ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 0:00 IST
Last Updated 15 ಆಗಸ್ಟ್ 2024, 0:00 IST
   

ಆನೆ ಓಡಿಸಲು ಜೇನು ಸಾಕು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಜೊತೆ ನಿಂತು ಅರಿವಳಿಕೆಯ ಗನ್‌ ಹಿಡಿದು ಕಾಲ್ಪನಿಕ ಕಾಡಾನೆಗೆ ಗುರಿ ಇಟ್ಟ ಚಿತ್ರ (ಪ್ರ.ವಾ., ಆ. 13) ಚಿತ್ತಾಕರ್ಷಕವಾಗಿತ್ತು. ಆದರೆ, ಕಾಡಾನೆಗಳು ರೈತರ ಹೊಲಗಳಿಗೆ ನುಗ್ಗದಂತೆ ಮಾಡಲು ಇನ್ನೂ ಸರಳ, ಜೈವಿಕ ಉಪಾಯವೊಂದಿದೆ: ಆನೆಗಳಿಗೆ ಜೇನು ಎಂದರೆ ತುಂಬ ಭಯ. ರೈತರು ತಮ್ಮ ಗಡಿಗುಂಟ 50 ಮೀಟರಿಗೆ ಒಂದೊಂದರಂತೆ ಪೆಟ್ಟಿಗೆಗಳಲ್ಲಿ ಜೇನು ಸಾಕಿದರೆ ಸಾಕು. ಎರಡು ಪೆಟ್ಟಿಗೆಗಳ ನಡುವೆ ಸಡಿಲ ಸಪೂರು ಹಗ್ಗವನ್ನು ಕಟ್ಟಿಡಬೇಕು. ಪೆಟ್ಟಿಗೆ ಬಿದ್ದು, ಜೇನು ಎದ್ದಾವೆಂದು ಆನೆಗಳು ಹಗ್ಗವನ್ನು ದಾಟಲೂ ಹೆದರುತ್ತವೆ. ಇಂಥ ಜೇನು ಸಾಕಣೆಯಿಂದ ರೈತರಿಗೆ ಆದಾಯವೂ ಸಿಗುತ್ತದೆ, ಪರಾಗಸ್ಪರ್ಶದಿಂದ ಬೆಳೆಗಳೂ ಚೆನ್ನಾಗಿ ಬರುತ್ತವೆ. ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಈ ಉಪಾಯ ಜಾರಿಯಲ್ಲಿದೆ. ಹಾಗೆಂದು, ಅದನ್ನು ನೋಡಿ ಬರಲೆಂದು ಉನ್ನತ ಸಮಿತಿಯೊಂದು ಇಲ್ಲಿಂದ ಧಾವಿಸಬೇಕಾಗಿಲ್ಲ. ಅಲ್ಲಿನ ಕಾಡಂಚಿನ ಆದಿವಾಸಿ ರೈತರ ಈ ಸರಳ ವ್ಯವಸ್ಥೆಯನ್ನು ಜಾಲತಾಣಗಳಲ್ಲೂ ನೋಡಬಹುದು.

