ADVERTISEMENT

‘ಶಿಕ್ಷಕಸ್ನೇಹಿ’ ನೀತಿ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:59 IST
Last Updated 24 ಸೆಪ್ಟೆಂಬರ್ 2019, 19:59 IST

ಶಿಕ್ಷಕರಿಗೆ ರಜೆರಹಿತ ಪದ್ಧತಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ (ಪ್ರ.ವಾ., ಸೆ. 24). ಶಿಕ್ಷಣ ಎನ್ನುವುದು ಮಗುವಿನ ಮಾನಸಿಕ ಬಂಧುತ್ವದೊಂದಿಗೆ ನಡೆಯುವ ಪ್ರಕ್ರಿಯೆ. ಅದಕ್ಕೆ ಸಂತಸ, ವಿಶ್ರಾಂತಿ, ನಿರಾಳತೆ ಬೇಕು.

ಇದಕ್ಕಾಗಿಯೇ ವೈಜ್ಞಾನಿಕವಾದ ರೀತಿಯಲ್ಲಿ ಕಲಿಕಾ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿರುತ್ತದೆ. ಶಿಕ್ಷಕರು ಹೆಚ್ಚು ಚಟುವಟಿಕೆಯಿಂದ ಇರಲು ಮತ್ತು ಅಧ್ಯಯನಶೀಲರಾಗಲು ಅನುವಾಗುವಂತೆ ಶಾಲೆಯಲ್ಲಿ ಇಂತಿಷ್ಟು ಅವಧಿಯನ್ನು ಬೋಧಿಸಿ, ವಿಶ್ರಾಂತಿ ಪಡೆದು ಮತ್ತೆ ಬೋಧಿಸಲು ಅವಕಾಶವಿರುತ್ತದೆ (ಶಿಕ್ಷಕರ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂಬುದು ಬೇರೆ ಮಾತು).

ಶಿಕ್ಷಕ ಸೇವೆಯು ಮಾನಸಿಕವಾಗಿ ಹೆಚ್ಚು ಕಾರ್ಯತತ್ಪರತೆಯನ್ನು ಬೇಡುತ್ತದೆ. ಹೀಗಾಗಿ ನಿರಂತರವಾಗಿ ಕೆಲಸದಲ್ಲಿ ತೊಡಗಿಕೊಂಡರೆ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ನಿರಂತರವಾಗಿ ಕೆಲಸ ಮಾಡಿ, ಬಳಲಿ ಬೋಧಿಸುವುದಕ್ಕಿಂತ, ಇರುವ ಸಮಯದಲ್ಲಿ ನಿರಾಳವಾಗಿ ಬೋಧಿಸುವುದಕ್ಕೆ ಅವಕಾಶ ಸಿಗಬೇಕು. ಶಿಕ್ಷಕರ ಮೇಲೆ ಈಗಾಗಲೇ ಹಲವು ಕಾರ್ಯಗಳ ಒತ್ತಡ ಇದೆ.

ADVERTISEMENT

ರಜಾ ಅವಧಿಯಲ್ಲಿ ಪುಸ್ತಕ ಅಧ್ಯಯನ, ಬರವಣಿಗೆ, ಪ್ರವಾಸ, ಸಂಶೋಧನೆಗಳಲ್ಲಿ ತೊಡಗಿಕೊಂಡು ಅಪ್‌ಡೇಟ್‌ ಆಗುವುದಕ್ಕೆ ಅವಕಾಶ ಇರುತ್ತದೆ. ಹೀಗಾಗಿ ಶಿಕ್ಷಕರಿಗೆ ರಜೆರಹಿತ ಪದ್ಧತಿ ಜಾರಿಗೊಳಿಸುವ ಚಿಂತನೆಯನ್ನು ಕೈಬಿಟ್ಟು ಇಲಾಖೆಯು ‘ಶಿಕ್ಷಕಸ್ನೇಹಿ’ಯಾಗಿ ವರ್ತಿಸಲಿ.

-ಪ್ರಾಣೇಶ್ ಪೂಜಾರ್, ಗಿಣಗೇರಾ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.