ADVERTISEMENT

ನೇಮಕಾತಿ ಎಂಬ ಪಂಚವಾರ್ಷಿಕ ಯೋಜನೆ!

ಶ್ವೇತಾ
Published 2 ಏಪ್ರಿಲ್ 2019, 20:15 IST
Last Updated 2 ಏಪ್ರಿಲ್ 2019, 20:15 IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವರ್ತನೆಯಿಂದ, ನೇಮಕಾತಿ ಎಂಬುದು ಸರ್ಕಾರದ ಪಂಚವಾರ್ಷಿಕ ಯೋಜನೆಯೇನೋ ಎಂಬಂತೆ ಭಾಸವಾಗುತ್ತಿದೆ. ಏಕೆಂದರೆ ಪಿ.ಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ 2015ರಲ್ಲಿ ಆರಂಭವಾಗಿದೆ. 2019ರಲ್ಲಿ ಈಗಾಗಲೇ ಮೂರು ತಿಂಗಳು ಕಳೆದಿವೆ. ಸರ್ಕಾರ ಬದಲಾಯಿತು, ಮೂವರು ಶಿಕ್ಷಣ ಸಚಿವರು ಬಂದು ಹೋದರು. ಆದರೂ ಈ ನೇಮಕಾತಿಗೆ ಮಾತ್ರ ಮುಕ್ತಿ ಸಿಗದೆ ಕುಂಟುತ್ತಲೇ ಸಾಗುತ್ತಿದೆ. ಹೀಗಾಗಲು ಸರ್ಕಾರ ಕಾರಣವೋ, ಬೇರೆ ನೇಮಕಾತಿಗಳನ್ನೆಲ್ಲಾ ನಿಗದಿತ ಸಮಯಕ್ಕೆ ಮಾಡಿ ಮುಗಿಸುವ ಕೆಇಎ ಕಾರಣವೋ ತಿಳಿಯದಾಗಿದೆ. ಇದನ್ನೇ ನಂಬಿ ಓದಿದ ಅಭ್ಯರ್ಥಿಗಳ ಪಾಡು ಅರಣ್ಯರೋದನವಾಗಿದೆ.

ಆರಂಭದಲ್ಲಿ ಅರ್ಜಿ ಸಲ್ಲಿಸಲು ಹೋರಾಟ, ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗಾಗಿ ಹೋರಾಟ, ಕೀ ಉತ್ತರ/ ಅಂತಿಮ ಕೀ ಉತ್ತರ ಬಿಡುಗಡೆ ಮಾಡುವಂತೆ ಹೋರಾಟ, ಈಗ ಅಂತಿಮ ಕೀ ಉತ್ತರಗಳು ತೃಪ್ತಿ ತಂದಿಲ್ಲ, ಸರಿಪಡಿಸಿ ಎಂತಲೂ, ಮೆರಿಟ್ ಲಿಸ್ಟ್ ಬಿಡಿ ಎಂತಲೂ ಹೋರಾಟ ಮಾಡಬೇಕಾಗಿದೆ. ಚುನಾವಣೆಯ ಕಾರಣ ಹೇಳುತ್ತಿರುವ ಕೆಇಎಗೆ, ಬೆಂಗಳೂರಿನಲ್ಲೇ ಇರುವ ಮುಖ್ಯ ಚುನಾವಣಾಧಿಕಾರಿಯಿಂದ ಸಲಹೆ ಪಡೆಯಲು ಎಷ್ಟು ಸಮಯ ಬೇಕು? ದಯವಿಟ್ಟು ಈ ಪ್ರಕ್ರಿಯೆ ಮುಗಿಸಿ ಸಾವಿರಾರು ಜೀವಗಳು ನಿಟ್ಟುಸಿರುಬಿಡುವಂತೆ ಮಾಡಿ.

- ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.