ADVERTISEMENT

ವಾಚಕರ ವಾಣಿ: ಹೊಂದಾಣಿಕೆ ಇದ್ದರೆ ಬದುಕು ಸುಸೂತ್ರ

ಪ್ರಜಾವಾಣಿ ವಿಶೇಷ
Published 3 ಜನವರಿ 2026, 0:53 IST
Last Updated 3 ಜನವರಿ 2026, 0:53 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಹೊಂದಾಣಿಕೆ ಇದ್ದರೆ ಬದುಕು ಸುಸೂತ್ರ

ಕುಟುಂಬದ ಹಣಕಾಸು ನಿಭಾಯಿಸುವಲ್ಲಿ ಪತಿಯ ಪ್ರಾಬಲ್ಯವನ್ನು ಪತ್ನಿಯ ಮೇಲಿನ
ಶೋಷಣೆ ಅಥವಾ ಕ್ರೌರ್ಯ ಎಂಬುದಾಗಿ ಪರಿಗಣಿಸಲಾಗದೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪತಿಯ ಮೇಲೆ ಹೂಡಲಾಗಿದ್ದ ವರದಕ್ಷಿಣೆ ದೌರ್ಜನ್ಯದ ದಾವೆ
ಯನ್ನು ವಜಾಗೊಳಿಸಿ ಬಡಪಾಯಿ ಗಂಡನನ್ನು ಪಾರು ಮಾಡಿದೆ.

ADVERTISEMENT

ಭಾರತೀಯ ಕುಟುಂಬಗಳಲ್ಲಿ ಹಣಕಾಸಿನ‌ ವಿಷಯದಲ್ಲಿ ಪತಿಯ ಪ್ರಾಬಲ್ಯ ಅತ್ಯಂತ ಸರ್ವೇ ಸಾಮಾನ್ಯ ಎಂದು ನ್ಯಾಯಾಲಯ ಹೇಳಿದೆ. ಹಾಗಂತ, ಗಂಡಂದಿರು ಈ ತೀರ್ಪನ್ನೇ ಬಳಸಿಕೊಂಡು ಹಣಕಾಸಿನ ಪ್ರಾಬಲ್ಯ ಹೊಂದಲು ಮುಂದಾಗಬಾರದು. ‘ಸಮರಸವೇ ಜೀವನ’ ಎಂಬ ತತ್ತ್ವದಡಿ ಒಬ್ಬರನ್ನೊಬ್ಬರು ಪರಸ್ಪರ ಅರಿತು ಕೊಂಡು ಖುಷಿಯಿಂದ ಜೀವನ ಮಾಡುವುದನ್ನು ರೂಢಿಸಿಕೊಂಡರೆ ಬಾಳು ಬಂಗಾರ ಆದೀತು.

⇒ವೆಂಕಟೇಶ್ ಮುದಗಲ್, ಕಲಬುರಗಿ

ಗಂಡು–ಹೆಣ್ಣು: ಇಬ್ಬಗೆಯ ನೀತಿ ಸರಿಯಲ್ಲ

ಹೊಸ ವರ್ಷದ ಆಚರಣೆಯಿರಲಿ ಅಥವಾ ದೈನಂದಿನ ಜೀವನವಿರಲಿ, ಹೆಣ್ಣು ಮಕ್ಕಳು ತಮ್ಮಿಷ್ಟದಂತೆ ಬದುಕಿದಾಗ ಅವರ ಚಾರಿತ್ರ್ಯವನ್ನು ವಿಮರ್ಶಿಸಲು ಸಮಾಜಕ್ಕೆ ಯಾವುದೇ ಹಕ್ಕಿಲ್ಲ. ಗಂಡು ಮಾಡಿದರೆ ಅದು ಸಂಭ್ರಮ; ಹೆಣ್ಣು ಮಾಡಿದರೆ ಅದು ತಪ್ಪು ಎನ್ನುವ ಇಬ್ಬಗೆ ನೀತಿ ಅಸಹ್ಯಕರ. ಹೆಣ್ಣು ಸೀತೆಯಂತೆ ಸೌಮ್ಯಳಾಗಿದ್ದರೂ ಮಾತಾಡುವ ಈ ಸಮಾಜ, ಆಕೆ ತನ್ನಿಷ್ಟದಂತೆ ಬದುಕಿದಾಗ ಬೊಬ್ಬೆ ಹೊಡೆಯುತ್ತದೆ. ಈ ವಿರೋಧಾಭಾಸ ಬದಲಾಗದ ಜನರ ಕೊಳಕು ಮನಃಸ್ಥಿತಿಯ ದ್ಯೋತಕ. ಹೆಣ್ಣು ಕೇವಲ ಸೀರೆಯುಟ್ಟು, ತಗ್ಗಿಬಗ್ಗಿ ನಡೆದರಷ್ಟೆ ಗೌರವ ಎನ್ನುವ ಕಾಲ ಮುಗಿದುಹೋಗಿದೆ; ನಿಜವಾದ ತಪ್ಪು ಇರುವುದು ಹೆಣ್ಣಿನ ನಡವಳಿಕೆಯಲ್ಲಲ್ಲ, ಆಕೆಯನ್ನು ಸದಾ ನಿಯಂತ್ರಿಸಲು ಮತ್ತು ಟೀಕಿಸಲು ಹೊಂಚು ಹಾಕುವ ಸಮಾಜದ ದೃಷ್ಟಿಕೋನದಲ್ಲಿ ಮಾತ್ರ.

