ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಪೂರಕ ಪರೀಕ್ಷೆಯ ಅವಕಾಶವೇ ಮುಳುವಾಯಿತೆ?
2024– 25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ಪಷ್ಟವಾದ ಕುಸಿತ ಕಂಡುಬಂದಿದೆ. ಈ ಪತನಕ್ಕೆ ಕಾರಣವೇನು ಎಂಬ ಗಂಭೀರವಾದ ಪ್ರಶ್ನೆ ಶಿಕ್ಷಣ ಇಲಾಖೆಯ ಮುಂದೆ ಇದೆ. ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆಗಳ ಅವಕಾಶ ನೀಡಲಾಗಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಬದಲಿಗೆ ಉದಾಸೀನ ಮತ್ತು ನಿರ್ಲಕ್ಷ್ಯದ ಮನೋಭಾವ ಹೆಚ್ಚಾಗಿ ಕಂಡುಬಂದಂತೆ ಇದೆ. ಮೊದಲು ಇದ್ದ ನಿಯಮದಂತೆ, ಅತೃಪ್ತ ಫಲಿತಾಂಶ ಪಡೆದವರಿಗೆ ಅದೇ ವರ್ಷದೊಳಗೆ ಒಂದೇ ಪೂರಕ ಪರೀಕ್ಷೆಯ ಅವಕಾಶ ಇತ್ತು. ಆದರೆ ಈ ಹೊಸ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಹಂಬಲವನ್ನು ನೀಡುವ ಬದಲಿಗೆ, ಅವರಲ್ಲಿ ಶೈಕ್ಷಣಿಕ ಗಾಂಭೀರ್ಯವನ್ನು ಕಡಿಮೆ ಮಾಡಿದೆ ಎನ್ನುವ ಟೀಕೆ ಕೇಳಿಬರುತ್ತಿದೆ. ಇದನ್ನು ಗಮನದಲ್ಲಿಟ್ಟು ಇಲಾಖೆ ಈ ಬಗ್ಗೆ ಪುನರ್‌ಚಿಂತನೆ ನಡೆಸಬೇಕು. –ಕೆ.ಎನ್.ರಂಗನಾಥ್, ಉಜಿರೆ
**
ಕೃಷಿ ಭೂಮಿಯ ಆಪೋಶನ ಆಗದಿರಲಿ
ಬೆಂಗಳೂರು ನಗರದ ಸಮೀಪ ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳ ತಂಡವು ಕನಕಪುರ ರಸ್ತೆ ಮತ್ತು ನೆಲಮಂಗಲ– ಕುಣಿಗಲ್ ರಸ್ತೆಯಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ವರದಿಯಾಗಿದೆ. ಈ ನಿಲ್ದಾಣಕ್ಕಾಗಿ ಸಾವಿರಾರು ಎಕರೆ ಭೂಮಿಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳದೆ, ಕೃಷಿಗೆ ಸಾಧ್ಯವಾಗದ ಜಮೀನುಗಳನ್ನು ಬಳಸಲಿ. ಈಗಾಗಲೇ ರೈತರು ಹಲವೆಡೆ ತಮ್ಮ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಕೊಟ್ಟು ಹೈರಾಣಾಗಿದ್ದಾರೆ ಎಂಬುದು ಗಮನದಲ್ಲಿರಲಿ. ಈ ಮುನ್ನ ಬಳಸುತ್ತಿದ್ದ ಎಚ್ಎಎಲ್ ವಿಮಾನ ನಿಲ್ದಾಣವನ್ನು ದೇಶೀಯ ವಿಮಾನಗಳಿಗೆ ಮಾತ್ರ ಬಳಸಿಕೊಂಡು ದೇವನಹಳ್ಳಿಯ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನಗಳಿಗೆ ಮಾತ್ರ ಬಳಸುವುದು ಎಲ್ಲ ರೀತಿಯಿಂದಲೂ ಸೂಕ್ತ. ಹಣ, ಭೂಮಿ ಎಲ್ಲವೂ ಉಳಿಯುತ್ತದೆ. ಈ ಬಗ್ಗೆ ಸರ್ಕಾರ ಮತ್ತು ತಜ್ಞರು ಚಿಂತಿಸಲಿ.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು
**
ನಮ್ಮ ಗಂಗಾಳ ನಾವೇ ಬಾರಿಸಿಕೊಳ್ಳುವುದು!
