡಿ ಮಾಡುತ್ತಾ ಹೋದಂತೆ, ಅವರು ಮತ್ತೆ ಅಲ್ಲೇ ವ್ಯಾಪಾರ ಆರಂಭಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಮೂಡಿದರೆ, ಸಾರ್ವಜನಿಕ ಹೋರಾಟ ತೀವ್ರಗೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ.
– ಕಡೂರು ಫಣಿಶಂಕರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.