ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 8 ಮೇ 2025, 20:17 IST
Last Updated 8 ಮೇ 2025, 20:17 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಹಿತೋಪದೇಶ: ರೇಜಿಗೆ ಹುಟ್ಟಿಸುವಂತಿದೆ

ಭಾರತ– ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಕೆಲವು ದೇಶಗಳ ನಾಯಕರು ನೀಡಿರುವ ಹಿತೋಪದೇಶ ರೇಜಿಗೆ ಹುಟ್ಟಿಸುವಂತಿದೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಅವರು ಎರಡೂ ದೇಶಗಳು ಸಂಯಮ ಕಾಪಾಡುವಂತೆ ಕರೆ ಕೊಟ್ಟಿದ್ದಾರೆ! ರಷ್ಯಾ– ಉಕ್ರೇನ್ ಯುದ್ಧ ಶುರುವಾಗಿ ಮೂರು ವರ್ಷಗಳು ಕಳೆದರೂ ಈ ಮಹಾಶಯನಿಗೆ ಏನೂ ಮಾಡಲಾಗಲಿಲ್ಲ. ಉಕ್ರೇನ್ ಮೇಲೆ ಯುದ್ಧ ಸಾರಿ ಆ ದೇಶದ ಅವನತಿಗೆ ಕಾರಣವಾದ ರಷ್ಯಾ, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಉಪದೇಶ ನೀಡಿದೆ.

ADVERTISEMENT

ಅಮೆರಿಕವು ಭಯೋತ್ಪಾದನೆ ನಿರ್ಮೂಲನೆಯ ಹೆಸರಿನಲ್ಲಿ ಕೆಲವು ದೇಶಗಳಲ್ಲಿ ಇರುವ ಉಗ್ರರ ನೆಲೆಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಲೇ ಇರುತ್ತದೆ. ಅಂತಹ ಅಮೆರಿಕ ಕೂಡ ಸಂಯಮ ಪಾಲಿಸುವಂತೆ ಕರೆ ಕೊಟ್ಟಿದೆ. ಇಸ್ರೇಲ್ ಅಂತೂ ಏಕಕಾಲದಲ್ಲಿ ಹಮಾಸ್, ಸಿರಿಯಾ, ಇರಾನ್ ಮುಂತಾದ ದೇಶಗಳ ವಿರುದ್ಧ ಸೆಣಸುತ್ತಲೇ ಇದೆ. ಉತ್ತರ ಕೊರಿಯಾದ ವಿನಾಶಕಾರಿ ಮಿಸೈಲ್ ಪರೀಕ್ಷೆಯ ಮೇಲೆ ಪ್ರತಿಬಂಧ ಹೇರಲು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ. ಸಮಾಧಾನದ ಸಂಗತಿ ಎಂದರೆ ಭಾರತದ ಕಾರ್ಯಾಚರಣೆಗೆ ಇಸ್ರೇಲ್ ಸಂಪೂರ್ಣ ಬೆಂಬಲ ಘೋಷಿಸಿದೆ. ಉಳಿದವರೆಲ್ಲಾ ಆತ್ಮವಂಚನೆಯಲ್ಲಿ ತೊಡಗಿದ್ದಾರೆ.

⇒ಗೋಸಾಡ ಕೃಷ್ಣ ಭಟ್, ಬೆಂಗಳೂರು

ಪ್ರಯೋಗಗಳ ಮೂದಲಿಕೆ ಬೇಡ

ವಿಜ್ಞಾನದ ಮುದ್ರೆ ಪಡೆಯುವ ತವಕದಲ್ಲಿ ಪುರಾತನ ಜ್ಞಾನವನ್ನು ಒರೆಗಲ್ಲಿಗೆ ಹಚ್ಚುವ ಯಾಗಗಳ ಕುರಿತು ನಾಗೇಶ ಹೆಗಡೆ ವಿವರಿಸಿದ್ದಾರೆ (ಪ್ರ.ವಾ., ಮೇ 8). ಅವರ ವಾದ ತಕ್ಕಮಟ್ಟಿಗೆ ಸರಿ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸದ್ದು ಮಾಡಿದ ಪರ್ಜನ್ಯ ಜಪ-ಹೋಮ ನೆನಪಿಗೆ ಬಂತು. ಆದರೆ ಸಂಶೋಧನಾತ್ಮಕ ಪ್ರಯತ್ನಗಳು ವಿಜ್ಞಾನದ ಅವಿಭಾಜ್ಯ ಅಂಗ. ಸತ್ಯದ ನಿಷ್ಕರ್ಷೆಯಾಗುವುದು ವೈಜ್ಞಾನಿಕ ತಳಹದಿಯ ಮೇಲೆ. ಅದಕ್ಕಾಗಿ, ಪ್ರಯೋಗಗಳನ್ನು ಮೂದಲಿಸುವುದು ಸರಿಯಲ್ಲ.