ನಮ್ಮ ಭಾಗದಲ್ಲಿ ಮಗು ಜನಿಸಿದಾಗ, ಮಗು ಆಗಿದೆ ಎಂಬುದನ್ನು ಎಲ್ಲರಿಗೂ ತಿಳಿಸಲು ಹಿರಿಯರಿಂದ ಗಂಗಾಳ ಬಾರಿಸುವ ಅಭ್ಯಾಸವಿದೆ. ಒಂದು ವೇಳೆ ಯಾರೂ ಹಿರಿಯರು ಸಿಗದಿದ್ದಾಗ ಮಗುವಿನ ಅಜ್ಜಿಯೇ ಗಂಗಾಳ ಬಾರಿಸುತ್ತಾಳೆ. ಅದೇ ರೀತಿ ಆಗಿದೆ ಪ್ರಸ್ತುತ ಕನ್ನಡ ಸಾಹಿತ್ಯದ ಪ್ರಕಾಶನ ವ್ಯವಸ್ಥೆ ಕೂಡ. ‘ಪ್ರಚಾರಪ್ರಿಯ ಲೇಖಕ: ನೇಪಥ್ಯಕ್ಕೆ ವಾಚಕ’ ಎಂಬ ರಾಜಕುಮಾರ ಕುಲಕರ್ಣಿ ಅವರ ಲೇಖನದಲ್ಲಿ (ಸಂಗತ, ಏ. 7), ಹೊಸದಾಗಿ ಬಿಡುಗಡೆಯಾಗುವ ಪುಸ್ತಕಗಳು ಓದುಗರಿಗಿಂತ ಹೆಚ್ಚಾಗಿ ಲೇಖಕರನ್ನು ತಲುಪುತ್ತಿವೆ ಮತ್ತು ಲೇಖಕರಾದವರು ತಮ್ಮ ಪುಸ್ತಕವನ್ನು ತಾವೇ ಪ್ರಕಟಿಸುತ್ತಿದ್ದಾರೆ ಎಂದಿರುವುದು ನಿಜವೇ ಆಗಿದೆ. ಆದರೆ ಲೇಖಕರಿಗೆ ಅದು ಅನಿವಾರ್ಯ ಕೂಡ. ಏಕೆಂದರೆ ಪ್ರಕಾಶನ ಸಂಸ್ಥೆಗಳು ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಬೇಕೆಂದರೆ, ಆ ಲೇಖಕರು ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಿಗೆ ಆತ್ಮೀಯರಾಗಿರಬೇಕು. ಉದಯೋನ್ಮುಖ ಲೇಖಕರ ಸಾಹಿತ್ಯವನ್ನು ಅವರು ಪ್ರಕಟಿಸುವುದು ಇರಲಿ ಕರಡು ಪ್ರತಿಯನ್ನು ಓದುವುದು ಕೂಡ ಅನುಮಾನ ಎನ್ನಿಸುತ್ತದೆ! ಅದೊಂದು ವ್ಯವಸ್ಥಿತ ಪ್ರಕ್ರಿಯೆ.
ಪ್ರಕಾಶನ ಸಂಸ್ಥೆಗಳು ಕೆಲವೇ ಕೆಲವು ಲೇಖಕರ ಪುಸ್ತಕಗಳನ್ನು ಹೊರತರುವುದು, ಅವುಗಳನ್ನು ಪ್ರಚಾರ ಮಾಡಿಕೊಳ್ಳುವುದು, ನಂತರ ತಮಗೆ ಬೇಕಾದ ಲೇಖಕರ ಬಗ್ಗೆ ಬರೆಸುವುದು ಇವೆಲ್ಲಾ ಮೇಲೆ ಹೇಳಿದಂತೆ, ನಮ್ಮ ಗಂಗಾಳವನ್ನು ನಾವೇ ಬಾರಿಸಿಕೊಳ್ಳುವ ಚಾಳಿ ಎಂದೆನಿಸುತ್ತದೆ. ದುರಂತವೆಂದರೆ, ಒಬ್ಬ ಲೇಖಕನು ಪ್ರಕಾಶಕ ಕೂಡ ಆಗಬೇಕು ಎಂಬುದು ಆಧುನಿಕ ಕನ್ನಡ ಸಾಹಿತ್ಯದ ಲೇಖಕರಿಗೆ ಇರಬೇಕಾದ ಇನ್ನೊಂದು ಅರ್ಹತೆ!
–ರಂಗಸ್ವಾಮಿ ಮಾರ್ಲಬಂಡಿ, ದೊಡ್ಡ ಹರಿವಾಣ, ಆದವಾನಿ
**
ಏನಾಗಿರಬಹುದು ರಾಜಮನೆತನದ ನಡೆ?!
