ಕೃಷಿಭೂಮಿಯು ರೈತರ ಕೈತಪ್ಪಿ ಆ ಮೂಲಕ ಕೃಷಿ ಉತ್ಪಾದನೆಗೆ ಅಪಾಯ ಬರಬಾರದು ಎಂಬ ಸದುದ್ದೇಶದಿಂದ 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಇತರರು ರೈತರಿಂದ ಭೂಮಿ ಖರೀದಿಸಲು ಹಲವಾರುನಿಬಂಧನೆಗಳನ್ನು ವಿಧಿಸಲಾಗಿತ್ತು. ಹಾಗಿದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ರಾಜ್ಯದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಎಕರೆ ಭೂಮಿ ರೈತರ ಕೈತಪ್ಪಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗುತ್ತಿತ್ತು.
ಈಗ ಸರ್ಕಾರ ಈ ನಿಬಂಧನೆಗಳೆಲ್ಲವನ್ನೂ ಗಾಳಿಗೆ ತೂರಿ, ಕೃಷಿ ಭೂಮಿಯ ಮುಕ್ತ ಖರೀದಿಗೆ ಹಣವುಳ್ಳವರಿಗೆ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಭೂಸುಧಾರಣೆಯ ಮೂಲ ಆಶಯಕ್ಕೆ ತಿಲಾಂಜಲಿ ನೀಡಿ, ಅಮೂಲ್ಯ ಕೃಷಿಭೂಮಿ ಅವ್ಯಾಹತವಾಗಿ ರೈತಾಪಿ ವರ್ಗದ ಕೈ ತಪ್ಪುವಂತಾಗುವ ದಾರಿ ಸುಗಮ ಮಾಡಿದೆ.
ಇದಕ್ಕೆ ಪೂರಕವಾಗಿ, ಸ್ವಂತ ಭೂಮಿ ಗೇಣಿ ಸೇರಿಸಿದ ವೆಚ್ಚಕ್ಕೆ ಪ್ರತಿಫಲವೂ ದೊರಕದಷ್ಟು ಅಸಮರ್ಪಕ ಬೆಂಬಲ ಬೆಲೆ ಘೋಷಿಸಿರುವ ಕೇಂದ್ರ ಸರ್ಕಾರವು ರೈತ ಕೃಷಿಯಿಂದ ವಿಮುಖವಾಗುವ ದಿಸೆಯಲ್ಲಿ ಪರೋಕ್ಷ ಒತ್ತಡ ಹೇರಿದೆ. ಜೊತೆಗೆ ಕೃಷಿ ಮಾರುಕಟ್ಟೆ ನಿಯಮವನ್ನು ಸಡಿಲಿಸಿ ಖಾಸಗಿ ವಲಯಕ್ಕೆ ರತ್ನಗಂಬಳಿ ಹಾಸಿದೆ. ಬೇಸತ್ತ ರೈತರು ರಾಜ್ಯದಲ್ಲಿ ಈಗಾಗಲೇ 21 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿಯನ್ನೇ ಮಾಡದೆ ಬೀಳು ಬಿಟ್ಟಿದ್ದಾರೆ.
ಭೂಸುಧಾರಣೆಯ ಬಿಗಿ ಕಟ್ಟುಪಾಡಿನ ನಡುವೆಯೂ ಸುಮಾರು 50 ಲಕ್ಷ ಎಕರೆಯಷ್ಟು ಆಹಾರ ಉತ್ಪಾದನೆ ಕೈಗೊಳ್ಳುವ ಅಮೂಲ್ಯ ಭೂಮಿ ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ರೈತರ ಕೈತಪ್ಪಿದೆ. ದಿನವೊಂದಕ್ಕೆ ಸರಾಸರಿ 55 ಮಂದಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವ ದಾರುಣ ದಾರಿ ಹಿಡಿದಿರುವ ಈ ದೇಶದಲ್ಲಿ ರೈತಾಪಿ ವರ್ಗ ಕಳೆದುಕೊಳ್ಳುವುದು ಏನೂ ಉಳಿದಿಲ್ಲ. ವಿದೇಶಗಳಿಗೆ ಕೈಯೊಡ್ಡಿ ಬೇಡುವ ಆ ಹೀನಾಯ ಪರಿಸ್ಥಿತಿ ದೂರವಾಗಿ, ದೇಶ ಕಷ್ಟಪಟ್ಟು ಸಾಧಿಸಿರುವ ಮಹತ್ವದ ಆಹಾರ ಸ್ವಾವಲಂಬನೆಯ ಬುಡಕ್ಕೆ ಇಂದು ಕೊಡಲಿ ಏಟು ಬೀಳುತ್ತಿರುವುದನ್ನು ವಿವೇಕಶೂನ್ಯ ಆಡಳಿತವರ್ಗ ಗಮನಿಸುವುದು ಕಷ್ಟ. ಆದರೆ ನಾವು ನೀವು?
-ಪ್ರಕಾಶ್ ಕಮ್ಮರಡಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.