ADVERTISEMENT

ಇಲ್ಲೊಂದು ಜವಾಬ್ದಾರಿಯುತ ಸರ್ಕಾರವಿದ್ದರೆ...

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 15:57 IST
Last Updated 10 ಏಪ್ರಿಲ್ 2022, 15:57 IST

ಹುಬ್ಬಳ್ಳಿಯಲ್ಲಿ ಆಂಜನೇಯನ ದೇವಸ್ಥಾನದ ಆವರಣದಲ್ಲಿದ್ದ ಮುಸ್ಲಿಮರ ಅಂಗಡಿಗಳ ಮೇಲೆ ಶ್ರೀರಾಮ ಸೇನೆ ಎಂಬ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ಮಾಡಿ ಅವನ್ನು ಧ್ವಂಸ ಮಾಡಿದ ಸುದ್ದಿ ಪ್ರಕಟವಾಗಿದೆ.

(ಪ್ರ.ವಾ., ಏ. 10). ಇದರ ಹಿಂದಿನ ಕಾರಣಗಳು ಮತ್ತು ಮುಂದಿನ ಪರಿಣಾಮಗಳ ಬಗ್ಗೆ ನಿರಂತರ ಚರ್ಚೆ ಮಾಡುತ್ತಾ ಹೋಗಬಹುದು. ಅದಕ್ಕೆ ಬೇಕಾದ ಬುದ್ಧಿ- ಕೌಶಲವುಳ್ಳವರು ನಮ್ಮಲ್ಲಿ ಬೇಕಾದಷ್ಟು ಜನರಿದ್ದಾರೆ. ಇಂತಹ ದಾಳಿ- ಧ್ವಂಸಗಳು ಧೈರ್ಯದಿಂದ ನಡೆಯುವುದು ಬಹುಶಃ ಇವರ ಈ ಕೌಶಲವನ್ನು ನಂಬಿಯೇ. ಆದರೆ ಅದು ಇಲ್ಲೊಂದು ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗೆ ಸಂವಿಧಾನಾತ್ಮಕವಾಗಿ ಬದ್ಧವಾದ ಸರ್ಕಾರವಿದೆ ಎಂಬುದನ್ನು ಮರೆತು, ಕರ್ನಾಟಕವೀಗ ತನ್ನ ಹಿತಕ್ಕಾಗಿ ಸಂವಿಧಾನಾತ್ಮಕ ಆಡಳಿತದಿಂದ ಹೊರಬಂದು ಅರಾಜಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಭಾವಿಸಿ ಮಾಡಬಹುದಾದ ಬೇಜವಾಬ್ದಾರಿ ವಾದ ಮಾತ್ರವಾಗಿರುತ್ತದೆ.

ಆದ್ದರಿಂದ ಈ ರಾಜ್ಯದ ಜನರು ಮೊದಲು ಖಚಿತಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ, ಇದು ಇನ್ನೂ ಸಂವಿಧಾನಬದ್ಧ ಆಡಳಿತದಲ್ಲೇ ಇರುವ ರಾಜ್ಯವಾಗಿದೆಯೇ ಮತ್ತು ಇಲ್ಲೊಂದು ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಬದ್ಧವಾದ ಸರ್ಕಾರವಿದೆಯೇ ಎಂಬುದು. ಏಕೆಂದರೆ ಸ್ವಯಂಘೋಷಿತ ಬಿಡಿ ಗುಂಪುಗಳು ಸಾರ್ವಜನಿಕ ಜೀವನದ ಸರಿ ತಪ್ಪುಗಳನ್ನು ನಿರ್ಧರಿಸಿ ಅದರಂತೆ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಾ ಸಾರ್ವಜನಿಕ ಬದುಕನ್ನು ನಿರ್ಭಯವಾಗಿ ಆಳುವ ಬೆಳವಣಿಗೆ ಈಗ ಅನಿಯಂತ್ರಿತವಾಗಿ ನಡೆದಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಇತ್ತೀಚಿನ ಉದಾಹರಣೆಯಷ್ಟೆ. ಆದ್ದರಿಂದ ಈ ರಾಜ್ಯದಲ್ಲೊಂದು ಜವಾಬ್ದಾರಿಯುತ ಸರ್ಕಾರವಿದ್ದರೆ ಅದರ ಮುಖ್ಯಸ್ಥರೋ ಅಥವಾ ವಕ್ತಾರರೋ ತಾವು ಅಧಿಕಾರಕ್ಕೆ ಬಂದಾಗ ಜನತೆಗೆ ಪ್ರಮಾಣ ಮಾಡಿ ಹೇಳಿದಂತೆ, ಸಂವಿಧಾನಬದ್ಧವಾದ ಸಾರ್ವಭೌಮತೆಯೊಂದಿಗೆ ತಾವಿನ್ನೂ ಹೇಗೆ ಸಕ್ರಿಯವಾಗಿದ್ದೇವೆ ಎಂಬುದನ್ನು ಪ್ರಜೆಗಳಿಗೆ ಸಾಬೀತುಪಡಿಸಬೇಕಾದ ಸಮಯವೀಗ ಬಂದಿದೆ.

ADVERTISEMENT

ಡಿ.ಎಸ್.ನಾಗಭೂಷಣ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.