ಚಾಮರಾಜನಗರ ಜಿಲ್ಲೆಯಲ್ಲಿ ರಾಜವಂಶಸ್ಥರಿಗೆ ಸೇರಿರುವ 5,119 ಎಕರೆಯಷ್ಟು ಜಾಗಕ್ಕೆ ಕೂಡಲೇ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಧಿಕಾರಿ ಹಾಗೂ ಸರ್ಕಾರದ ವಿವಿಧ ವಿಭಾಗಗಳಿಗೆ ಪತ್ರ ಬರೆದಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಒಂದು ವೇಳೆ ಅವರಿಗೆ ಖಾತೆಯಾದರೂ ಇಷ್ಟೊಂದು ಜಮೀನನ್ನು ತೆಗೆದುಕೊಂಡು ಏನು ಮಾಡಬಹುದು ಎಂಬುದು ಜನಸಾಮಾನ್ಯರಾದ ನಮಗಿರುವ ಕುತೂಹಲ. ಬಡವರಿಗೆ ಹಂಚುವ ಯೋಜನೆ ಏನಾದರೂ ಇದೆಯೇ? ಈ ವಿಚಾರದಲ್ಲಿ, ಬಹಳ ಒಳ್ಳೆಯ ಪರಂಪರೆ ಇರುವ ಮೈಸೂರು ರಾಜಮನೆತನದ ಮುಂದಿನ ನಡೆ ಏನಾಗಿರಬಹುದು?
–ಗುರು ಜಗಳೂರು, ಹರಿಹರ
**
ಅರಿಯಬೇಕಿದೆ ಕೊಡುಗೆಗಳ ಹಿಂದಿನ ಮರ್ಮ
ರಾಜ್ಯ ಸರ್ಕಾರ ಹಾಲು, ವಿದ್ಯುತ್, ಪೆಟ್ರೋಲ್, ಡೀಸೆಲ್ ಬೆಲೆಯೇರಿಸಿದರೆ, ಪೈಪೋಟಿಗೆ ಬಿದ್ದಂತೆ ಕೇಂದ್ರ ಸರ್ಕಾರವು ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. 2024ರ ಮಾರ್ಚ್‌ನಲ್ಲಿ ಅಡುಗೆ ಅನಿಲದ ದರವನ್ನು ನೂರು ರೂಪಾಯಿ ಇಳಿಸಿ ಉಪಕಾರ ಮಾಡುವ ಇರಾದೆ ತೋರಿದ್ದು ತನಗಾಗಿ ಅಲ್ಲ, ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನಂತರದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಎಂಬುದು ಈಗ ಸಮಾಜದ ಅರಿವಿಗೆ ಬಂದಿರಬಹುದು.
ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಏನಾದರೂ ಒಳ್ಳೆಯ ಕೆಲಸ ಮಾಡಿತು ಅಂದರೆ, ಅದರ ಹಿಂದೆ ಜನರನ್ನು ಮರುಳು ಮಾಡುವ ಉದ್ದೇಶ ಇದ್ದೇ ಇರುತ್ತದೆ ಅನ್ನುವುದು ನಗ್ನಸತ್ಯ. ಚುನಾವಣಾ ಪ್ರಕ್ರಿಯೆ ಕೊನೆಗೊಂಡ ತಕ್ಷಣ ಕೊಡುಗೆಗಳನ್ನು ಹಿಂತೆಗೆದುಕೊಳ್ಳುವ ಕೆಲಸ ಆರಂಭವಾಗುತ್ತದೆ. ತಮ್ಮ ಜ್ಞಾಪಕಶಕ್ತಿಗೆ ಗರ ಬಡಿದಿದೆಯೇನೋ ಎನ್ನುವಂತೆ ಜನಸಾಮಾನ್ಯರು ಮೋಸ ಹೋಗುತ್ತಲೇ ಇರುತ್ತಾರೆ. ಅಡುಗೆ ಅನಿಲಕ್ಕೆ ಹಿಂದೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಿ, ಅದನ್ನು ಬ್ಯಾಂಕ್ ಖಾತೆಗೆ ಪ್ರತ್ಯೇಕವಾಗಿ ಜಮಾ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ದರ ಹೆಚ್ಚಿಸಿದ್ದನ್ನು ಮತ್ತು ಆ ಸಹಾಯಧನದ ಕತೆ ಏನಾಯಿತು ಎನ್ನುವುದನ್ನು ಜನಸಾಮಾನ್ಯರು ಸ್ಮರಿಸಿಕೊಳ್ಳಬೇಕಾಗಿದೆ.
–ಶಾಂತಕುಮಾರ್, ಸರ್ಜಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.