ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಭಾಷಾಂತರ: ಆಗದಿರಲಿ ಅವಾಂತರ

ಏಳು ಕೋಟಿ ಕನ್ನಡಿಗರಿರುವ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕರ್ನಾಟಕದಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಲು ಅರ್ಹರು ಇಲ್ಲವೆನ್ನುವಂತೆ, ಇತ್ತೀಚೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಲು ತಂತ್ರಾಂಶ ಆಧಾರಿತ ಪರಿಕರಗಳ ಮೊರೆಹೋಗುವ ಚಾಳಿ ಹೆಚ್ಚಾಗಿದೆ. ಈ ಬಗೆಯ ಅನುವಾದವಂತೂ ಕನ್ನಡ ಮತ್ತು ಕನ್ನಡಿಗರ ಬಗೆಗೆ ಕನಿಕರ ಉಂಟಾಗುವಂತೆ ಇರುತ್ತದೆ. ಹೊರರಾಜ್ಯದಲ್ಲಿ ಈ ರೀತಿ ಮಾಡಿದರೆ ಕ್ಷಮಿಸಬಹುದು. ಕನ್ನಡನಾಡಿನಲ್ಲಿಯೇ ಕನ್ನಡಕ್ಕೆ ಇಂತಹ ದುರ್ಗತಿ ಬಂದರೆ ಸಹಿಸಲಾಗದು.

ADVERTISEMENT

ಕೆಲವು ಮಾಲ್‌ಗಳಲ್ಲಿನ ನಾಮಫಲಕ ಮತ್ತು ಡಿಸ್‌ಪ್ಲೇ ಬೋರ್ಡ್‌ಗಳಲ್ಲಿ ಈ ರೀತಿ ಅನುವಾದಗೊಂಡಿರುವ
ಕನ್ನಡವೇ ವಿಜೃಂಭಿಸತೊಡಗಿದ್ದು, ಆ ಕನ್ನಡವನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ವಿಪರ್ಯಾಸವೆಂದರೆ, ಕೆಲವು ಕಚೇರಿಗಳಲ್ಲಿ ಹಾಕುವ ಬೋರ್ಡ್‌ಗಳಲ್ಲೂ ಈ ಅಧ್ವಾನ ಎದ್ದು ಕಾಣುತ್ತದೆ. ಈ ಬಗೆಯ ಅನುವಾದವನ್ನೇ ಸಂಪೂರ್ಣವಾಗಿ ಅವಲಂಬಿಸದೆ, ಅದನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಂಡು, ಅನುವಾದದಲ್ಲಿ ಹಿಡಿತ ಸಾಧಿಸುವ ರೀತಿಯಲ್ಲಿ ತರಬೇತಿ ನೀಡುವತ್ತ ಗಮನ ಕೇಂದ್ರೀಕರಿಸಬೇಕಾಗಿದೆ.

-ರಮಾನಂದ ಶರ್ಮಾ, ಬೆಂಗಳೂರು

**

ಬ್ಯಾಂಕ್‌ ಕನಿಷ್ಠ ಮೊತ್ತಕ್ಕೆ ವಿನಾಯಿತಿ ಸ್ವಾಗತಾರ್ಹ

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕಕ್ಕೆ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಜೂನ್ 1ರಿಂದ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಬಡವರು, ಮಧ್ಯಮ ವರ್ಗದವರು ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿನ ಅಲ್ಪ ಸ್ವಲ್ಪ ಹಣವನ್ನು ಹಿಂಪಡೆಯಲು ಪರಿತಪಿಸುವಂತೆ ಆಗಿದೆ. ಆದ್ದರಿಂದ ಗ್ರಾಹಕರ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವಿಕೆಗೆ ಎಲ್ಲಾ ಬ್ಯಾಂಕ್‌ಗಳು ವಿನಾಯಿತಿ ನೀಡಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು.

-ಭಾಸ್ಕರ್ ಶೆಟ್ಟಿ, ಹಾಸನ

**

ಚರ್ಚೆಗೆ ಬಹಳಷ್ಟು ವಿಷಯಗಳಿವೆ

ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರ ‘ಕನ್ನಡ– ತಮಿಳು: ಒಂದೇ ಬೇರು, ಭಿನ್ನ ಕವಲು’ ಎಂಬ ಲೇಖನ (ಪ್ರ.ವಾ., ಮೇ 31) ದ್ರಾವಿಡ ಭಾಷೆಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿತು. ಯಾವುದೇ ಭಾಷೆಯ ನಟ ನಟಿಯರು ಯಾವುದೇ ಭಾಷೆಗೂ ರಾಯಭಾರಿಗಳಾಗಿರುವುದಿಲ್ಲ. ಅವರು ಎಷ್ಟೇ ಖ್ಯಾತನಾಮರಾದರೂ ಭಾಷೆಯ ಬಗ್ಗೆ ತಿಳಿಯದೆ, ಅದನ್ನು ಆಳವಾಗಿ ಅಭ್ಯಾಸ ಮಾಡದೆ ಅದರ ಬಗ್ಗೆ ಹೇಳಿಕೆಯನ್ನು ಕೊಡುವುದು ತಪ್ಪು. ನೆಚ್ಚಿನ ನಟ ಕಮಲ್ ಹಾಸನ್‌ ಅವರು ಕರ್ನಾಟಕದಲ್ಲೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ, ಒಂದು ಭಾಷೆಯ ಬಗ್ಗೆ ಸಂಪೂರ್ಣ ತಿಳಿವಳಿಕೆ ಇಲ್ಲದೆ ಅವರು ಹೇಗೆ ಮಾತನಾಡುತ್ತಾರೆ?

ದೇಶದಾದ್ಯಂತ ಬೇಕಾದಷ್ಟು ವಿಚಾರಗಳು ಚರ್ಚೆಗೆ ಒಳಗಾಗಲು ಸಾಲುಗಟ್ಟಿ ನಿಂತಿವೆ. ಸಾಧ್ಯವಾದರೆ ಅವುಗಳ ಕುರಿತು ನಮ್ಮ ನಟರು ಗಮನ ಸೆಳೆಯಲಿ, ಆರೋಗ್ಯಕರ ಚರ್ಚೆಗೆ ಯುವಜನರನ್ನು ಪ್ರೇರೇಪಿಸಲಿ.

-ರೇಶ್ಮಾ ಗುಳೇದಗುಡ್ಡಕರ್, ಕೊಟ್ಟೂರು

**

ಅಭ್ಯರ್ಥಿಗಳ ಗೋಳು ಕೇಳುವವರು ಯಾರು?

ಬೇಡದ ಕಾರಣಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಪದೇ ಪದೇ ಸುದ್ದಿ
ಯಾಗುತ್ತಿದೆ. ಈಗ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಮಧ್ಯೆ ಸಮನ್ವಯದ ಕೊರತೆ ಮತ್ತು ಕಿತ್ತಾಟವು ಸುದ್ದಿಗೆ ಗ್ರಾಸ ಒದಗಿಸಿರುವುದು (ಪ್ರ.ವಾ., ಜೂನ್‌ 2) ಅಕ್ಷಮ್ಯ. ನೇಮಕಾತಿ ಪ್ರಕ್ರಿಯೆಗೆ ತೊಡರಾಗುವ ರೀತಿಯಲ್ಲಿ ಈ ಒಳಬೇಗುದಿ ಉಲ್ಬಣಿಸಿರುವುದು ಸರಿಯಲ್ಲ.

ಒಂದು ಪರೀಕ್ಷೆಯ ಸಿದ್ಧತೆಗೆ ಉದ್ಯೋಗ ಆಕಾಂಕ್ಷಿಗಳು ಹಾಕುವ ಶ್ರಮದ ಬೆಲೆ ಆಯೋಗದ ಸದಸ್ಯರಿಗೆ ತಿಳಿದಂತಿಲ್ಲ. ಸಮಯದ ಮಹತ್ವವೂ ಅವರಿಗೆ ಮನವರಿಕೆಯಾದಂತಿಲ್ಲ. ಅಭ್ಯರ್ಥಿಗಳ ಗೋಳು ಕೇಳುವವರೇ ಇಲ್ಲವಾಗಿದೆ. ಆದಕಾರಣ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬೀಳಲು ಅವಕಾಶ ಕೊಡಬಾರದು.

-ಶಿವರಾಜ್ ಎನ್., ಕಲಬುರಗಿ

**

ಅತಿಥಿ ಉಪನ್ಯಾಸಕರಿಗೆ ಇಡುಗಂಟು ಸ್ವಾಗತಾರ್ಹ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ 60 ವರ್ಷ ತುಂಬಿದವರಿಗೆ ₹5 ಲಕ್ಷ ಇಡುಗಂಟು ನೀಡಲು ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ಇದರಿಂದ ಸಾವಿರಾರು ಉಪನ್ಯಾಸಕರಿಗೆ ಅನುಕೂಲವಾಗುತ್ತದೆ. ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು ಎಂಬುದು ಅವರ ಬಹುದಿನಗಳ ಬೇಡಿಕೆ. ವಿವಿಧ ಕಾರಣಗಳಿಂದ ಅದು ಸದ್ಯಕ್ಕೆ ಈಡೇರಿಲ್ಲ. ಆದರೂ ಸರ್ಕಾರ ಆಗಾಗ ಅವರ ವೇತನವನ್ನು ಏರಿಸುತ್ತಲೇ ಬಂದಿದೆ. ಇದೀಗ ₹5 ಲಕ್ಷ ಇಡುಗಂಟು ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಈ ಕ್ರಮ ಮೆಚ್ಚುಗೆಗೆ ಅರ್ಹ.

-ಕೆ.ವಿ.ವಾಸು, ಮೈಸೂರು

**

ಸಾಬೀತಾಗಿದೆ ಹಸಿರು ಮೇವಿನ ಮಹಿಮೆ

ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಿತ್ಯದ ಹಾಲು ಸಂಗ್ರಹ ಒಂದು ಕೋಟಿ ಲೀಟರ್ ದಾಟಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಇದಕ್ಕೆ ಕಾರಣ ವರುಣ ಮಹಾಶಯ! ಈ ವರ್ಷ ಫೆಬ್ರುವರಿ ಕೊನೆಯ ವಾರದಿಂದ ರಾಜ್ಯದ ವಿವಿಧೆಡೆ ವರುಣನ ಸಿಂಚನ ಸಮೃದ್ಧ ಹಸಿರು ಮೇವಿಗೆ ಮುಖ್ಯ
ಕಾರಣವಾಯಿತು. ಇದು ಜಾನುವಾರುಗಳಿಗೆ ವರದಾನವಾಗಿ ಒದಗಿಬಂದಿತು. ಬೇರೆ ಯಾವುದೇ ಕೃತಕ ಹಿಂಡಿ, ಕ್ಯಾಟಲ್ ಫೀಡ್, ಒಣಹುಲ್ಲಿಗಿಂತ ಹಸಿರು ಮೇವು ಸಮೃದ್ಧ ಹಾಲಿಗೆ ಅಗತ್ಯ ಎಂಬುದನ್ನು ಇದು
ಸಾರಿ ಹೇಳುವಂತಿದೆ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.