ADVERTISEMENT

ಆರೋಪಿಗಳ ತಾಯಂದಿರ ಸಮಂಜಸ ನಡೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಡಿಸೆಂಬರ್ 2019, 19:25 IST
Last Updated 3 ಡಿಸೆಂಬರ್ 2019, 19:25 IST

ನಿರ್ಭಯಾ ಪ್ರಕರಣ ಜನರ ಮನಸ್ಸಿನಿಂದ ದೂರವಾಗುವ ಮೊದಲೇ ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ನಡೆದ ರಾಕ್ಷಸೀ ಕೃತ್ಯವನ್ನು ಯಾವ ನಾಗರಿಕ ಸಮಾಜವೂ ಕ್ಷಮಿಸುವುದಿಲ್ಲ. ದೇಶದಾದ್ಯಂತ ನಿತ್ಯ ಹಲವು ಪ್ರಕರಣಗಳು ಘಟಿಸುತ್ತಿದ್ದರೂ ಬೆಳಕಿಗೆ ಬಂದು ಸುದ್ದಿಯಾಗುವುದು ಕೆಲವು ಮಾತ್ರ. ಹೆಣ್ಣನ್ನು ಮಾತೃ ಸ್ವರೂಪದಲ್ಲಿ ಭಾವಿಸುವ, ಗೌರವಿಸುವ ಭಾರತೀಯ ಪರಂಪರೆಯಲ್ಲಿ, ಇಡೀ ಜಗತ್ತಿಗೆ ನಾಗರಿಕತೆಯ ಪಾಠ ಹೇಳಿದ ಈ ನೆಲದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ವಿಷಾದನೀಯ. ನಮ್ಮ ಸಮಾಜ ಇಂತಹ ಸ್ಥಿತಿ ತಲುಪಿರುವುದೇಕೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಹೈದರಾಬಾದ್‌ ಪ್ರಕರಣದ ಆರೋಪಿಗಳ ತಾಯಂ ದಿರು ತಾವೂ ಹೆಣ್ಣಾಗಿ ಇನ್ನೊಬ್ಬ ಹೆಣ್ಣು ಮಗಳ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು, ತಮ್ಮ ಮಕ್ಕಳ ಕೃತ್ಯವನ್ನು ಸಮರ್ಥಿಸಿಕೊಳ್ಳದೆ ನೊಂದವರೊಡನೆ ಧ್ವನಿಗೂಡಿಸಿರುವುದು, ಅವರಿಗೆ ಸೂಕ್ತ ಶಿಕ್ಷೆಯಾಗಲಿ ಎಂದಿರುವುದು ನಿಜಕ್ಕೂ ಸಮಂಜಸವಾಗಿದೆ. ಸರ್ಕಾರ ಇನ್ನಾದರೂ ಕಾನೂನನ್ನು ಬಿಗಿಗೊಳಿಸಲಿ, ವಿಳಂಬ ಮಾಡದೆ ನ್ಯಾಯದಾನ ನೀಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಿ. ಈ ಮೂಲಕ ನಿರ್ಭೀತ, ಸ್ವಸ್ಥ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT