ADVERTISEMENT

ಗುಣಮಟ್ಟ ಖಾತ್ರಿಪಡಿಸಲಿ

ವೆಂಕಟೇಶ ಮಾಚಕನೂರ
Published 27 ಸೆಪ್ಟೆಂಬರ್ 2018, 19:45 IST
Last Updated 27 ಸೆಪ್ಟೆಂಬರ್ 2018, 19:45 IST

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ (ಪ್ರ.ವಾ., ಸೆ. 27). ಇಂಗ್ಲಿಷನ್ನು ಒಂದು ಭಾಷೆಯಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಸುವುದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಪ್ರತಿಯಾಗಿ ಬೆಂಬಲಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಕ್ರಮ ಜಾರಿಯಲ್ಲಿದೆ. ಅದು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇಂಗ್ಲಿಷ್‌ ಕಲಿಕೆ ಸಹಿತ ಒಟ್ಟಾರೆ ಗುಣಮಟ್ಟದ ಶಿಕ್ಷಣ ಕುರಿತು ಸರ್ಕಾರಿ ಶಾಲೆಗಳು ಅನೇಕ ಪ್ರಶ್ನೆಗಳನ್ನು ಎದುರಿಸುತ್ತಿವೆ.

ಗುಣಮಟ್ಟದ ಶಿಕ್ಷಣ ಅಂದರೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಎಂದು ಮುಖ್ಯಮಂತ್ರಿ ಭಾವಿಸಿದಂತಿದೆ. ಕನ್ನಡದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದಿರುವಾಗ ಇಂಗ್ಲಿಷ್‌ ಮಾಧ್ಯಮದಲ್ಲಿ ಅದು ಹೇಗೆ ಸಾಧ್ಯವಾಗುತ್ತದೆ? ಅದೂ ಗ್ರಾಮೀಣ ಪ್ರದೇಶಗಳಲ್ಲಿ! ಗ್ರಾಮೀಣ, ಅರೆನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿನ ಬೋಧನೆಯ ಗುಣಮಟ್ಟವನ್ನು ಸರ್ಕಾರ ಒಮ್ಮೆ ಪರಿಶೀಲಿಸಲಿ. ಆಗ ಕಲಿಕಾ ಮಾಧ್ಯಮದ ವಾಸ್ತವ ಅರಿವಿಗೆ ಬರುತ್ತದೆ.

ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಸುಧಾರಣೆ ಜತೆಗೆ ಗುಣಮಟ್ಟ ಖಾತ್ರಿಪಡಿಸುವ ನಿರ್ದಿಷ್ಟ ಕ್ರಮಗಳನ್ನು ಸರ್ಕಾರ ಮೊದಲು ಪ್ರಕಟಿಸಲಿ. ಇತ್ತ ಕನ್ನಡ, ಅತ್ತ ಇಂಗ್ಲಿಷ್ ಎರಡೂ ಭಾಷೆ ಸಮರ್ಪಕವಾಗಿ ಬಾರದ ಸ್ಥಿತಿ ಮಕ್ಕಳದಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.