ADVERTISEMENT

ಪೊಲೀಸರಿಂದ ವರದಿ ಕೇಳಿದ್ದೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST

ಸಚಿವ ಡಾ. ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರ ನಡುವೆ ರಾಮನಗರದಲ್ಲಿ ನಡೆದ ಮಾತಿನ ಜಟಾಪಟಿಯಿಂದ ವೇದಿಕೆಯಲ್ಲಿ ಉಂಟಾದ ಅಹಿತಕರ ಘಟನೆಯ ಬಗ್ಗೆ ಗೃಹ ಸಚಿವರು ಪೊಲೀಸ್‌ ಅಧಿಕಾರಿಗಳಿಂದ ವರದಿ ಕೇಳಿರುವುದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ರಾಜ್ಯದಲ್ಲಿ ನಡೆದ ಯಾವುದೇ ಘಟನೆಯ ಬಗ್ಗೆ ಒಳಾಡಳಿತದ ಮುಖ್ಯಸ್ಥರಾಗಿ ಗೃಹ ಸಚಿವರು ಘಟನೆಯ ವರದಿ ಪಡೆದು ಅದನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಮುಂದಿನ ಕ್ರಮದ ಬಗ್ಗೆ ಅಭಿಪ್ರಾಯ ಕೇಳುವುದು ಆಡಳಿತದ ಸಂಪ್ರದಾಯ. ಇಲ್ಲಿ ಮುಖ್ಯಮಂತ್ರಿಯವರೇ ಈ ಘಟನೆಯ ಪ್ರತ್ಯಕ್ಷದರ್ಶಿ. ಅವರ ಸಮ್ಮುಖದಲ್ಲಿಯೇ ಘಟನೆ ನಡೆದಿದೆ. ಅವರು ಇದರ ಮರ್ಮ ಅರಿತು, ಮುಜಗರಕ್ಕೊಳಗಾಗಿ, ಪ್ರಾಂತೀಯವಾರು ಗೌರವದ ಧಾಟಿಯಲ್ಲಿ ಮಾತನಾಡಿದ್ದಾರೆ. ಹಿಂದೆಲ್ಲ ಮೈಸೂರು ಭಾಗದ ಮುಖ್ಯಮಂತ್ರಿಯು ಉತ್ತರ ಕರ್ನಾಟಕಕ್ಕೆ ಬಂದಾಗ ಪಕ್ಷಭೇದ ಮರೆತು ಆ ಭಾಗದಲ್ಲಿ ನೀಡುತ್ತಿದ್ದ ಸಭಾ ಗೌರವ ಈ ಭಾಗದಲ್ಲಿ ಇಲ್ಲ ಎಂದಿದ್ದಾರೆ. ಇದು ಈ ನಾಡಿನ ಯಾವುದೇ ಪಕ್ಷದ ಮಂತ್ರಿ ಮಹೋದಯರು ಬಯಸುವ ಅಲಿಖಿತ ಶಿಷ್ಟಾಚಾರ. ಈ ಘಟನೆಯ ಬಗ್ಗೆ ಗೃಹ ಸಚಿವರು ನೇರವಾಗಿ ಮುಖ್ಯಮಂತ್ರಿಯವರನ್ನೇ ಭೇಟಿಯಾಗಿ ವಿವರಣೆ ಪಡೆಯಬಹುದಿತ್ತು. ಇಷ್ಟೆಲ್ಲಾ ಅವಕಾಶ ಇದ್ದರೂ ಘಟನೆಯ ಬಗ್ಗೆ ‍ಪೊಲೀಸರಿಂದ ವರದಿ ಕೇಳಿದ್ದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತಾಗಿದೆ.

– ಗಣಪತಿ ನಾಯ್ಕ್,ಕಾನಗೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT