ಕನ್ನಡದಲ್ಲಿಯೂ ಪ್ರಶ್ನೆಪತ್ರಿಕೆ ಇರಲಿ
ಕೇಂದ್ರ ಸರ್ಕಾರವು ಏಕಲವ್ಯ ಮಾದರಿ ವಸತಿಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಇದರಿಂದ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಬಹುತೇಕರು ಹಿಂದಿಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಹೆಚ್ಚೆಂದರೆ ಹತ್ತನೇ ತರಗತಿವರೆಗಷ್ಟೆ ಅಭ್ಯಾಸ ಮಾಡುತ್ತಾರೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆಯಾಗಿದೆ. ಪ್ರಶ್ನೆಪತ್ರಿಕೆಯು ಹಿಂದಿಯಲ್ಲಿ ಇರುವುದರಿಂದ ಅವರಿಗೆ ಉತ್ತರಿಸುವುದು ಸುಲಭ. ಉತ್ತರ ಭಾರತದ ಅಭ್ಯರ್ಥಿಗಳೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ನೀಡುವಂತೆ ರಾಜ್ಯ ಸರ್ಕಾರವು, ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.
–ಸುರೇಂದ್ರ, ಮಾನ್ವಿ
ಐವರು ಪೊಲೀಸ್ ಆಯುಕ್ತರು ಬೇಕಲ್ಲವೆ?
ಗೃಹ ಸಚಿವ ಜಿ. ಪರಮೇಶ್ವರ ಅವರು, ಬೆಂಗಳೂರಿಗೆ ಇಬ್ಬರು ಪೊಲೀಸ್ ಕಮಿಷನರ್ ನೇಮಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಈಗ ಬೆಂಗಳೂರಿಗೆ ಐದು ಪಾಲಿಕೆಗಳು ಇವೆ. ಐವರು ಪೊಲೀಸ್ ಆಯುಕ್ತರನ್ನು ನೇಮಿಸುವುದು ಒಳಿತಲ್ಲವೇ? ಬೆಂಗಳೂರಿಗೆ ಇದು ಅನಿವಾರ್ಯವೂ ಹೌದು.
–ಪ್ರಸನ್ನ ಗಣಪತಿ, ಬೆಂಗಳೂರು
ಕ್ರಿಮಿನಲ್‌ಗಳಿಗೆ ಎಚ್ಚರಿಕೆಯ ಸಂದೇಶ
ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಗೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವು ಊರ್ಜಿತಗೊಂಡರೆ ಇಂತಹ ಕ್ರಿಮಿನಲ್‌ಗಳಿಗೆ ತಕ್ಕಪಾಠ
ಕಲಿಸಿದಂತಾಗುತ್ತದೆ. ಭವಿಷ್ಯದಲ್ಲಿ ಈ ರೀತಿಯ ಪೈಶಾಚಿಕ ಕೃತ್ಯ ಎಸಗಿದರೆ ಶಿಕ್ಷೆ ನಿಶ್ಚಿತ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದಂತಾಗುತ್ತದೆ.
–ಆರ್.ಟಿ. ವೆಂಕಟೇಶ್ ಬಾಬು, ತುಮಕೂರು
ಪಾಠ ಕಲಿಯದ ರಾಜಕೀಯ ಪಕ್ಷಗಳು
ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವು ನೋವು ತಂದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ವಿಜಯ್ ಅವರನ್ನು ನೋಡಲು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಕಾದಿದ್ದಾರೆ. ಆದರೆ, ಅವರು ಬಂದದ್ದು ಆರು ಗಂಟೆ ತಡವಾಗಿ. ಇದರಿಂದ ಅಭಿಮಾನಿಗಳು ತೀವ್ರವಾಗಿ ನಿತ್ರಾಣಗೊಂಡಿದ್ದಾರೆ.
ಸರ್ಕಾರವು ಸೂಕ್ತ ಭದ್ರತೆ ನೀಡಿಲ್ಲವೆಂದು ವಿಜಯ್ ದೂಷಿಸಿದ್ದಾರೆ. ಇದು ತಮ್ಮಿಂದಾದ ಅನಾಹುತದಿಂದ ನುಣುಚಿಕೊಳ್ಳುವ ಯತ್ನವಷ್ಟೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣ ಜನರ ಮನಸ್ಸಿನಿಂದ ದೂರ ಸರಿಯುವ ಮುನ್ನವೇ ಮತ್ತೆ ಇಂತಹದ್ದೇ ಅನಾಹುತ ಸಂಭವಿಸಿದೆ. ಆಯೋಜಕರು ಇನ್ನೂ ಬುದ್ಧಿ ಕಲಿತಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ.
