ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 0:54 IST
Last Updated 28 ಏಪ್ರಿಲ್ 2025, 0:54 IST
   

ಇಂಥ ಹೇಳಿಕೆ ತರವೇ?

‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ಮಾಡುವವನು ಧರ್ಮ ಕೇಳುತ್ತಾ ಕೂರಲು ಆಗುವುದೇ? ಕೇಳಿರಲಿಕ್ಕಿಲ್ಲ ಎಂಬ ಭಾವನೆ ನನ್ನದು. ಒಂದು ವೇಳೆ ಕೇಳಿದ್ದರೂ ಧರ್ಮದ ಹೆಸರಿನಲ್ಲಿ ಎಲ್ಲವನ್ನೂ ಜೋಡಿಸುವುದು ಸರಿಯಲ್ಲ’ ಎಂದು ಸಚಿವ ಆರ್.ಬಿ.ತಿಮ್ಮಾಪುರ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಏ. 27). ಒಂದು ದಾರುಣ ಪ್ರಕರಣದ ಬಗ್ಗೆ ಏನು ಮಾತನಾಡುತ್ತಿದ್ದೇನೆ ಎಂಬ ಅರಿವು ಸಚಿವರಿಗೆ ಇದ್ದಂತಿಲ್ಲ. ‘ನನ್ನ ಭಾವನೆ’ ಎಂದು ಇಂಥ ವಿಷಮ ಸಂದರ್ಭದಲ್ಲಿ ಹೇಳಿಬಿಡುವುದು ಸರಿಯೇ?

ಸಂತೋಷ್ ಜಗದಾಳೆ ಅವರು ಇಸ್ಲಾಂನ ಸಾಲುಗಳನ್ನು ಹೇಳಲಾಗದಿದ್ದಕ್ಕೆ ಹತ್ಯೆಗೀಡಾದರು ಎಂದು ಅವರ ಮಗಳು ಅಸಾವರಿ ಹೇಳಿದ್ದಾರೆ. ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಅವರ ಪ್ರಕಾರ, ಉಗ್ರರು ‘ನೀನು ಹಿಂದೂನಾ’ ಎಂದು ಕೇಳಿ ಅವರ ಪತಿಯನ್ನು ಹತ್ಯೆ ಮಾಡಿದ್ದಾರೆ. ‘ನನ್ನ ಅಳಿಯ ಹಿಂದೂ ಎಂದು ತಿಳಿಯುತ್ತಿದ್ದಂತೆ ಗುಂಡಿಕ್ಕಿದರು’ ಎಂದು ಭರತ್‌ ಭೂಷಣ್ ಅವರ ಅತ್ತೆ ಹೇಳಿದ್ದಾರೆ. ‘ನೀವು ಯಾವ ಧರ್ಮದವರು’ ಎಂದು ಪ್ರಶ್ನಿಸಿದರು ಎಂದು ಹತ್ಯೆಗೀಡಾದ ಶುಭಂ ದ್ವಿವೇದಿ ಅವರ ಪತ್ನಿ ಹೇಳಿದ್ದಾರೆ. ಇವೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿವೆ. ಸಚಿವರು ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಹತ್ಯೆ ನಡೆದ ಸ್ಥಳದಿಂದ ಸಾವಿರಾರು ಮೈಲಿ ದೂರದ ಬಾಗಲಕೋಟೆಯಲ್ಲಿ ಕುಳಿತು ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಅಂದರೆ ಇಲ್ಲಿ ಸಚಿವರ ‘ಭಾವನೆ’ಯ ಪ್ರಕಾರ, ಹತ್ಯೆಗೀಡಾದವರ ಆಪ್ತರು ಹೇಳಿದ್ದೆಲ್ಲವೂ ಸುಳ್ಳು ಎಂದೇ? 

– ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ದುಬಾರಿ ಶುಲ್ಕಕ್ಕೆ ಬೇಕು ಕಡಿವಾಣ

ರಾಜ್ಯದ ಹಲವು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಹಾಗೂ ಕೇಂದ್ರ ಪಠ್ಯಕ್ರಮ ಆಧಾರಿತ ಸಿಬಿಎಸ್ಇ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳಿಗೆ ದಾಖಲಾತಿ ಪಡೆಯಲು ಪಾಲಕರು ಲಕ್ಷಗಟ್ಟಲೆ ಶುಲ್ಕ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್‌ಕೆಜಿ, ಯುಕೆಜಿಗೆ ₹60 ಸಾವಿರ ಹಾಗೂ ಒಂದನೇ ತರಗತಿಗೆ ₹1 ಲಕ್ಷ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಈ ಮಾಹಿತಿಗಳು‌ ಸಂಬಂಧಿಸಿದ ಶಾಲೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಇದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸರಿಯಲ್ಲ. ಪ್ರಾಥಮಿಕ ಶಿಕ್ಷಣವೇ ಇಷ್ಟೊಂದು ದುಬಾರಿ ಆದರೆ ಇನ್ನು ಉನ್ನತ ಶಿಕ್ಷಣದ ಪಾಡೇನು? ಶಿಕ್ಷಣ ಇಲಾಖೆಯು ಪ್ರತಿ ಶೈಕ್ಷಣಿಕ ವರ್ಷಕ್ಕೂ ಆಯಾ ಶಾಲೆಗಳಿಗೆ ಸರ್ಕಾರ ನಿಗದಿಪಡಿಸಿದ ಗರಿಷ್ಠ ಶಾಲಾ ಶುಲ್ಕದ ಬಗ್ಗೆ ಸುತ್ತೋಲೆ ನೀಡುತ್ತದೆ. ಆದರೂ ಈ ರೀತಿ ದುಬಾರಿ ಶುಲ್ಕಕ್ಕೆ ಮೊರೆ ಹೋಗುವುದು ಸರಿಯಲ್ಲ.  