⇒ಅನಿಲಕುಮಾರ ಮುಗಳಿ, ಧಾರವಾಡ

ಮಣಿಪುರ: ಶಾಂತಿಗೆ ಸಿಗಲಿ ಆದ್ಯತೆ

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರವು ಎರಡು ವರ್ಷ ಕಳೆದರೂ ಇನ್ನೂ ನಿಯಂತ್ರಣಕ್ಕೆ ಬಾರದಿರುವುದು ನಾಚಿಕೆಗೇಡಿನ ಸಂಗತಿ. ಮಾನವೀಯ ಮೌಲ್ಯ
ಗಳನ್ನು ಪಸರಿಸಿದ ಮನುಷ್ಯ ಮತ್ತೆ ಪಶುಸ್ಥಿತಿಯತ್ತ ಸಾಗುತ್ತಿದ್ದಾನೆ. ಅನ್ನಮಯ ಕೋಶದಿಂದ ಆನಂದಮಯ ಕೋಶದ ಕಡೆ ಪಯಣಿಸಬೇಕಿರುವ ಮನುಷ್ಯ ಅವಿವೇಕತನದಿಂದ ಪಶುಸ್ಥಿತಿಯಲ್ಲಿಯೇ ಇದ್ದರೆ ಸಮಾಜ ಹೇಗೆ ಸುಧಾರಿಸುತ್ತದೆ? ಈ ಸಂಘರ್ಷದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮನೆಗಳು ಹಾಗೂ ನೂರಾರು
ಧಾರ್ಮಿಕ ಸ್ಥಳಗಳು ಸಹ ಧ್ವಂಸಗೊಂಡಿವೆಯಂತೆ.

ಮುಖ್ಯಮಂತ್ರಿಯಾಗಿದ್ದ ಎನ್. ಬಿರೇನ್ ಸಿಂಗ್ ಅವರ ಕಾರ್ಯವೈಫಲ್ಯವನ್ನು ವಿಶ್ಲೇಷಕರು ಈ ಹಿಂದೆ ಎತ್ತಿ
ತೋರಿಸಿದ್ದರು. ಈಗ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಆದರೂ ಹಿಂಸೆ ಪೂರ್ತಿ ನಿಂತಿಲ್ಲ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಶಾಂತಿಯುತ ವಾತಾವರಣ ನೆಲೆಗೊಳ್ಳುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದ್ಯತೆಯಾಗಬೇಕು. ಜೊತೆಗೆ ಹಿಂಸೆಗೆ ಅಥವಾ ಹಲ್ಲೆಗೆ ಒಳಗಾದವರಿಗೆ ಸುರಕ್ಷಿತ ವಾಸಸ್ಥಾನ, ಜೀವನೋಪಾಯ ಮತ್ತು ಭದ್ರತೆಯನ್ನು ಒದಗಿಸಬೇಕು.

⇒ಮಹೇಂದ್ರ ಟಿ.ಎಂ., ಶಂಕರಘಟ್ಟ

‘ಗಂಗೆ’ಯನ್ನು ಸ್ವಾಗತಿಸಬೇಕಿದೆ

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶದಲ್ಲಿನ ಬಡಾವಣೆಯೊಂದರ ನಾಗರಿಕರು, ಹಣ ಪಾವತಿಸಿದರೂ ಕಾವೇರಿ ನೀರು ಬಾರದಿರುವುದರ ಕುರಿತು ವರದಿಯಾಗಿದೆ (ಪ್ರ.ವಾ., ಮೇ 8). ಕಾವೇರಿ ನದಿ ನೀರಿಗಾಗಿ ಜನ ಪರಿತಪಿಸುವ ಬದಲು, ಉಚಿತವಾಗಿ ದೊರೆಯುವ ಪರಿಶುದ್ಧ ಮಳೆನೀರಿನ ‘ಗಂಗೆ’ಯನ್ನು
ಸ್ವಾಗತಿಸದಿರುವುದು ದುರದೃಷ್ಟಕರ. ಇದಕ್ಕೆ ಜನರಲ್ಲಿ ಜಲಸಾಕ್ಷರತೆ ಇಲ್ಲದಿರುವುದೇ ಕಾರಣ. ಮನೆಯ ತಾರಸಿ ಮೇಲೆ ಬೀಳುವ ಮಳೆನೀರನ್ನು ಶೋಧಿಸಿ ಸಂಗ್ರಹಿಸಿದರೆ ಕಾವೇರಿ ನದಿ ನೀರಿಗಾಗಿ ಕಾಯುವ ಅಗತ್ಯ ಬರುವುದಿಲ್ಲ. ಮಳೆನೀರಿನ ಸಂಗ್ರಹಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿದ್ದರೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬಾರದೇ ಇರುವುದಕ್ಕೆ ಅಧಿಕಾರಿಶಾಹಿ, ಗುತ್ತಿಗೆದಾರರ ‘ನೀರಿನ ಮಾಫಿಯಾ’ ಕಾರಣ ಇರಬಹುದು.

⇒ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.