–ಅಶೋಕ ಎನ್.ಹೆಚ್., ಕೋಲಾರ
ಸಮೀಕ್ಷೆ: ಅನಗತ್ಯ ಗೊಂದಲ ಸೃಷ್ಟಿ
ವಿವಿಧ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯುವುದೇ ಸಮೀಕ್ಷೆಯ ಮೂಲ ಉದ್ದೇಶವೆಂದು ಸರ್ಕಾರ ಸ್ಪಷ್ಟಪಡಿಸಿದೆ. ಸಮೀಕ್ಷೆಯ ಪ್ರಶ್ನಾವಳಿಯಲ್ಲಿ 60 ಪ್ರಶ್ನೆಗಳಿವೆ. ಅವುಗಳಲ್ಲಿ ಧರ್ಮ, ಲಿಂಗ, ಜಾತಿ, ಉಪಜಾತಿ, ಮೂಲವೃತ್ತಿ, ಶಿಕ್ಷಣ ಕುರಿತು ಮಾಹಿತಿ ನೀಡಬೇಕಾಗಿದೆ. ಇರುವ 60 ಅಂಶಗಳಲ್ಲಿ ‘ಜಾತಿ’ ಒಂದನ್ನೇ ಗುರಿಯಾಗಿಸಿ ಎಲ್ಲ ಜಾತಿಯ ನಾಯಕರು ಮತ್ತು ಸಂಘ-ಸಂಸ್ಥೆಗಳು ತಮ್ಮ ಸಮುದಾಯದವರಿಗೆ ತಮಗಿಷ್ಟ ಬಂದಂತೆ ಸಲಹೆ ನೀಡುತ್ತಿರುವುದು ಕುಚೋದ್ಯವೇ ಸರಿ. ಇಂತಹ ಸಂದೇಶಗಳ ಹಿಂದೆ ರಾಜಕೀಯ ಹುನ್ನಾರ ಅಡಗಿರುವುದು ಸ್ಪಷ್ಟ. ಅಷ್ಟಕ್ಕೂ ಈ ಸಮೀಕ್ಷೆಯು ಮೀಸಲಾತಿ ನಿಗದಿಪಡಿಸಲು ನಡೆಯುತ್ತಿಲ್ಲ. ಹಾಗಿದ್ದೂ, ಜನರಲ್ಲಿ ಸಮೀಕ್ಷೆ ಬಗ್ಗೆ ಅಸ್ಪಷ್ಟ ಭಾವನೆ ಮೂಡಿಸುವುದು ತಪ್ಪು.
–ಡಿ.ಎಂ. ನದಾಫ್, ಅಫ್ಜಲ್ಪುರ
ಯುಜಿಸಿ ಮಾನದಂಡ ಧಿಕ್ಕರಿಸಬೇಡಿ
ಪ್ರಸ್ತುತ ನಿರುದ್ಯೋಗದ ಸಮಸ್ಯೆ ಯಾವ ಮಟ್ಟಿಗೆ ಇದೆ ಎಂದರೆ ವಿಶ್ವವಿದ್ಯಾಲಯ ಮಟ್ಟದ ಉಪನ್ಯಾಸಕರಾಗಲು ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೂ ಉದ್ಯೋಗ ನೀಡಲು ಸರ್ಕಾರ ಅನಾದರ ತೋರುತ್ತಿದೆ. ಯುಜಿಸಿ ಅರ್ಹತೆ ಹೊಂದಿದವರನ್ನೇ ಪದವಿ ಕಾಲೇಜುಗಳಿಗೆ ಉಪನ್ಯಾಸಕರನ್ನಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಆದರೂ, ತರಗತಿಗಳು ಆರಂಭವಾಗಿ ಸೆಮಿಸ್ಟರ್‌ನ ಅರ್ಧ ಅವಧಿ ಮುಗಿಯುತ್ತಾ ಬಂದರೂ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ.
ಪ್ರಸ್ತುತ ಸರ್ಕಾರವು ಯುಜಿಸಿ ಮಾನದಂಡಗಳನ್ನೇ ಧಿಕ್ಕರಿಸಿದೆ.
ಪಿಎಚ್.ಡಿ, ಎನ್‌ಇಟಿ, ಕೆ–ಸೆಟ್ ಉತ್ತೀರ್ಣರಾದ ಅರ್ಹರನ್ನೇ ನಿರುದ್ಯೋಗಿ
ಗಳನ್ನಾಗಿಸಿರುವ ಸರ್ಕಾರದ ನಡವಳಿಕೆ ಸರಿಯಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಲುವನ್ನು ಸರ್ಕಾರ ತಳೆಯಬೇಕಿದೆ. ಈಗಿರುವ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಬೇಕು. ಜೊತೆಗೆ,ಹಾಲಿ ಇರುವ ಕಾರ್ಯಭಾರವನ್ನು
15 ಗಂಟೆ ಬದಲಾಗಿ ಹಿಂದಿನಂತೆ ವಾರಕ್ಕೆ 8 ಗಂಟೆಗೆ ನಿಗದಿಪಡಿಸಬೇಕಿದೆ.
–ದಾದಾ ಹಯಾತ್ ಬಾವಾಜಿ, ಹಂಪಿ
ನರಳಾಟ
ಬೆಂಗಳೂರಿನ ರಸ್ತೆಗಳಲ್ಲಿ
ಗುಂಡಿಗಳದ್ದೆ ಕಾರುಭಾರ
ರಾಜಕಾರಣಿ, ಅಧಿಕಾರಿಗಳ
ಪರ್ಸೆಂಟೇಜ್ ವ್ಯವಹಾರ
ಇರುವಷ್ಟು ಕಾಲ
ರಾಜಧಾನಿ ಜನರ
ನರಳಾಟಕ್ಕೆ ದೊರೆಯದು
ಪರಿಹಾರ!
–ವೈ. ಯಮುನೇಶ್, ಹೊಸಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.