ವಾಚಕರ ವಾಣಿ
‘ನೀರಿದ್ದರೆ ನಾಳೆ’ ಅಭಿಯಾನ ಸ್ವಾಗತಾರ್ಹ
ಸಣ್ಣ ನೀರಾವರಿ ಇಲಾಖೆಯು ಕೈಗೊಂಡಿರುವ ‘ನೀರಿದ್ದರೆ ನಾಳೆ’ ಅಭಿಯಾನ ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ಈ ಆಂದೋಲನದ ಆಶಯಕ್ಕೆ ವ್ಯತಿರಿಕ್ತ ವಿದ್ಯಮಾನಗಳು ನಡೆಯುತ್ತಿವೆ. ವಾಣಿಜ್ಯ ಉದ್ದೇಶಕ್ಕಾಗಿ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆದು ಮಿತಿ ಮೀರಿ ನೀರು ಬಳಸಲಾಗುತ್ತಿದೆ. ಪಶ್ಚಿಮಘಟ್ಟವನ್ನು ಧ್ವಂಸ ಮಾಡುವ ನದಿಕಣಿವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವ್ಯಾಪಕ ಜನವಿರೋಧದ ನಡುವೆಯೂ ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿ ಪ್ರಕ್ರಿಯೆ ಸಾಗಿದೆ. ಬೇಡ್ತಿ–ವರದಾ ನದಿ ತಿರುವು ಹಾಗೂ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳ ಪ್ರಸ್ತಾವ ಮುನ್ನೆಲೆಗೆ ಬಂದಿದೆ. ನಾಡಿನ ಯಾವ ಭಾಗಕ್ಕೂ ನಿಜವಾಗಿ ನೀರು ಪೂರೈಸಲಾಗದ ಈ ಅವೈಜ್ಞಾನಿಕ ಯೋಜನೆಗಳಿಗೆ ತೊಡಗಿಸುವ ಸಂಪನ್ಮೂಲವನ್ನು ಜಲಾನಯನ ಅಭಿವೃದ್ಧಿಗೆ ತೊಡಗಿಸಿದರೆ, ಒಳನಾಡಿನಾದ್ಯಂತ ನೀರಿನ ಲಭ್ಯತೆಯನ್ನು ಹೆಚ್ಚಿಸಬಹುದು.
⇒ಕೇಶವ ಎಚ್. ಕೊರ್ಸೆ, ಶಿರಸಿ
ನಾಗರಿಕ ಜವಾಬ್ದಾರಿ: ನುಣುಚಿಕೊಳ್ಳಬೇಡಿ
‘ಸಮೀಕ್ಷೆ–ಮಾಹಿತಿ ನೀಡದವರೇ ಹೆಚ್ಚು’ (ಪ್ರ.ವಾ., ಅ. 13) ಸುದ್ದಿ ಓದಿ ಆತಂಕವಾಯಿತು. ಯಾವುದೇ ಸರ್ಕಾರಕ್ಕಾಗಲಿ, ಉದ್ದಿಮೆಗಾಗಲಿ ಅಥವಾ ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಗಳಿಗಾಗಲಿ, ಯೋಜನೆಗಳ ತಯಾರಿಕೆಗೆ ದತ್ತಾಂಶ ಅತ್ಯವಶ್ಯಕ. ಈ ದತ್ತಾಂಶವು ವಾಸ್ತವಾಂಶ ತಿಳಿಸಿದರೆ, ಅದು ಮುಂದಿನ ಯೋಜನೆಗಳಿಗೆ ಬುನಾದಿಯಾಗುತ್ತದೆ. ದತ್ತಾಂಶವೇ ಇಲ್ಲದಿದ್ದರೆ ಅಥವಾ ತಪ್ಪಾದ ದತ್ತಾಂಶವಿದ್ದರೆ ಅದರ ಆಧಾರದಲ್ಲೇ ಮಾಡುವ ಯೋಜನೆಗಳು ತಪ್ಪಾಗಿ, ಉದ್ದೇಶ ಈಡೇರುವುದಿಲ್ಲ. ಒಂದು ಸಾರಿ ದತ್ತಾಂಶ ತಯಾರಾದರೆ ಅದನ್ನು ಅನೇಕ ಉದ್ದೇಶಗಳಿಗೆ ಹಲವು ವರ್ಷದವರೆಗೆ ಬಳಸಬಹುದು. ಇಂತಹ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ, ಬೆಂಬಲ ಅಗತ್ಯ. ನೈಜ ಮಾಹಿತಿ ಕೊಡದಿರುವುದು ನಾಗರಿಕರ ಜವಾಬ್ದಾರಿಯುತ ನಡವಳಿಕೆ ಅಲ್ಲ.