⇒ನಾಗೇಶ ಹೆಗಡೆ, ಕೆಂಗೇರಿ

ADVERTISEMENT

ಅರ್ಥವತ್ತಾಗಿ ಆಚರಿಸಲು ಮಾರ್ಗಗಳಿವೆ

ಈ ಬಾರಿ ಉತ್ತಮ ಮಳೆಯಾಗಿದೆ. ಕೆರೆ–ಕಟ್ಟೆ, ಜಲಾಶಯಗಳು ತುಂಬಿ ತುಳುಕಿ ಇಳೆಗೆ ಜೀವಕಳೆ ಬಂದಿದೆ. ಇದರೊಂದಿಗೆ, ಹಲವೆಡೆ ಬೇರೆ ಬೇರೆ ಬಗೆಯ ಅನಾಹುತಗಳು ಕೂಡ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವು–ನೋವಿಗೆ ಈಡಾಗಿದ್ದಾರೆ. ಕೆಲವರು ಬದುಕು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಈ ದುರಂತಗಳಿಗೆ ಸಂಬಂಧಿಸಿದ ವರದಿಗಳನ್ನು ಓದುತ್ತಿದ್ದರೆ ಮನಸ್ಸಿಗೆ ತೀವ್ರ ಗಾಸಿಯಾಗುತ್ತದೆ. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಪರಿಹಾರ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳಬೇಕಿದೆ. ಈ ಬಾರಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಲಾಶಯಗಳು ತುಂಬಿರುವುದರಿಂದ ಎಲ್ಲರಿಗೂ ಖುಷಿ ಆಗಿದೆಯಾದರೂ ನೆರೆ–ಪ‍್ರವಾಹದಿಂದ ನೊಂದವರಿಗೆ ಆಸರೆಯಾಗುವುದು ಈಗ ಸರ್ಕಾರದ ಆದ್ಯತೆಯಾಗಬೇಕು. ದಸರಾ ನಮ್ಮ ಹೆಮ್ಮೆಯ ನಾಡಹಬ್ಬ. ಅದನ್ನು ಕಷ್ಟಕಾಲದಲ್ಲಿಯೂ ಅದ್ದೂರಿಯಾಗಿಯೇ ಆಚರಿಸಬೇಕಾದ್ದಿಲ್ಲ. ಸರಳವಾಗಿ, ಅರ್ಥವತ್ತಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಿ ಸಂಭ್ರಮಿಸಲು ಖಂಡಿತ ಸಾಧ್ಯವಿದೆ. ಸರ್ಕಾರ ಈ ದಿಸೆಯಲ್ಲಿ ಗಮನಹರಿಸಬೇಕು.

⇒ಎನ್.ವಿ.ಅಂಬಾಮಣಿ, ಬೆಂಗಳೂರು

ಕಾನೂನಿನ ಮೂಲದ್ರವ್ಯ ಮಾನವೀಯತೆ

ದೇವನಹಳ್ಳಿಯ ವಿಜಯಪುರದಲ್ಲಿ ಜನ ಸ್ಮಾಲ್ ಫೈನಾನ್ಸ್‌ ಬ್ಯಾಂಕಿನ ಸಿಬ್ಬಂದಿ ಸಾಲ ವಸೂಲಾತಿಗೆ ಬಂದು, ಕುರಿ, ಮೇಕೆಗಳು ಮನೆಯ ಒಳಗಿರುವಾಗಲೇ ಮನೆಗೆ ಬೀಗ ಜಡಿದು ಹೋಗಿರುವ ಸುದ್ದಿ ಆಘಾತಕಾರಿ. ಬ್ಯಾಂಕಿನ ಸಾಲ ವಸೂಲಾತಿ ವಿಭಾಗದ ವ್ಯವಸ್ಥಾಪಕ ಇದನ್ನು ಸಮರ್ಥಿಸಿಕೊಂಡಿರುವುದು ಅವರ ಮನಃಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. 

ಆ ಪ್ರಾಣಿಗಳಿಗೆ ಮನೆಯೊಡತಿ ಜಯಲಕ್ಷ್ಮಮ್ಮ ಆಹಾರವನ್ನು ಮೇಲ್ಚಾವಣಿಯಿಂದ ನೀಡಲು ಮುಂದಾಗದೇ ಇದ್ದಿದ್ದರೆ ಪರಿಣಾಮ ಏನಾಗುತ್ತಿತ್ತು? ಪ್ರಾಣಿದಯಾ ಕಾನೂನಿನ ರೀತ್ಯಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಬಡವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹುಟ್ಟಿಕೊಂಡ ಈ ಸಹಕಾರಿ ಬ್ಯಾಂಕುಗಳು ಅಮಾನವೀಯ ಶೋಷಣೆಯ ವರ್ತಕರಂತೆ ನಡೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಕಾನೂನಿನೊಳಗೂ ಮಾನವೀಯ ಮೌಲ್ಯಗಳು ಇರುತ್ತವೆ ಎಂಬುದನ್ನು ಅಧಿಕಾರಿಗಳು ಅರಿತು ಆಡಳಿತ ನಡೆಸಲಿ.