⇒ನಿರಂಜನ್ ಎಚ್.ಬಿ., ಶಿವಮೊಗ್ಗ

ಸಮಾಧಿ ನಿರ್ಮಾಣ: ಸೋಜಿಗ ಈ ಜಗ

ತೆಲಂಗಾಣದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮಗಾಗಿ ಸಮಾಧಿ ನಿರ್ಮಿಸಿ ಕೊಂಡಿರುವುದು ವರದಿಯಾಗಿದೆ. ಸರ್‌ ಎಂ. ವಿಶ್ವೇಶ್ವರಯ್ಯನವರಂತೆ, ಸಮಾಧಿ ನಿರ್ಮಾಣ ಮತ್ತು ಸಂಸ್ಕಾರದ ವಿಧಿವಿಧಾನಗಳ ಖರ್ಚಿಗೆಂದು ಹಣ ಎತ್ತಿಡುವವರಿದ್ದಾರೆ. ಗಿರೀಶ ಕಾರ್ನಾಡರಂತೆ, ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ದೇಹವನ್ನು ಸಂಸ್ಕಾರ  ಮಾಡಬೇಕೆಂದು ಮನೆಯವರಿಗೆ ಹೇಳುವವರು ದೊರೆಯುತ್ತಾರೆ. ಶಿವರಾಮ ಕಾರಂತರಂತೆ ‘ಸತ್ತ ಕೊರಡಿಗೆ ಶೃಂಗಾರ, ಉತ್ಸವ ಬೇಡ, ಎಲ್ಲಿ ಸತ್ತೆನೋ ಅಲ್ಲೆ ಸುಟ್ಟು ಬೂದಿ ಮಾಡಿ’ ಎಂದು ಹೇಳುವವರೂ ದೊರೆಯುತ್ತಾರೆ. ತನ್ನ ಎಸ್ಟೇಟಿನ ಗುಡ್ಡದ ಬಳಿಯಲ್ಲಿ ದೇಹವನ್ನು ಸಮಾಧಿ ಮಾಡಿ ಎಂದು ಟಾಲ್‌ಸ್ಟಾಯ್ ಹೇಳಿದಂತೆ, ಇಂಥದೇ ಊರಿನ ಸ್ಮಶಾನದಲ್ಲಿ, ಇಂಥವರ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಿ ಎಂದು ಹೇಳುವವರೂ ಇದ್ದಾರೆ. ಸಂಸ್ಕಾರ, ಸಮಾಧಿ ಯಾವುದೂ ಬೇಡ, ದೇಹವನ್ನು ಯಾವುದಾದರೂ ಒಂದು ಆಸ್ಪತ್ರೆಗೆ ಕೊಟ್ಟುಬಿಡಿ ಎಂದು ಹೇಳುವವರಿದ್ದಾರೆ. ಆದರೆ, ಬದುಕಿರುವಾಗಲೇ ತನ್ನ ಸಮಾಧಿ ನಿರ್ಮಿಸಿಕೊಂಡವರು ವಿರಳ. 