⇒ಟಿ.ವಿ.ಬಿ. ರಾಜನ್, ಬೆಂಗಳೂರು
ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗೆ ಸಿಗಲಿ
ನವೆಂಬರ್ 1 ಸಮೀಪಿಸುತ್ತಿದ್ದಂತೆಯೇ ‘ರಾಜ್ಯೋತ್ಸವ ಪ್ರಶಸ್ತಿ’ ಆಕಾಂಕ್ಷಿಗಳ ಆಸೆ ಮತ್ತು ಉತ್ಸಾಹ ಗರಿಗೆದರುತ್ತದೆ. ರಾಜ್ಯದಲ್ಲಿ ಕನ್ನಡಿಗರ ಮನಸ್ಸು ಗೆದ್ದು ಸಾಮಾಜಿಕವಾಗಿ ಸ್ಪಂದಿಸಿ, ಗುರುತರವಾದ ಕಾರ್ಯ ಮಾಡಿದವರಿಗೆ ಪ್ರಶಸ್ತಿ ಕೊಡಬೇಕಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಪ್ರಶಸ್ತಿಗೆ ಸಾಧಕರ ಆಯ್ಕೆ ಪಾರದರ್ಶಕವಾಗಿರಬೇಕು. ಸಲಹಾ ಸಮಿತಿಯು ಸಾಧಕರ ಸಾಧನೆ ಪರಿಗಣಿಸಿ, ಹಲವಾರು ಬಾರಿ ಪರಾಮರ್ಶಿಸಿ ಪ್ರಶಸ್ತಿಗೆ ಶಿಫಾರಸು ಮಾಡಬೇಕಿದೆ. ಪ್ರಭಾವ ಬಳಸಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವವರ ಬಗ್ಗೆಯೂ ಎಚ್ಚರಿಕೆ ಇರಲಿ.
⇒ಮಹಾಂತೇಶ ರಾಜಗೋಳಿ, ಬೈಲಹೊಂಗಲ
ದೇಶ ವಿಭಜನೆ: ವಾಸ್ತವಾಂಶ ಅರಿಯಿರಿ
ದೇಶ ವಿಭಜನೆ ಎಂದಾಕ್ಷಣ ಬಹುತೇಕರಿಗೆ ನೆನಪಿಗೆ ಬರುವುದು ಗಾಂಧಿ ಮತ್ತು ನೆಹರೂ. ಈ ಇಬ್ಬರು ನಾಯಕರಿಂದಲೇ ಭಾರತ, ಪಾಕಿಸ್ತಾನ ಇಬ್ಭಾಗವಾಯಿತು ಎಂದು ಪ್ರಚಾರ ಮಾಡಿದ್ದಾರೆ; ಮಾಡುತ್ತಲೂ ಇದ್ದಾರೆ. ವಿಭಜನೆಗೂ ಮುನ್ನ ವೈಸರಾಯ್ ವವೆಲ್ ಇರಿಸಿದ ಪ್ರಸ್ತಾಪ, ಚರ್ಚಿಲ್ ಮತ್ತು ಜಿನ್ನಾ ನಡುವೆ ಇದ್ದ ಸಂಬಂಧ; ಬ್ರಿಟಿಷರು ಮತ್ತು ಜಿನ್ನಾ ನಡುವೆ ನಡೆದ ಗೋಪ್ಯ ಸಭೆ ಬಗ್ಗೆ ಯಾವ ಪಠ್ಯಪುಸ್ತಕದಲ್ಲಿಯೂ ಬೆಳಕು ಚೆಲ್ಲದಿರುವುದು ದುರದೃಷ್ಟಕರ. ಇಂತಹ ಎಷ್ಟೋ ನಿಜ ಸಂಗತಿಗಳು ಹೊರಗೆ ಬಂದು ಆಗಿನ ವಾಸ್ತವವನ್ನು ಯುವಜನರಿಗೆ ತಿಳಿಸುವ ಅಗತ್ಯವಿದೆ. ವಿಭಜನೆಯ ವಾಸ್ತವ ಸ್ಥಿತಿಯನ್ನು ‘ದೇಶ ವಿಭಜನೆ: ವಾಸ್ತವವೇನು?’ ಲೇಖನವು (ಲೇ: ಅರವಿಂದ ಚೊಕ್ಕಾಡಿ, ಪ್ರ.ವಾ., ಅ. 11) ಚೆನ್ನಾಗಿ ಕಟ್ಟಿಕೊಟ್ಟಿದೆ.
⇒ಸುರೇಶ ಹಾದಿಮನಿ, ಗದಗ
ಹೊರರಾಜ್ಯದವರಿಗೆ ಕನ್ನಡ ಕಲಿಸಿ
ಜಾಗತಿಕ ಭಾಷೆಗಳಲ್ಲಿ ಹಿಂದಿ ಕೂಡ ಪ್ರಮುಖ ಭಾಷೆ. ಬೇರೆ ಭಾಷೆಗಳನ್ನು ಕಲಿಯುವ ಆಸೆ ಒಳ್ಳೆಯದೇ. ಆದರೆ, ನನ್ನ ಭಾಷೆ; ನನ್ನ ರಾಜ್ಯ ಅಂತ ಬಂದಾಗ ಕನ್ನಡಿಗರಿಗೆ ಕನ್ನಡವೇ ಮೊದಲು. ಕರ್ನಾಟಕದಲ್ಲಿ ನೆಲಸಿರುವ ಬೇರೆ ರಾಜ್ಯ ದವರೊಂದಿಗೆ ನಾವು ಕನ್ನಡದಲ್ಲಿ ಮಾತನಾಡುವುದರಿಂದ ಅವರಿಗೆ ಕನ್ನಡದ ಪದಗಳ ಪರಿಚಯವಾಗುತ್ತದೆ. ಸಣ್ಣ ಸಣ್ಣ ಪದಗಳ ಪರಿಚಯ ಮತ್ತು ಅವುಗಳ ಜೋಡಣೆಯಿಂದಾಗಿ ಅವರಿಗೆ ಕನ್ನಡ ಕಲಿಯಲು ಸುಲಭವಾಗಲಿದೆ.
⇒ಶ್ರೀನಿವಾಸ್ ಚಕ್ರವರ್ತಿ, ಹೊಳಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.