⇒ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು

ನಡೆಯಲಿ ಊರು ಕೇರಿಯ ‘ದರ್ಶನ’

ಮಾಯವಾಗುತ್ತಿರುವ ಊರಿನ ಹೆಸರುಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿರುವುದನ್ನು ತಿಳಿದು (ಪ್ರ.ವಾ., ಆ. 13) ಖುಷಿಯಾಯಿತು. ಬೆಂಗಳೂರು ಮಹಾನಗರ ಪಾಲಿಕೆ ಪರಿಧಿಯೊಳಗೆ ಸಾವಿರಾರು ಊರುಗಳು ಮುಚ್ಚಿಹೋಗಿವೆ. ಹಿರಿಯರ ನೆರವು ಪಡೆದು, ಬೆಂಗಳೂರು ಎಂಬ ಮಹಾಸಮುದ್ರದೊಳಗೆ ಕಳೆದುಹೋಗಿರುವ ಹೆಸರುಗಳನ್ನು ಮೊದಲು ಪಟ್ಟಿ ಮಾಡುವ ಅಗತ್ಯವಿದೆ. ಕೆಲವು ಊರಿನ ಹೆಸರುಗಳು ಉಳಿದುಕೊಂಡಿದ್ದರೂ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳದೆ, ಸಂಕ್ಷಿಪ್ತ ಮಾಡಲು ಹೋಗಿ ಅವುಗಳ ನಿಜ ಹೆಸರು ಈಗಿನ ಪೀಳಿಗೆಗೆ ತಿಳಿಯದಾಗಿದೆ. ಉದಾಹರಣೆಗೆ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಜಿ.ಎಂ.ಪಾಳ್ಯ, ಆರ್.ಟಿ. ನಗರ... ಹೀಗೆ ಸಂಕ್ಷಿಪ್ತಗೊಂಡಿರುವ ಹೆಸರುಗಳನ್ನು ಪೂರ್ಣ ರೂಪದಲ್ಲಿ ಬರೆಸಿ, ಬೋರ್ಡ್ ಹಾಕಬೇಕು. 

ಇನ್ನು ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಐತಿಹಾಸಿಕ, ಸ್ಮರಣೀಯ, ರಮಣೀಯ ಊರುಗಳಿವೆ. ಪ್ರತಿ ತಾಲ್ಲೂಕಿನ ಮತ್ತು ಜಿಲ್ಲೆಯ ಸಂಕ್ಷಿಪ್ತ ದರ್ಶನವನ್ನು ತಯಾರಿಸಿ, ‘ತಾಲ್ಲೂಕು ದರ್ಶನ’ ಹಾಗೂ ‘ಜಿಲ್ಲಾ ದರ್ಶನ’ದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವೂ ಇದೆ. ಪದವಿ ಕಲಿತವರಿಗೂ ತನ್ನೂರಿನ ನಾಮವಿಶೇಷ ಹಾಗೂ ಇತಿಹಾಸ ತಿಳಿಸದ ಶಿಕ್ಷಣವನ್ನು ಈ ಮೂಲಕ ಸುಧಾರಿಸಬಹುದು.

⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಆಡಂಬರಕ್ಕೆ ಅನಗತ್ಯ ಖರ್ಚು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿಯಲ್ಲಿ ಇತ್ತೀಚೆಗೆ ಲಕ್ಷಾಂತರ ರೂಪಾಯಿಯನ್ನು ‘ಭರಚುಕ್ಕಿ ಜಲಪಾತೋತ್ಸವ’ದ ಹೆಸರಿನಲ್ಲಿ ಖರ್ಚು ಮಾಡಲಾಗಿದೆ. ಒಂದೆರಡು ದಿನಗಳ ಆಡಂಬರಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿತ್ತೇ? ಅದೇ ಹಣವನ್ನು ಆ ಕೇಂದ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದರೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೊದಲು ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿ, ಅಲ್ಲಿ ಉದ್ಯಾನ ನಿರ್ಮಿಸಿ, ಮಕ್ಕಳ ಆಟೋಟಕ್ಕೆ ಅನುಕೂಲ ಮಾಡಿದರೆ, ಒಂದು ದಿನವೆಲ್ಲ ಅಲ್ಲಿದ್ದು ತಮ್ಮ ಮನಸ್ಸು ಹಾಗೂ ಕಣ್ಣಿಗೆ ತಂಪುಣಿಸಿಕೊಂಡು ಹೋಗುತ್ತಾರೆ. ಆಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಅದೊಂದು ಜನಪ್ರಿಯ ತಾಣವಾಗುತ್ತದೆ.

⇒ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.