ADVERTISEMENT

ಈಗೊಮ್ಮೆಯಾದರೂ ಸಹಾಯಕ್ಕೆ ಬನ್ನಿ

​ಪ್ರಜಾವಾಣಿ ವಾರ್ತೆ
Published 8 ಮೇ 2020, 18:36 IST
Last Updated 8 ಮೇ 2020, 18:36 IST

ಕಾರ್ಮಿಕರ ಶೋಷಣೆ ನನಗೆ ಗೊತ್ತು, ಆದರೆ ಅವರನ್ನು ಕಾಲ್ಚೆಂಡಾಗಿ (ಫುಟ್‌ಬಾಲ್‌) ಪರಿವರ್ತಿಸುವುದು ಗೊತ್ತಿರಲಿಲ್ಲ.‌ ಮಾನವೀಯತೆಗೆ ಹೆಸರಾದ ಕರ್ನಾಟಕದ ಮಾನ ಉಳಿಯಬೇಕಾದರೆ ಸರ್ಕಾರವು ಕೂಡಲೇ ಈ ಕ್ರಮಗಳನ್ನು ಕೈಗೊಳ್ಳಬೇಕು: ವಲಸೆ ಕಾರ್ಮಿಕರು ಎಲ್ಲಿ ಕಂಡರೂ (ಎಲ್ಲಿಯಾದರೂ ಉಳಿದುಕೊಂಡಿರುವವರು, ಎತ್ತಂಗಡಿಯ ಭೀತಿಯಲ್ಲಿರುವವರು, ನಡೆದುಕೊಂಡು ಹೋಗುತ್ತಿರುವವರು) ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಗೆ ತಿಳಿಸಲು ಜನರಿಗೆ ಸೂಚನೆ ಕೊಡಬೇಕು.

ಅವರೆಲ್ಲರನ್ನೂ ಸೇವಾ ಸಿಂಧುಗೆ ಎನ್‌ರೋಲ್ ಮಾಡಲು ವಾರ್ಡ್ ಆಫೀಸು, ಪೊಲೀಸ್ ಠಾಣೆಗಳಲ್ಲಿ ಕೌಂಟರ್‌ಗಳನ್ನು ತೆರೆಯಬೇಕು. ಯಾವ ರಾಜ್ಯಕ್ಕೆ ಹೋಗಬೇಕು ಎಂಬುದರ ಕುರಿತು ಸದರಿ ಅಸಂಘಟಿತ ಕಾರ್ಮಿಕರ ಹೇಳಿಕೆ, ಅವರ ಹೆಸರು, ಫೋಟೊ ಅಂತಿಮವಾಗಬೇಕೇ ಹೊರತು ಅನಗತ್ಯ ದಾಖಲಾತಿಗಳನ್ನು ಕೇಳಿ ಹಿಂಸಿಸಬಾರದು. ಅವರು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಕಳಿಸಿ ಸಾಕು.

ಕಾರ್ಮಿಕರು ಸಂಪರ್ಕಕ್ಕೆ ಬಂದ ಕ್ಷಣದಿಂದ ಅವರವರ ಜಾಗಕ್ಕೆ ತಲುಪುವವರೆಗೆ ಊಟದ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜ್ವರದ ಲಕ್ಷಣವಿದೆಯೇ ಎಂಬ ಸ್ಕ್ರೀನಿಂಗ್ ಆಗಬೇಕು. ರೋಗ ಲಕ್ಷಣಗಳಿದ್ದರೆ ವೈದ್ಯಕೀಯ ವ್ಯವಸ್ಥೆ ಆಗಬೇಕು. ಉಳಿದ ಎಲ್ಲರಿಗೂ ಅವರಿರುವ ಜಾಗದಿಂದ ರೈಲು ನಿಲ್ದಾಣದವರೆಗೆ ಉಚಿತ ವಾಹನ ವ್ಯವಸ್ಥೆ ಮಾಡಬೇಕು. ಎಷ್ಟು ಅಗತ್ಯವೊ ಅಷ್ಟೂ ರೈಲುಗಳನ್ನು ಉಚಿತವಾಗಿ ಓಡಿಸಬೇಕು. ಇಷ್ಟು ಕಾಲ ಕಾರ್ಮಿಕರು ನಿಮ್ಮ ಸೇವೆ ಮಾಡಿದ್ದಾರೆ, ಈಗೊಮ್ಮೆಯಾದರೂ ಅವರ ಸಹಾಯಕ್ಕೆ ಬನ್ನಿ.

ADVERTISEMENT

-ಪುರುಷೋತ್ತಮ ಬಿಳಿಮಲೆ,ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.