ADVERTISEMENT

ಸತ್ಯಾಸತ್ಯತೆ ಎತ್ತಿ ಹಿಡಿಯಲಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 19:31 IST
Last Updated 16 ಅಕ್ಟೋಬರ್ 2020, 19:31 IST

ಸುದ್ದಿವಾಹಿನಿಗಳ ವಾರದ ರೇಟಿಂಗ್ (ಟಿಆರ್‌ಪಿ) ಅನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಿದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ (ಬಾರ್ಕ್) ನಿರ್ಧಾರ ಸರಿಯಾಗಿದೆ. ಕೆಲವು ತಿಂಗಳುಗಳ ಹಿಂದೆಯೇ ಈ ನಿರ್ಧಾರಕ್ಕೆ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ದೇಶದಲ್ಲಿ ಕೊರೊನಾ ಪ್ರಾರಂಭವಾದ ಕಾಲದಿಂದ ಕೆಲವು ಮಾಧ್ಯಮಗಳ ವರ್ತನೆಯಂತೂ ತಾರಕಕ್ಕೇರಿತ್ತು. ಪ್ರಮುಖರ ಸಾವು, ನೋವಿನ ಪ್ರಕರಣಗಳನ್ನುಅವು ‘ನಮ್ಮಲ್ಲೇ ಮೊದಲು’ ಎಂದು ಪೈಪೋಟಿಯಿಂದ ಬಿಂಬಿಸಿಕೊಂಡವು. ಸರ್ಕಾರ ಕೆಲವು ನಿರ್ಧಾರಗಳನ್ನುಬದಲಾಯಿಸಿದಾಗಲೂ ‘ಅದೆಲ್ಲ ನಾವು ಕಾರ್ಯಕ್ರಮ ಪ್ರಸಾರ ಮಾಡಿ ಒತ್ತಡ ಹಾಕಿದ್ದರಿಂದಲೇ ಆಗಿದ್ದು’ ಎಂದುಬಿತ್ತರಿಸಿಕೊಂಡವು. ಅದರಲ್ಲೂ ಪ್ರಣವ್ ಮುಖರ್ಜಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬದುಕಿದ್ದಾಗಲೇ ಅವರ ನಿಧನದ ಸುದ್ದಿ ಹರಿದಾಡಿದ್ದು, ಎಸ್‌ಪಿಬಿ ಅವರೇ ‘ಮಾಧ್ಯಮದ‌ ಇಂತಹ ಪ್ರಸಾರ ತೀವ್ರ ನೋವುಂಟು ಮಾಡಿದೆ’ ಎಂದು ಒಂದು ವಿಡಿಯೊ ಮೂಲಕ ಬೇಸರ ವ್ಯಕ್ತಪಡಿಸಿದ್ದು ಅಧ್ವಾನದ ಪರಮಾವಧಿ.

ಕೆಲವು ಟಿ.ವಿ ಚಾನೆಲ್‌ಗಳು ಕೆಲವೊಮ್ಮೆ ಸತ್ಯಾಸತ್ಯತೆಯನ್ನು ಅರಿಯದೆ ಟಿಆರ್‌ಪಿಗೋಸ್ಕರ‌‌ ಆತುರದಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುವುದು ವ್ಯಕ್ತಿಯ ತೇಜೋವಧೆಗೆ, ಕೌಟುಂಬಿಕ ಮನಸ್ತಾಪಕ್ಕೆ ಕಾರಣವಾಗುತ್ತದೆ. ಸಂವಿಧಾನದ ನಾಲ್ಕನೇ ಅಂಗ ಎಂದು ಬಿಂಬಿಸಿಕೊಳ್ಳುವ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಎತ್ತಿ ಹಿಡಿಯುವಕೆಲಸ ಮಾಡಬೇಕು. ಅದುಬಿಟ್ಟು ದಿಕ್ಕು ತಪ್ಪಿಸುವ, ಅನುಮಾನ ಮೂಡಿಸುವ ಕೆಲಸ ಅವುಗಳಿಗೆ ಶೋಭೆತರುವುದಿಲ್ಲ.

- ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.