⇒ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಹಳ್ಳಿಗಳಲ್ಲೂ ರಿಯಲ್‌ ಎಸ್ಟೇಟ್‌ ಹಾವಳಿ! ಬೆಂಗಳೂರಿನ ಕೋಗಿಲು ಬಳಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಆದರೆ, ಹಳ್ಳಿಗಳಲ್ಲಿ ಪಿತ್ರಾರ್ಜಿತವಾಗಿ ಬಂದ ಆಸ್ತಿ ಹಾಗೂ ಕಷ್ಟಪಟ್ಟು ಕೊಂಡುಕೊಂಡ ಆಸ್ತಿಯನ್ನು ಇತ್ತೀಚೆಗೆ ಸರ್ಕಾರ ಮತ್ತು ರಿಯಲ್ ಎಸ್ಟೇಟ್ ಮಾಫಿಯಾದವರು ಕಬಳಿಕೆ ಮಾಡುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ರಿಯಲ್‌ ಎಸ್ಟೇಟ್‌ ಮಾಫಿಯಾಕ್ಕೆ ಕಡಿವಾಣ ಹಾಕಬೇಕಿದೆ.

⇒ಮೋಹನ್ ಕುಮಾರ್, ಹೊಳೆನರಸೀಪುರ

ವಿದೇಶದಲ್ಲಿ ಬಣ್ಣನೆ, ಇಲ್ಲಿ ಮಾತ್ರ ವೇದನೆ

ಮಾಸಿಕ ರೇಡಿಯೊ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದುಬೈನಲ್ಲಿ ಭಾರತೀಯರಿಗೆ ಕನ್ನಡ ಕಲಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅದೊಂದು ವಿಶೇಷ ಸಾಧನೆಯೆಂದು ಬಣ್ಣಿಸಿದರು. ವಿಪರ್ಯಾಸವೆಂದರೆ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತೀಯರು ಕನ್ನಡ ಕಲಿಯುತ್ತಿಲ್ಲವಲ್ಲ ಎಂಬುದೇ ವೇದನೆ.

⇒ಎಚ್‌.ವಿ. ಶ್ರೀಧರ್, ಬೆಂಗಳೂರು

ದ್ವೇಷ ಭಾಷಣ ಮಸೂದೆ ಜಾರಿಯಾಗಲಿ

ದ್ವೇಷ ಭಾಷಣ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುವ ಮೂಲಕ ಸರ್ಕಾರವು ಚಾರಿತ್ರಿಕ ಹೆಜ್ಜೆ ಇಟ್ಟಿದೆ. ಈ ಮಸೂದೆ ಜನರ ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿದೆ ಎಂಬುದು ವಿಪಕ್ಷಗಳ ಆಕ್ಷೇಪ. ಆದರೆ, ಈ ಮಸೂದೆಯಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧವಷ್ಟೆ ನಿಯಮಗಳು ಅನ್ವಯಿಸುತ್ತವೆಯೇ ಹೊರತು ದ್ವೇಷ ಭಾಷಣ ಮಾಡದವರ ವಿರುದ್ಧವಲ್ಲ. ಆದರೆ, ಈ ನಿಯಮಗಳು ದುರ್ಬಲರ ಮೇಲೆ ಮಾತ್ರ ಜಾರಿಯಾಗಿ, ಪ್ರಬಲ ಶಕ್ತಿಶಾಲಿಗಳು ತಪ್ಪಿಸಿಕೊಳ್ಳುವಂತಾಗಬಾರದು.  

⇒ಬಾಬು ಶಿರಮೋಜಿ, ಬೆಳಗಾವಿ

ಸ್ವಾಗತಾರ್ಹ...

ಜಾತಿ ಮೀರಿ ಪ್ರೀತಿಸಿದರೆ

ಕುಂದಲ್ಲವದು ಮರ್ಯಾದೆಗೆ

ಬದಲಿಗೆ ಹೆಚ್ಚುವುದು

ಮರ್ಯಾದೆ ಗೌರವ!

ಜಾತಿ ಕಟ್ಟಳೆ ಮುರಿವ

ಸಮತೆಯ ಸಂದೇಶ ಸಾರುವ

ಸಂಜೀವಿನಿಯದು ಪ್ರೀತಿ!

ಜಾತಿ ಮೀರದೆ ನಾವಾಗುವುದಿಲ್ಲ

ನಿಜದಲಿ ಮನುಜರು!

ಮರ್ಯಾದೆಗೇಡು ಹತ್ಯೆ ತಡೆಯಲು

ಸರ್ಕಾರ ಮಸೂದೆ ತರುತ್ತಿರುವುದು

ಸ್ವಾಗತಾರ್ಹ ನಡೆ!

 -ಸಿ.ಪಿ. ಸಿದ್ಧಾಶ್ರಮ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.