ADVERTISEMENT

ದಲಿತ ಪದ ಬಳಕೆಗೆ ನಿರ್ಬಂಧ: ಅನಗತ್ಯ ವಿವಾದ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 16:42 IST
Last Updated 12 ಜೂನ್ 2020, 16:42 IST

ದಲಿತ ಪದ ಬಳಕೆಗೆ ಸಂಬಂಧಿಸಿದಂತೆ ಡಾ. ರಾಜೇಂದ್ರ ಚೆನ್ನಿ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜೂನ್‌ 12) ನುಡಿಚೋರತನ, ಪದವಿನಾಶ ಇತ್ಯಾದಿ ಭಾರದ ಶಬ್ದಗಳಿಂದ ಇಲ್ಲದ ವಿವಾದವೊಂದನ್ನು ಎಬ್ಬಿಸಿ ನಿಲ್ಲಿಸುತ್ತಿದ್ದಾರೆ.

ಸರ್ಕಾರಿ ಆದೇಶ, ಪತ್ರ ವ್ಯವಹಾರ, ಅಹವಾಲು, ಪ್ರಮಾಣಪತ್ರಗಳಲ್ಲಿ ದಲಿತ ಅನ್ನುವ ಶಬ್ದ ಬಳಸುವಂತಿಲ್ಲ, ಸರ್ಕಾರಿ ಪರಿಭಾಷೆಯಂತೆ ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST) ಎಂದು ಬಳಸಬೇಕು. ಬಾಬಾಸಾಹೇಬರು ರೂಪಿಸಿದ ಸಂವಿಧಾನದಲ್ಲಿಯೂ ದಲಿತ ಎಂಬ ಶಬ್ದ ಬಳಸದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸಲಾಗಿದೆ.

ಇದನ್ನು ಪ್ರಸ್ತಾಪಿಸಿಯೇ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶದ ಹೈಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಅದರ ಅನ್ವಯವೇ ರಾಷ್ಟ್ರಪತಿ ಕಚೇರಿಯ ನಿರ್ದೇಶನದಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿ– ಪಂಗಡ ಎಂದು ಬಳಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ.

ADVERTISEMENT

ಇದು ಸರ್ಕಾರದ ವ್ಯವಹಾರಕ್ಕೆ ಮಾತ್ರ ಅನ್ವಯ ಆಗುತ್ತದೆ, ಖಾಸಗಿ ಹಾಗೂ ವ್ಯಕ್ತಿಗತ ವಿಷಯಗಳಲ್ಲಿ ದಲಿತ ಪದ ಬಳಸಬಹುದು ಎಂದು ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ, ದಲಿತ ಸಂಘಟನೆಗಳಿಗಾಗಲೀ ದಲಿತ ಲೇಖಕರಿಗಾಗಲೀ ಈ ಸುತ್ತೋಲೆ ಯಾವ ರೀತಿಯಲ್ಲೂ ಬಾಧಿಸುವುದಿಲ್ಲ. ದಲಿತ ಎಂಬ ಶಬ್ದ ಐತಿಹಾಸಿಕ ಕಾರಣಗಳಿಗಾಗಿ ಒಂದು ಭಾವನಾತ್ಮಕ ವಿಷಯ ಎಂಬುದು ನಿಜ. ಆದರೆ, ಅದನ್ನು ಬಳಸಿಕೊಂಡು, ಸಮಾಜವನ್ನು ಕಾರಣವಿಲ್ಲದೇ ಎತ್ತಿಕಟ್ಟಲು ಹವಣಿಸುವುದು ಅನೈತಿಕ.
-ವಾದಿರಾಜ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.