– ಸುರೇಂದ್ರ ಪೈ, ಭಟ್ಕಳ

ಪಾಕಿಸ್ತಾನದ ನಾಗರಿಕರೇ ಸರ್ಕಾರಕ್ಕೆ ಬುದ್ಧಿ ಹೇಳಲಿ

‘ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಪಾಕಿಸ್ತಾನದ ‘ನಾಗರಿಕ’ರಲ್ಲ, ಭಯೋತ್ಪಾದಕರು, ಆದರೆ ಭಾರತ ಸರ್ಕಾರ ಆ ಕೃತ್ಯಕ್ಕೆ ಪ್ರತಿಕ್ರಿಯಿಸುವಾಗ ನಾಗರಿಕವಾಗೇ ನಡೆದುಕೊಳ್ಳಬೇಕಾಗುತ್ತದೆ’ ಎಂದು ಭಾರತ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿರುವುದಕ್ಕೆ ಎಚ್.ಎಸ್.ಮಂಜುನಾಥ ಪ್ರತಿಕ್ರಿಯಿಸಿದ್ದಾರೆ (ಪ್ರ.ವಾ., ಏ. 26). ಪಾಕಿಸ್ತಾನದ ನೆರವಿಲ್ಲದೆ, ಆ ದೇಶದ ಬಗ್ಗೆ ಮೃದು ಧೋರಣೆ ಹೊಂದಿರುವ ಸ್ಥಳೀಯರ ಸಹಕಾರವಿಲ್ಲದೆ ಉಗ್ರರು ಜಮ್ಮು-ಕಾಶ್ಮೀರದಲ್ಲಿ ಇಂತಹ ಹೇಯ ಕೃತ್ಯ ಎಸಗಲು ಸಾಧ್ಯವಾಗದು. ‘ಪಾಕಿಸ್ತಾನವು ಹಲವು ದಶಕಗಳಿಂದ ಭಯೋತ್ಪಾದಕರಿಗೆ ತರಬೇತಿ ಮತ್ತು ಹಣಕಾಸಿನ ನೆರವು ನೀಡುವ ಕೊಳಕು ಕೆಲಸ ಮಾಡುತ್ತಿದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವರೇ ಒಪ್ಪಿಕೊಂಡಿದ್ದಾರೆ. ಪುಲ್ವಾಮಾ, ಕಾರ್ಗಿಲ್, ಮುಂಬೈ ಮತ್ತು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕರ ದಾಳಿಗಳು ಪಾಕಿಸ್ತಾನದ ರಕ್ಷಣಾ ಸಚಿವರ ಮಾತನ್ನು ಪುಷ್ಟೀಕರಿ ಸುತ್ತವೆ ಮತ್ತು ತಾನು ನಂಬಿಕೆಗೆ ಅರ್ಹವಲ್ಲದ ದೇಶ ಎಂಬುದನ್ನು ಪಾಕಿಸ್ತಾನ ಸಾಬೀತುಪಡಿಸುತ್ತಲೇ ಬಂದಿದೆ.

ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದ ಜನರಿಗೆ ಸಮಸ್ಯೆಯಾಗುವುದೇನೋ ನಿಜ. ತಮ್ಮದೇ ಸರ್ಕಾರದ ದರ್ಪ, ದುರ್ವರ್ತನೆ ಮತ್ತು ಭಾರತದ ವಿರುದ್ಧ ಭಯೋತ್ಪಾದಕರನ್ನು ‘ಛೂ’ ಬಿಡುವ ಕಾರಣಕ್ಕಾಗಿ ಅವರು ಸ್ವಲ್ಪಮಟ್ಟಿನ ಸಮಸ್ಯೆಯನ್ನು ಎದುರಿಸಲು ಸಿದ್ಧರಿರಲೇಬೇಕು. ಉಗ್ರರಿಗೆ ಆಶ್ರಯತಾಣವಾಗಿರುವ ಪಾಕಿಸ್ತಾನದ ಜೊತೆ ಭಾರತದ ಸೌಮ್ಯ ಭಾಷೆ ಮತ್ತು ಪ್ರತಿಕ್ರಿಯೆಗಳು ಪ್ರಯೋಜನಕ್ಕೆ ಬಾರವೆಂಬುದು ಕಟು ಸತ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾದ ಅನಿವಾರ್ಯ ಸ್ಥಿತಿಗೆ ಪಾಕಿಸ್ತಾನವೇ ಭಾರತವನ್ನು ದೂಡಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿರುವುದರಿಂದ ಬಾಧಿತರಾಗುವ ಪಾಕಿಸ್ತಾನದ ಪ್ರಜ್ಞಾವಂತ ನಾಗರಿಕರಾದರೂ ತಮ್ಮ ಸರ್ಕಾರಕ್ಕೆ ಬುದ್ಧಿ ಹೇಳಬಹುದು, ಪಾಠ ಕಲಿಸಬಹುದು ಎಂಬ ಆಶಾಭಾವವನ್ನು ಭಾರತೀಯರು ಇಟ್ಟುಕೊಳ್ಳಬಹುದೇನೊ! 

– ಪುಟ್ಟೇಗೌಡ, ಬೆಂಗಳೂರು

ಮಂಟೇಸ್ವಾಮಿ ಪ್ರಾಧಿಕಾರ ರಚನೆ ಸಲ್ಲದು

ಹಳೆ ಮೈಸೂರು ಭಾಗದ ನೀಲಗಾರ ಪರಂಪರೆಯ ಹಿಂದೂ ಧಾರ್ಮಿಕ ಕೇಂದ್ರವಾದ, ಹಿಂದುಳಿದ ವರ್ಗಗಳು ಹಾಗೂ ತಳಸಮುದಾಯಗಳ ಆರಾಧ್ಯ ದೈವವಾಗಿರುವ ಮಂಟೇಸ್ವಾಮಿ ಪರಂಪರೆಗೆ ಸೇರಿದ ಮಠಗಳನ್ನು ಸ್ವಾಧೀನ ಪಡಿಸಿಕೊಂಡು ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ರಾಜ್ಯ ಸರ್ಕಾರವು ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ಧಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಜಾತ್ಯತೀತ, ಜಾನಪದ ಪರಂಪರೆಯ ಉಸಿರಾಗಿರುವ ಮಂಟೇಸ್ವಾಮಿ ಪರಂಪರೆಯು ಹಳೆ ಮೈಸೂರು, ತಮಿಳುನಾಡಿನ ಕೆಲ ಭಾಗಗಳನ್ನು ಒಳಗೊಂಡಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿದೆ. ಸರ್ಕಾರ ಇದರ ಮೇಲೆ ಹಿಡಿತ ಸಾಧಿಸುವುದು ಸರಿಯಲ್ಲ.

ಈ ಮಠವನ್ನು 15ನೇ ಶತಮಾನದ ಸಾಮಾಜಿಕ ಹರಿಕಾರ ಮಂಟೇಸ್ವಾಮಿ ಸ್ಥಾಪಿಸಿದ್ದು, ಮಠಾಧಿಪತಿಗಳಾಗುತ್ತಾ ಬಂದಿರುವವರು ನೀಲಗಾರ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಹಾಗೂ ಮಠದಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ. ತಳಸಮುದಾಯ ಗಳ ಹಾಗೂ ಹಿಂದುಳಿದ ವರ್ಗಗಳ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಮಠವನ್ನು ಸರ್ಕಾರ ಏಕಾಏಕಿ ಸ್ವಾಧೀನ ಪಡಿಸಿಕೊಂಡು ಪ್ರಾಧಿಕಾರ ರಚನೆ ಮಾಡಲು ಹೊರಟಿರುವುದು ಸರಿಯಲ್ಲ. ಇದೇ ರೀತಿ ಮುಂದಾಗಿ ರಾಜ್ಯದ ದೊಡ್ಡ ದೊಡ್ಡ ಮಠಗಳು ಹಾಗೂ ದೇವಸ್ಥಾನಗಳನ್ನು ಪ್ರಾಧಿಕಾರ ರಚನೆ ಮಾಡಿ ವಶಪಡಿಸಿಕೊಳ್ಳುವುದೇ ಎಂಬ ಪ್ರಶ್ನೆ ಮೂಡುತ್ತದೆ. ಹಾಗೆ ಮಾಡಲಾಗದಿದ್ದರೆ, ಮಂಟೇಸ್ವಾಮಿ ಪಾರಂಪರಿಕ ಮಠಗಳು ಹಾಗೂ ಆಸ್ತಿಗಳ ಮೇಲೆ ಮಾತ್ರವೇಕೆ ಸರ್ಕಾರದ ಕಣ್ಣು?

– ಲಕ್ಷ್ಮಿ ಕಿಶೋರ್ ಅರಸ್, ಮೈಸೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.